Sunday, February 15, 2026

ಯಾಗಂಟಿ

 ಭಕ್ತಿ, ಮುಕ್ತಿ, ನಿಗೂಢತೆ, ಇತಿಹಾಸ, ಸೌಂದರ್ಯ, ಅನನ್ಯತೆಗೆ, ಸಾಹಸ, ಪೌರಾಣಿಕತೆ.. ಹೀಗೆ ಎಲ್ಲಾ ಪ್ರಕಾರದ ಕುತೂಹಲವನ್ನು ತಣಿಸುವ ಈಶ್ವರನ ದೇವಾಲಯ ಒಂದಿದೆ. ದೇವಾಲಯ ಈಶ್ವರನಿಗಷ್ಟೇ ಅಲ್ಲ, ಪಾರ್ವತಿಗೂ ಕೂಡ. ಶಿವ ಪಾರ್ವತಿಯರಲ್ಲಿ ಏಕತೆಯನ್ನು ಬಿಂಬಿಸುವ ಉಮಾಮಹೇಶ್ವರ ದೇವಸ್ಥಾನ. ಕಾಳಿದಾಸನ ವಾಗರ್ಥವಿವಶ್ಲೋಕದ ಸ್ಸಂಪೂರ್ಣ ಅನ್ವಯವಾಗುವಂಥ ಲಿಂಗ. ಸುಮಾರು ಒಂದೂವರೆ ಅಡಿ ಲಿಂಗದ ಮುಖದಲ್ಲಿ ಉಮಾ ಮಹೇಶ್ವರ ಇಬ್ಬರದೂ  ಸುಂದರ ಕೆತ್ತನೆ ಇದೆ. ದೇವಸ್ಥಾನದ ಪ್ರವೇಶವೇ ವಿಶೇಷ ಅನುಭವ. ದೇವಸ್ಥಾನದ ಪಾರ್ಕಿಂಗ್ ದಾಟಿದರೆ ಮೊದಲು ಸಿಗುವುದೇ ವಿಶಾಲವಾದ ಪುಷ್ಕಣಿ, ಪುಷ್ಕರಣಿಗೆ ನಂದಿಯ ಬಾಯಿಂದ ಸದಾ ನೀರು ಬೀಳುತ್ತಿರುತ್ತದೆ. ಪುಷ್ಕರಣಿಯನ್ನು ನೋಡಿ ಹೊರಬಿದ್ದರೆ, ವಿಶಾಲವಾದ ಸುಮಾರು ಐವತ್ತಕ್ಕೂ ಮೀರಿ ಮೆಟ್ಟಿಲುಗಳು, ತಲೆಎತ್ತಿ ನೋಡಿದರೆ ತುದಿಯಲ್ಲಿ ಬೃಹತ್ ಗೋಪುರ. ಗೋಪುರದ ಹಿಂಭಾಗದಲ್ಲಿ ಕಾಣುವ ಬೆಟ್ಟಗಳು. ಮೆಟ್ಟಿಲು ಹತ್ತಿ  ಗೋಪುರದ ಹೆಬ್ಬಾಗಿಲಿಂದ ಒಳ ಹೋಗಿ ನಂದಿ ಧ್ವಜವನ್ನು ಬಳಸಿ, ಸಾಲಿನಲ್ಲಿ ಹೋದರೆ ಉಮಾಮಹೇಶ್ವರನ ಗರ್ಭಗುಡಿ. ಮುಖಮಂಟಪವು ಪ್ರಶಾಂತ ಧ್ಯಾನ ಮಂದಿರ. ದೇವಾಲಯವನ್ನು ಪ್ರದಕ್ಷಿಣೆ ಮಾಡಿದರೆ ಕೈಲಾಸದ ಮರು ಸೃಷ್ಟಿಯೇನೂ ಎಂದೆನಿಸುವ ಗಿರಿ ಶ್ರೇಣಿಯ ದರ್ಶನವಾಗುತ್ತದೆ. ಮುಖಮಂಟಪದ ಮುಂಭಾಗದಲ್ಲಿ, ಬೃಹತ್ ನಂದಿ ಇದೆ . ನಂದಿ ಪ್ರತಿ ಇಪ್ಪತ್ತು ವರ್ಷಕ್ಕೊಮ್ಮೆ ಒಂದಿಂಚು ಬೆಳೆಯುವುದಂತೆ. ಪುರಾತತ್ವ ಇಲಾಖೆಯವರು ಅಳತೆಯನ್ನು ದಾಖಲಿಸುತ್ತಾರೆ. ಕಾಲಜ್ಞಾನಿ ವೀರಬ್ರಹ್ಮ  ಅವರು ಹೇಳಿರುವ ಕಲಿಯುಗಾಂತ್ಯವನ್ನು ಸೂಚಿಸುವ ನಂದಿ ಇದೆ. ಅದಲ್ಲದೆ, ಅಲ್ಲೊಂದು ಬೆಟ್ಟದಮೇಲೆ ಆಕಾಶದೀಪ. ಪ್ರತಿಸಂಜೆ  ದೀಪವನ್ನು ಹಚ್ಚುತ್ತಾರೆ. ಮುಖ್ಯದ್ವಾರದ ಬಲದಲ್ಲಿ ಒಂದು ವೆಂಕಟೇಶ್ವರನ ಗುಹೆ ಇದೆ. ಕಾಲಜ್ಞಾನಿ ವೀರಬ್ರಹ್ಮಂ ಅವರ ಗುಹೆಯೂ ಇದೆ ಗುಹೆಗಳಿಗೆ ಹೋಗುವುದು ಸಾಹಸಕ್ಕೆ  ಸವಾಲೆ. ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.


ಉಮಾ ಮಹೇಶ್ವರನ ಪ್ರತಿಷ್ಠಾಪನೆ ಮಾಡಿದವರು ಅಗಸ್ತ್ಯಮುನಿಗಳು. ಅವರಿಗೆ ವೆಂಕಟೇಶ್ವರನ ಪ್ರತಿಷ್ಠಾಪನೆ ಮಾಡಬೇಕೆಂಬ ಸಂಕಲ್ಪ ವಿತ್ತು. ವೆಂಕಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ತರಿಸಿದರು. ಆದರೆ ವಿಗ್ರಹದ ಕಾಲಿನ ಹೆಬ್ಬೆರಳಿನ ತುದಿ ಭಿನ್ನವಾಗಿತ್ತು. ಭಿನ್ನವಾದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗದೆ, ಈಶ್ವರನನ್ನು ತಪಸ್ಸು ಮಾಡಿದರು. ಸ್ವಯಂ ಈಶ್ವರನೇ ಕೈಲಾಸಕ್ಕೆ ಸಮಾವಾದ ಜಾಗದಲ್ಲಿ ತಾನೇ ಸತಿ ಸಮೇತ ನೆಲೆಸುವೆನೆಂದು ವರವಿತ್ತನು. ಉಮಾ ಮಹೇಶ್ವರನಾಗಿ ನೆಲೆಸಿದನು. ಭಿನ್ನವಾದ ವೆಂಕಟರಮಣನನ್ ವಿಗ್ರಹವನ್ನು ಗುಹೆಯಲ್ಲಿಟ್ಟಿದ್ದಾರೆ. ಹಾಗಾಗಿ ಇದು ಅಪರೂಪದ ಶಿವ ಕೇಶವ ಕೇತ್ರವೂ ಹೌದು


ಇನ್ನೊಂದು ಕಥೆ. ಚಿತ್ತಪ್ಪನೆಂಬ ಮಹಾ ಶಿವ ಭಕ್ತನಿದ್ದ. ಉಮಾಮಹೇಶ್ವರನನ್ನು ಸತತ ಪೂಜಿಸುತ್ತಿದ್ದ. ಇವನ ಭಕ್ತಿಗೆ ಮೆಚ್ಚಿ ಈಶ್ವರನು ಹುಲಿಯರೂಪದಲ್ಲಿ ಕಂಡನಂತೆ. ಅವನು ಖುಷಿಯಿಂದ.. ನೇ ಕಂಟಿನೇ ಕಂಟಿ (ನಾ  ಕಂಡೆ..ಈಶ್ವರನನ್ನು ನಾ ಕಂಡೆ) ಎಂದು ಕುಣಿದಾಡಿದನಂತೆ..ಆಗಿಂದ ಜಾಗಯಾಗಂಟಿಎಂದು ಪ್ರಸಿದ್ಧವಾಗಿದೆಯಂತೆ.

ಹೌದು .. ನಾ ಹೇಳ ಹೊರಟಿರುವ ಕ್ಷೇತ್ರ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ, ಮಾವಿನ ಹಣ್ಣಿಗೆ ಪ್ರಸಿದ್ಧಿಯಾದ ಬೇನಿಗಾನಪಳ್ಳಿ ಬಳಿಯಿರುವಯಾಗಂಟಿ ಕ್ಷೇತ್ರ”. ಸೂರ್ಯಾಸ್ತದ ವೇಳೆ ದೇವಸ್ಥಾನದ ಅಪರೂಪದ ಸೌಂದರ್ಯಾ ನೋಡುವ ಸುಖ. ದೇವಾಲಯವನ್ನು ಪಲ್ಲವರು, ಚೋಳರು ಮತ್ತು ವಿಜಯನಗರದ ಅರಸುಗಳು ಅವರವರ ಕಾಲಕ್ಕೆ ಸೂಕ್ತವಾಗಿ ವಿಸ್ತರಿಸಿದ್ದಾರೆ. ಈಗಿರುವ ವಿಮಾನ ಗೋಪುರ ಮತ್ತು ಮಂಟಪಗಳನ್ನು ವಿಜಯನಗರ ಸಾಮ್ರಾಜ್ಯದ ಹರಿಹರ ರಾಯ ಮತ್ತು ಬುಕ್ಕ ರಾಯ ಕಟ್ಟಿಸಿದ್ದಾರೆ. ವಿಜಯನಗರದ ದೇವಳ ಶೈಲಿಯನ್ನು ನೋಡುತ್ತಲೇ ಗುರುತಿಸಬಹುದು. ಮಹಾಶಿವರಾತ್ರಿಗೆ  ವಿಶೇಷ ಉತ್ಸವ ನಡೆಯುತ್ತದೆ. ಅಸಂಖ್ಯಾತ ಭಕ್ತರು ಆಗಮಿಸಿ ಧನ್ಯರಾಗುತ್ತಾರೆ. ಯಾಗಂತಿಯ ಉಮಾಮಹೇಶ್ವರ ದೇವಸ್ಥಾನವನ್ನು ಹಗಲಿನಲ್ಲೊಮ್ಮೆ, ಸಂಜೆಯಲ್ಲೊಮ್ಮೆ ದರ್ಶನ ಮಾಡಿದರೆ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು .


Tuesday, December 23, 2025

ಸರಸ್ವತಿ

 ಅಂಬಿತಮೆ.. ನದಿತಮೆ ..ದೇವಿತಮೆ ..ಸರಸ್ವತಿ ಎಂಬ ಶ್ಲೋಕದಿಂದ ಇಂದಿಗೂ ಪೂಜೆ ಪುನಸ್ಕಾರಗಳಲ್ಲಿ ಪ್ರಸ್ತುತವಾಗಿರುವ, ಋಗ್ವೇದದಲ್ಲಿ ಉಲ್ಲೇಖಿತವಾದ ಸರಸ್ವತಿ ನದಿ ಈಗಿಲ್ಲ. ಮಾಯವಾಗಿದೆ. ಮಹಾಭಾರತವನ್ನು ವೇದವ್ಯಾಸರು ಹೇಳುತ್ತಿರುವಾಗ ಗಣೇಶ ಅದನ್ನು ಬರೆಯುತ್ತಿದ್ದಂತೆ, ಸರಸ್ವತಿ ನದಿಯ ಆರ್ಭಟ ವಿಪರೀತವಾಗಿ ಗಣೇಶನಿಗೆ ಕಥೆಯಲ್ಲಿ ಕೇಂದ್ರೀಕರಿಸಲು ಕಷ್ಟವಾಗುತ್ತಿತ್ತಂತೆ. ಆಗ ಗಣೇಶನು ಸರಸ್ವತಿ ನದಿಗೆ ನಿಶ್ಶಬ್ದವಾಗಿ ಹರಿಯಲು ಶಾಪ(ಆಜ್ಞೆ) ಕೊಟ್ಟನಂತೆ. ಆಗಿಂದ ಸರಸ್ವತಿ ಗುಪ್ತ ಗಾಮಿನಿಯಾದಳಂತೆ!! ಮತ್ತೆಲ್ಲೋ ರಾಜಸ್ಥಾನದ ರಾಜನೊಬ್ಬನ ಶಾಪಕ್ಕೆ ಗುರಿಯಾಗಿ ಮಾಯವಾದಳಂತೆ. ಹೀಗೆ ಕಾರಣಗಳೆಷ್ಟೋ/ ಕಾರಣಗಳೇನೋ ಅಂತೂ ಈಗ ಸರಸ್ವತಿ ಇಲ್ಲ. ಸಿಂಧುನದಿಗೆ ಸಮಾನಾಂತರದಲ್ಲೊಂದು ನದಿಯ ಜಾಡು ಕಾಣಿಸಿದರೂ ಅದೇ ಸರಸ್ವತಿ ಎಂಬುದನ್ನು ಸಾಬೀತುಪಡಿಸಲು ಅನೇಕ ಸಂಶೋಧನೆಗಳು ನಡೆದವು. ಸರಸ್ವತಿ ನದಿ ಇತ್ತು ಎಂದು ಜಗತ್ತಿಗೆ ಸಾಬೀತುಪಡಿಸುವ ಹಿನ್ನೆಲೆಯಲ್ಲಿ ಬಹಳಷ್ಟು ಸಂಶೋಧನೆಗಳು ಬ್ರಿಟಿಷರಿಂದಲೇ ಮೊದಲುಗೊಂಡಿದೆ. ಸರಸ್ವತಿಯ ತೀರದುದ್ದಕ್ಕೂ ನಾಗರಿಕತೆಯ ಕುರುಹುಗಳನ್ನು ಹೊರತೆಗೆದಿದ್ದಾರೆ. ಪ್ರವಾಹದ ನಂತರ ಅಳಿದುಳಿದ ಸಿಂದೂಬಯಲಿನವರು ಸರಸ್ವತಿ ನದಿ ಬಯಲಿಗೆ ಗುಳೇ ಬಂದಿರಬಹುದೆಂದು ಊಹಿಸಿದ್ದಾರೆ

ಪ್ರಕೃತಿಯ ವಿಕೋಪದಿಂದ ಸರಸ್ವತಿ ನದಿಯ ನೀರೆಲ್ಲಾ ಯಮುನೆಯ ಕಡೆಗೆ ಹರಿದಿದೆಯಂತೆ, ಸಟ್ಲೆಜ್ ಗೂ ಹರಿದಿರಬಹುದಂತೆ. ಸಂಶೋಧನೆಗಳೆಲ್ಲಾ ನಿರಂತ ನಡೆಯುತ್ತಿದ್ದರೂ ಸರಸ್ವತಿ ನದಿಯು ಇತ್ತು ಎನ್ನುವುದನ್ನೇ ಸಾಬೀತುಪಡಿಸಲು ಯತ್ನಿಸುತ್ತಿದೆಯೇ ಹೊರತು ಅವಳ ಅನುಪಸ್ಥಿತಿಗೆ ಸಮಂಜಸವಾದ ಕಾರಣ ಕೊಡುತ್ತಿಲ್ಲ, ಹಿಮಾಲಯದ ಶಿವಾಲಿಕ್ ಶ್ರೇಣಿಯಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಗುಜರಾತ್ ಬಳಿ ಸಾಗರ ಸಂಗಮವಾಗುತ್ತಿದ್ದ ನದಿ ಕಳೆದು ಹೋಗಿದೆ. ಕಚ್ ನಲ್ಲಿ ಮರುಭೂಮಿ ಅಗೆದರೆ ಫಲವತ್ತಾದ ಮಣ್ಣು ಸಿಕ್ಕಿದೆಯಂತೆ, ನಮ್ಮ ಸರಸ್ವತಿ ಅಲ್ಲಿವರೆಗೂ ಹರಿದಿದ್ದಕ್ಕೆ ಸಾಕ್ಷಿ ಇದೇ. ಅದಲ್ಲದೆ ಹರಪ್ಪ ನಾಗರಿಕತೆಯಲ್ಲಿನ ಮತ್ತು ಸಿಂದೂ ಬಯಲಿನ ಊರುಕೇರಿಗಳು ಹಾಳಾದದ್ದು ಸಿಂದೂ ನದಿ ಪ್ರವಾಹದಿಂದಲೇ. ಹಾಗಿದ್ದರೆ ಸಿಂದೂ ನದಿಗೆ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಲು ಕಾರಣವೇನು? ಕಾಲಕ್ಕೆ ಭೂಗರ್ಭದಲ್ಲಾದ ಕಂಪನದಿಂದ ಸರಸ್ವತಿಯ ನೀರೆಲ್ಲ ಸಿಂದೂ ನದಿಗೂ ಸೇರಿ ಪ್ರವಾಹವಾಗಿರಬಹುದೇನೋ!! ಹೀಗೆ ನೋಡಿದರೆ ಸರಸ್ವತಿಯ ನೀರು ಮತ್ತಿತರ ಉಪನದಿಗಳಿಗೂ ವಿಭಜನೆಯಾಗಿರಬಹುದುನಂತರದ ದಿನಗಳಲ್ಲಿ ಮಳೆಯನ್ನೆ ಅವಲಂಬಿಸಿರಬಹುದು,ಮುಂಗಾರು ಆಗ ಕೈಕೊಟ್ಟು ನದಿ ಬತ್ತಿ ಹೋಯಿತೇನೋ!! ಈಗಿರುವ ಗಾಗ್ರಾ ಹಕ್ಕರ್ ಎನ್ನುವ ಮಳೆಗಾಲದ ನದಿಯೇ ಸರಸ್ವತಿನದಿಯೇ?

ಋಗ್ವೇದದಲ್ಲಿ ಸುಮಾರು ಎಪ್ಪತೈದು  ಶ್ಲೋಕಗಳಲ್ಲಿ ಬಣ್ಣಿಸಲ್ಪಡುವ ಸರಸ್ವತಿಯ ಇರುವಿಕೆಯನ್ನು ಮತ್ತೂ  ಸಾಬೀತುಪಡಿಸಲು ಶತಮಾನಗಳ ಪ್ರಯತ್ನವೊಂದು ವಿಪರ್ಯಾಸ. ಮಹಾಭಾರತದಲ್ಲಿ ಕೂಡ ಬಲರಾಮ ಗೋಹತ್ಯಾ ಪಶ್ಚಾತ್ತಾಪಕ್ಕೆ ಸರಸ್ವತಿ ನದಿಯುದ್ದಕ್ಕೂ ಹಿಮಾಲಯದವರೆಗೆ  ತೀರ್ಥಯಾತ್ರೆ ಮಾಡಿದ್ದನೆಂದು ಹೇಳಿದೆ.   ತಾನೇಶ್ವರ ಬಳಿಯಲ್ಲಿರುವ ಕುರುಕ್ಷೇತ್ರದ ಬ್ರಹ್ಮ ಕುಂಡದಲ್ಲಿ ಬಲರಾಮ ಗೋಹತ್ಯಾ ಪಶ್ಚಾತ್ತಾಪ ಮಾಡಿಕೊಂಡಿದ್ದಾನೆಂದು ಓದಿದ್ದೇನೆ. ಸರಸ್ವತಿ ತೀರ್ಥೋದ್ಭವ ಬ್ರಹ್ಮಕುಂಡದಲ್ಲಿ ಆಗುತ್ತದೆಂದು ಅಲ್ಲಿನ ಸುತ್ತಮುತ್ತಲಿನವರು ನಂಬಿದ್ದಾರೆ. ಬದರಿಯಮಾನ ಹಳ್ಳಿಯಲ್ಲಿವ್ಯಾಸಗುಹೆಯ ಪಕ್ಕದಲ್ಲೇ ಸರಸ್ವತಿ ಭೋರ್ಗರೆಯುತ್ತಾಳೆ... ಸರಸ್ವತಿ ಇದ್ದಳು ಎಂದರೆ? ಇದ್ದಾಳಲ್ಲಾ?  (ಅಲಕಾನನಾದ ನದಿ ಸೇರಿ ಕೊನೆಗೆ ಗಂಗೆಯನ್ನೇ ಸೇರುತ್ತಾಳೆ) ಹರಿವು ಪ್ರಕೃತಿ ವಿಕೋಪದಿಂದಲೇ ಏರುಪೇರಾಗಿರಬಹುದಷ್ಟೇ. ಸರಸ್ವತಿ ನದಿ ಎಲ್ಲೆಲ್ಲಿ ಹರಿದಳೆಂಬುದಕ್ಕೆ ಸಂಶೋಧನೆ ಪ್ರಸ್ತುತವೇ ಹೊರತು ಅವಳು ಇರಲೇ ಇಲ್ಲ ಊಹಾಪೋಹದ ನದಿಎಂದರೆ?

ಕೆಳಗಿನ ನದಿಸೂಕ್ತ ಶ್ಲೋಕದಲ್ಲಿ 

ಇವಂ ಮೇ ಗಂಗೇ ಯಮುನೇ ಸರಸ್ವತಿ ಶತುದ್ರು ಸ್ತೋಮಮ್  ಸಚತಾ ಪರುಷ್ಣಿಯಾ

ಆಸಿಕ್ನಿಯ ಮರುದ್ವೃಧೇ ವಿಟಸ್ಥಯಾರ್ಜಿಕಿಯೇ ಶೃಣುಹ್ಯಾ ಸುಶೋಮಯಾ

ಸರಸ್ವತಿಯು ಗಂಗೆ ಯಮುನೆ ಶತುದ್ರು (ಸಟ್ಲೆಜ್) ಪರುಷ್ಣಿ(ರವಿ) ಆಸಿಕ್ನಿ (ಚೆನಾಬ್) ಮರುದ್ವೃಧೇ (ಮರುವರ್ಧವ) ವಿಟಸ್ಥ(ಜೆಲುಮ್ಅರ್ಜಿಕೆಯ ಮತ್ತು ಸುಶೋಮ ನದಿಗಳ ಜೊತೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದಾಳೆ. ಬೇರೆಲ್ಲಾ ನದಿಗಳು ಪ್ರಸ್ತುತವಾಗಿರುವಾಗ ಸರಸ್ವತಿಯೂ ಇದ್ದಳು ಎಂದು ಸಂಶೋಧನೆಯಿಂದ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಇರಲಿ ಭಾರತದ ಪುರಾಣಗಳನ್ನು (ಪುರಾಣಗಳೆಲ್ಲ ಇತಿಹಾಸದ್ದೇ ಭಾಗವಾದರೂ) ಜಗತ್ತಿಗೆ ಸಂಶೋಧನೆಯಿಂದಲೇ ನಂಬಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅದರಲ್ಲಿ ಇದೂ ಒಂದು.

 ನಾವೆಲ್ಲ ನಂಬಿದಂತೆ ಆಕಸ್ಮಿಕವಾಗಿ ಭೂಕಂಪನದಿಂದಲೇ ಸರಸ್ವತಿ ನದಿ ಕಾಣೆಯಾಗಿರಬಹುದು. ಮುಂದೆ  ನಮ್ಮ ಕಣ್ಣಮುಂದೆಯೇ ಗಂಗೆ ಯಮುನೆಯರು ಕೂಡ ಮಾಯವಾಗ ಬಹುದೇನೋ? ಯಾಕೆಂದರೆ ಗಂಗೆ, ಯಮುನೆ, ಬ್ರಹ್ಮಪುತ್ರ ಮುಂತಾದ ಹಿಮಾಲಯದಲ್ಲಿ ಹುಟ್ಟುವ ನದಿಗಳಿಗೆ ನೀರು ಒದಗಿಬರುವುದೇ ಹಿಮಾಲಯದಲ್ಲಿನ ಹಿಮದ ಕರಗುವಿಕೆಯಿಂದ. ಜಾಗತಿಕ ತಾಪಮಾನ ಹೆಚ್ಚಾದಂತೆ ಹಿಮದ ಕರಗುವಿಕೆ ಜಾಸ್ತಿಯಾಗಿ ಮುಂಬರುವ ೫೦-೬೦ ವರ್ಷಗಳಲ್ಲಿ ಮಂಜು ಸಂಪೂರ್ಣ ಕರಗಿಹೋದರೆ ನದಿಗಳಿಗೆ ನೀರೆಲ್ಲಿಂದ ಬರುತ್ತದೆ? ಮುಂದೊಂದುದಿನ ನದಿಗಳೂ ಮಳೆಯ ಮೇಲೆ ಅವಲಂಬಿತವಾಗುತ್ತವೆ. ಅತಿವೃಷ್ಟಿಯಲ್ಲಿ ಕೊಚ್ಚಿಹೋಗುವಂತೆ ಹರಿದು ಅನಾವೃಷ್ಟಿಯಲ್ಲಿ ಒಣಗಿದ ನದಿ ಪಾತ್ರೆಯನ್ನು ಕಾಣುವಂತಾಗುವುದಿಲ್ಲವೇ? ಆದರಿದು ಮಾನವನ ಸ್ವಯಂಕೃತ. ಇದರಲ್ಲಿ ಪ್ರಕೃತಿಯನ್ನು ದೂಷಿಸುವ ಯಾವುದೇ ಹಕ್ಕು ನಮಗಿಲ್ಲ. ಇದನ್ನು ತಡೆಯಲು ಅಥವಾ ಮುಂದೂಡಲು  ಸ್ಥಳೀಯರೊಂದಿಗೆ ಇಡೀ ಮನುಕುಲವು ಒಗ್ಗೂಡಬೇಕು. ಒಗ್ಗೂಡುವಿಕೆಯ ಸಾಧ್ಯಾಸಾಧ್ಯತೆಗಳು ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ಇಪ್ಪತ್ತೊಂದನೆಯ ಶತಮಾನವು ೩೦೦೦ ಸಾವಿರ ವರ್ಷದ ಹಳೆಯ ಗಂಗಾಬಯಲಿನ ನಾಗರಿಕತೆಗೆ ಮುಕ್ತಾಯ ಹಾಡಬಹುದು. ಮುಂದಿನ ಪೀಳಿಗೆಯವರು ನದಿಯ ಪ್ರಾಮುಖ್ಯತೆಯನ್ನೇ ಮರೆಯಬಹುದು. ಬೇಕಾದಷ್ಟು ಕಾಲವಲಂಬಿತವಾದ ನದಿಗಳು ಹುಟ್ಟಬಹುದು. ಆದರೆ  ಅವೆಲ್ಲ ಅಗಾಧ ಜನಸಂಖ್ಯೆಯ ದಬ್ಬಾಳಿಕೆಗೆ ತತ್ತರಿಸುವುದಿಲ್ಲವೇ? ಮುಂಬರುವ ಪೀಳಿಗಯವರು ನದಿಗಳನ್ನು ಕಾಪಾಡಿಕೊಳ್ಳುವಷ್ಟು ಯೋಗ್ಯರೇ? ಸಾಮರ್ಥ್ಯರೇ? ಹರಿದು ಹೋದ ಹರಪ್ಪ ನಾಗರಿಕತೆಯವರಿಗೆ ಹೊಸ ಗ್ರಾಮಗಳನ್ನೋ ಊರುಗಳನ್ನೋ ಕಟ್ಟಿಕೊಂಡು  (ಹೊಂದಿಕೊಂdu )ಸ್ಥಳ್ಳಾಂತರಿಸಲು ಸರಸ್ವತಿ, ಗಂಗೆಯಂಥ ನದಿ ಬಯಲುಗಳಿದ್ದವು. ಮುಂದೆ ಗಂಗೆ ಕಣ್ಮರೆಯಾದರೆ ಮತ್ಯಾರು ದಿಕ್ಕು