Tuesday, August 11, 2020

ಸೈಲೆನ್ಸ್ ಪ್ಲೀಸ್....


ಬೆಳಗ್ಗೆ ಸುಮಾರು ಆರಕ್ಕೆ ಎದ್ದರೆ, ಮಕ್ಕಳಿಬ್ಬರನ್ನೂ ಶಾಲೆಗೆ ಕಳಿಸುವವರೆಗೂ ಗಡಿಯಾರ ನೋಡಲು ಕೂಡ ಪುರುಸೊತ್ತು ಇರುತ್ತಿರಲಿಲ್ಲ. ನಾ ಎದ್ದು ಗೀಸರ್ ಹಾಕಿ, ಅಕ್ಕಿ-ತರಕಾರಿ ಬೇಯಲು ಕುಕ್ಕರಿಕೆ ಹಾಕಿ, ಚಪಾತಿಗೆ ಹಿಟ್ಟು ಕಲೆಸಿ, ಅನ್ನಕ್ಕೆ ಮತ್ತು ಪಲ್ಯಕ್ಕೆ ಒಗ್ಗರಣೆ ಹಾಕಿ, ಮಕ್ಕಳನ್ನು ಎಬ್ಬಿಸಿ, ಅವರಿಗೆ ಹಾಲು ಕಾಫಿಗಳನ್ನು ಕೊಟ್ಟು, ಸ್ನಾನಕ್ಕೆ ಕಳಿಸಿ, ಸ್ನಾನದಿಂದ ಬರುವುದರೊಳಗೆ  ಯುೂನಿಫಾರಂ ಇಸ್ತ್ರಿಮಾಡಿ, ಕೂಗುತ್ತಿರುವ ಕುಕ್ಕಕ್  ಬಾಯಿಮುಚ್ಚಿಸಿಸಲು ಅಡಿಗೆ ಮನೆಗೆ ಹಾರಿ, ಘಳಿಗೆ ಘಳಿಗೆಗೂ ಪ್ರೆಶರ್ ಇಳಿದಿದೆಯೇ ಎಂದು ಕುಕ್ಕರಿನ ವೈಟ್ ಎತ್ತಿ-ಎತ್ತಿ ನೋಡುತ್ತಾ, ಚಪಾತಿಗಳ ಒತ್ತಿ, ಹೆಂಚಿನ ಮೇಲೆ ಬೇಯಿಸಿ, ಅಷ್ಟರೊಳಗೆ ಕುಕ್ಕರಿನ ಪ್ರೆಶರನ್ನು ಬಲವಂತದಿಂದ ತೆಗೆದು, ಬೆಂದ ತರಕಾರಿಗೆ ಒಗ್ಗರಣೆ ಕಲಸಿ ಉಪ್ಪು ಸಾಕೇ ಎಂದು ಮರೆಯದೇ ಪರೀಕ್ಷಿಸಿ, ಡಬ್ಬಗಳಿಗೆ ತುಂಬಿ, ನೀರಿನ ಬಾಟಲ್ ತುಂಬಿಸಿ, ಚಮಚ ಕರವಸ್ತ್ರದ ಸಮೇತ ಚೀಲದೊಳಿರಿಸಿ, ಯೂನಿಫಾರಂ ಧರಿಸಿ ಬಂದ ಮಕ್ಕಳಿಗೆ ತಲೆಬಾಚಿ ಹಣೆಗಿಟ್ಟು, ಬಲವಂತದಿಂದ ತಿಂಡಿ ತಿನ್ನಿಸಿ, ಪುಸ್ತಕದ ಚೀಲದಲ್ಲಿ ವೇಳಾ ಪಟ್ಟಿಗೆ ಸರಿಯಾದ ಪುಸ್ತಕಗಳಿವೆಯೇ ಎಂದು ಖಾತ್ರಿ ಪಡಿಸಿಕೊಂಡು, ತಯಾರಾದ ಮಕ್ಕಳನ್ನು ಬಸ್ ನಿಲ್ದಾಣಕ್ಕೆ ಒಯ್ದು, ಬಸ್ ಚಾಲಕನಿಗೆ ಫೋನಾಯಿಸಿ ಇನ್ನೂ ಬರಲಿಲ್ಲವೇಕೆಂದು ದಬಾಯಿಸಿ, ನಂತರ  ಮಕ್ಕಳಕೆನ್ನೆಗೆ ಮುತ್ತನೊತ್ತಿ ಶಾಲೆಯ ಬಸ್ ಹತ್ತಿಸಿ ಮನೆಗೆ ಬಂದು ಬೆಳಿಗ್ಗೆ ಮಾಡಿಟ್ಟ ಕಾಫಿಯನ್ನು ಬಿಸಿ ಮಾಡಿ ಹೀರುತ್ತಾ ನ್ಯೂಸ್ ಪೇಪರ್ ಓದುತ್ತಿದ್ದ  ದಿನಗಳೆಲ್ಲಿ

ಸಾಮಾನ್ಯವಾಗಿ ಶ್ರಾವಣ ಮಾಸದ ಹಬ್ಬಗಳ ಗಡಿಬಿಡಿಯಲ್ಲಿ ಮಕ್ಕಳಿಗೆ ಊಟದ ಡಬ್ಬಿ ಅವರೊಂದಿಗೆ ಕಳಿಸಲು, ವೇಳಾಪಟ್ಟಿ ಪರಿಶೀಲಿಸಲು ಒಮ್ಮೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಆಗ  ಪುಸ್ತಕ ಮರೆತಿದ್ದಾರೆಂದೋ, ಊಟದಡಬ್ಬಿ ಕೊಡಲೆಂದೋ ಹೀಗೆ ಯಾವುದಾರೂ ನೆಪದಿಂದ ಶಾಲೆ ಬಳಿಗೆ ಹೋಗುವುದು ನನಗೆ ಬಲು ಇಷ್ಟವಾಗುತ್ತಿತ್ತುಹೋದ ಕೆಲಸ ಮುಗಿದರೂ ಮಕ್ಕಳು ಆವರಣದೊಳಗೆ ಬರುವುದನ್ನೇ ಕಾಯುತ್ತಾ, ಸಾಲಿನಲ್ಲಿ ಬರುವ ನನ್ನ ಮಕ್ಕಳು ನಾನಿರದ ಸಮಯದಲ್ಲಿ ಹೇಗಿರುತ್ತಾರೆಂದು ನೋಡುವ ಕುತೂಹಲ. ಸ್ನೇಹಿತರೊಂದಿಗೆ ನಗುತ್ತಾ, ಚೇಷ್ಟೆ ಮಾಡುತ್ತಾ, ಟೀಚರನ ಕಣ್ಣೋಟಕ್ಕೆ ತಕ್ಷಣಕ್ಕೆ ಹೆದರಿ, ಮರು ಕ್ಷಣಕ್ಕೆ  ತರಲೆ ಮಾಡುವ...ಮುದ್ದು ಮಕ್ಕಳನ್ನು ನೋಡುವುದೊಂದು ಸಂಭ್ರಮ. ಇವರುಗಳ ದಿನವಿಡೀ ಸಂಭಾಳಿಸುವ ಶಿಕ್ಷಕರಿಗೆ ಕೃತಜ್ಞತೆಯ ನಮನ. ಮತ್ತೂ ಯಾರಾದರೂ ನೀವು ಅಭಿರಾಮನ ತಾಯಿಎಂದು ಗುರುತಿಸಿ ಮಾತನಾಡಿಸಿ ಮಗನಬಗ್ಗೆ ಒಂದು ಒಳ್ಳೆ ಮಾತ್ಹೇಳಿದರಂತೂ ಕಿರೀಟ ತೊಡಿಸಿದ ಸಂಭ್ರಮ. ಶಾಲೆಯಲ್ಲಿರುವ ಪ್ರತಿಕ್ಷಣವೂ ನನ್ನ ಬಾಲ್ಯದ ನೆನಪು....ನಾನೂ ಹೀಗೆ ಬಾಯಾಳಿಯಾಗಿದ್ದೆ, ನನಗೂ ಅಷ್ಟೇ ಜಡೆ ಇತ್ತು, ನಾನೂ ಯಾವತ್ತೂ ಪೂರ್ತಿ ಡಬ್ಬಿ ಖಾಲಿ ಮಾಡಿಲ್ಲ...ನಮ್ಮ ಟೀಚರ್ ಕೂಡ ಹೀಗೆ ಇದ್ದರು.... ಉಲ್ಲಾಸಕರ ನೆನಪುಗಳು ಮನೆಗೆ ಹಿಂದಿರುಗಿದರೂ ಮನ ತುಂಬಿರುತ್ತಿದ್ದವು

ಈಗ ಮಕ್ಕಳನ್ನು ಶಾಲೆಗೆ ಕಳಿಸವ ಆತುರವಿಲ್ಲ, ಅವರ ಚಟುವಟಿಕೆಗಳ ನೋಡುವ ಕಾತರವೂ ಇಲ್ಲ. ಶುಲ್ಕ ಭರಿಸಲೆಂದು ಶಾಲೆಯ ಬಳಿ ಹೋದರೆ, ಏಳೆಂಟು ಗೇಟ್ಗಳಿರುವ ಬೃಹತ್ ಶಾಲಾವರಣದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ. ಸದಾ ಮಕ್ಕಳ ಕಲರವದಿಂದಿದ್ದ ಕೊಠಡಿಗಳು ಮೌನ. ಸದಾ ‘silence please’ , ‘ be quite’ ಮಂತ್ರ ಹೇಳುವ ಶಿಕ್ಷಕರ ಸದ್ದಿಲ್ಲ. ಮಕ್ಕಳು ತರ್ಲೆ ಮಾಡಿದ್ದು, ಹಾಡಿದ್ದು, ಕುಣಿದಿದ್ದು, ಚಾಡಿ ಹೇಳಿದ್ದು...ಬಹುಮಾನ ಗಳಿಸಿದ್ದು, ಪರೀಕ್ಷೆ ಬರೆದಿದ್ದುಈಗ ನೆನಪಷ್ಟೇ. ಆನಲೈನ್ ತರಗತಿಗಳನ್ನು ಸಂಸ್ಥೆಗಳು ನಡೆಸುತ್ತಿದ್ದರೂ ಶಿಕ್ಷಣದ ಗಂಭೀರತೆ ಕುಸಿಯುತ್ತಿದೆ. ಮಕ್ಕಳಿಗೂ ಮನೆಯಿಂದ ತರಗತಿಗಳಲ್ಲಿ ಕೇಂದ್ರೀಕರಿಸುವುದು ಸುಲಭವಲ್ಲ. ಮನೆಯಲ್ಲಿ ಪಾಠ ಕೇಳಲು ತೊಂದರೆಗಳು ಹೆಚ್ಚು. ಫೋನ್ ರಿಂಗಾಗುವುದು, ಕುಕ್ಕರ್ ವಿಶಲ್ ಶಬ್ದಕೊರಿಯರ್, ಪಕ್ಕದ ಮನೆಯವರ ಲೌಡ್ ಸ್ಪೀಕರಿನ ಹಾಡು.. ಬೀದಿಯಲ್ಲಿ ಮಾರಲು ಬರುವ ತರಕಾರಿ ಹೂ-ಹಣ್ಣುಮನೆಯ ಹಿರಿಯರು ನೋಡುವ ಕೊರೋನ ಸುದ್ದಿ...ಹತ್ತಿರದ ರಸ್ತೆಗಳಲ್ಲಿ ಗುಯ್ ಗುಡುವ  ಆ್ಯಂಬುಲೆನ್ಸ್...  ಅಷ್ಟಲ್ಲದೇ ಹೋಗಿ ಬರುವ ನೆಟ್ವರ್ಕ. ಗಂಟೆಗಟ್ಟಲೇ ear plugs ಉಪಯೋಗಿಸುವುದು ಅಪಾಯ. ಇದೇ ಸವಾಲು ಶಿಕ್ಷಕರಿಗೂ. ಮನೆಯು ಮೊದಲ ಪಾಠ ಶಾಲೆಯಷ್ಚೇ. ಮಕ್ಕಳ ಪ್ರಬುದ್ಧತೆಯ ಬೆಳವಣಿಗೆಗೆ ಸಂಘದ ಸಂಪರ್ಕ ಬೇಕು. ಮಕ್ಕಳು ಕಲಿಯುವುದೇ ಅನುಕರಣೆಯಿಂದ. ‘ನೋಡಿ ಕಲಿ ಮಾಡಿ ತಿಳಿಶಾಲೆಯ ಮೂಲ ಮಂತ್ರ. ಜೀವನದ ಶಿಸ್ತಿನ ಪಾಠಕ್ಕೆ ಶಾಲೆ ಅತ್ಯಗತ್ಯ.

ಶಿಕ್ಷಣದ ಗುರಿ ಬರೀ ಅಂಕಗಳಲ್ಲ. ಅದು ಸಂಪೂರ್ಣ ವ್ಯಕ್ತಿತ್ವದ ಅಭಿವೃದ್ಧಿ. ಪ್ರತ್ಯಕ್ಷ ಉದಾಹರಣೆಗಳೊಂದಿಗೆ ಪುಸ್ತಕದ ಪಾಠವೇ ಪವರ್ ಪಾಯಿಂಟ್ ಪ್ರಸೆಂಟೇಶನ್ಗಿಂತ ಸೂಕ್ತ. ಆದರೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಕಡ್ಡಾಯ ಮಕ್ಕಳಿಗೆ . ಈಗ ಮಕ್ಕಳ ಮಾನಸಿತ ಸ್ವಸ್ಥ್ಯವನ್ನು ಕಾಪಾಡುವ ಕರ್ತವ್ಯ ಪೋಷಕರದು. ಕೊರೋನಾ ಸಮುದಾಯಕ್ಕೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮನೆಯೇ ಸದ್ಯಕ್ಕೆ ಕ್ಷೇಮ. ಇದೂ ಒಂದು ಪಾಠ