Tuesday, July 12, 2022

ಶ್ರೀರಾಮೋತ್ಸವ


ಮನೆಯ ಹಿಂದಗಡೆಯ ಓಣಿಯಲ್ಲಿ ಸಳಸಳ ಶಬ್ದ. ಅರೆ ನಿದ್ರೆಯಲ್ಲಿದ್ದ ನನಗೆ ಟ್ಯಾಂಕ್ ತುಂಬಿ ಹರಿಯುತ್ತಿರುವಂತೆ, ಓಡಿ ಕೆಳಗಡೆ ಹೋಗಿ ಸ್ವಿಚ್ ಬಂದ್ ಮಾಡುವ ಆತುರ. ಮರು ಕ್ಷಣ ಗಾಢ ನಿದ್ರೆ, ಮತ್ತೆ ಕನಸು..ಸಳ ಸಳ ನೀರಿನ ಶಬ್ದ.. ಜರಡಿಯಲ್ಲಿ ಸೀತ ಲಕ್ಷ್ಮಣ ಸಮೇತ ರಾಮನಿಗೆ ಮಹಾಜಲಾಭಿಷೇಕ, ಪರಾತ ತುಂಬಿ ವೇದಿಕೆ ತೋಯುತ್ತಿದೆ. ಆತುರದಲ್ಲಿ ಬಿಂದಿಗೆಗೆ ತಂಬಿಗೆಯಿಂದ ಪರಾತದಲ್ಲಿನ ನೀರು ತುಂಬಿಸುತ್ತಿದ್ದೇನೆ. ಜಲಾಭಿಷೇಕ ನಿರಂತರ ನಡೆಯುತ್ತಲೇ ಇದೆ, ಅಸ್ಪಷ್ಟ ವೇದ ಘೋಷ.  ಹಸನ್ಮುಖಿ ರಾಮ.

ಸೀತಾಕಲ್ಯಾಣ ಮತ್ತು ಶ್ರೀರಾಮನ ಪಟ್ಟಾಭಿಷೇಕ ಕಾರ್ಯಕ್ರಮಗಳು ತಕ್ಕ ಮಟ್ಟಿಗೆ ವೈಭವ ಪೂರ್ಣವಾಗಿ ನಡೆದು ಸುಮಾರು ದಿಗಳಾಗಿದೆ,  ಆದರೆ ಕೂತರೆ,ನಿಂತರೆ ಇನ್ನೂ ಅದರದೇ ಗುಂಗು. ಕನಸಿನಲ್ಲಿಯೂ!

ದೇವರಿಗೆ ಕಲ್ಯಾಣೋತ್ಸವವಾಗಲಿ ಪಟ್ಟಾಭಿಷೇಕವಾಗಲೀ ನಾವು ಮನೆಯಲ್ಲಿ ಮಾಡಬಹುದೆಂಬ ಕಲ್ಪನೆಯಿಲಿಲ್ಲ. ಹಬ್ಬಗಳಲ್ಲಿ, ಕೆಲವು ವಿಶೇಷ ದಿನಗಳಲ್ಲಿ ದೇವಸ್ಥಾನಗಳಲ್ಲಿ ಉತ್ಸವಗಳು ಅದ್ದೂರಿಯಾಗಿ ನಡೆದರೂ, ಮನೆಯಲ್ಲಿನ ಪೂಜೆ-ಹಬ್ಬ ಪಾರುಗಣಿಸಿ ದೇವಸ್ಥಾನಗಳಿಗೆ ಹೋದಾಗ ನಮ್ಮ ಪಾಲಿಗೆ ದರ್ಶನವೊಂದೆ. ಮೂರು ವರ್ಷದ ಹಿಂದೆ ಚಿಕಾಗೋ ಶ್ರೀರಾಮವ ದೇವಸ್ಥಾನದಲ್ಲಿ ವಸಂತನವರಾತ್ರಿ ಉತ್ಸವಗಳನ್ನು ನೋಡುವ ಭಾಗ್ಯ ಸಿಕ್ಕಿತ್ತು. ಸಂಪ್ರದಾಯದಂತೆ ಉಗಾದಿ ಹಬ್ಬ ಮನೆಯಲ್ಲಿ ಮುಗಿಸಿ ದೇವಸ್ಥಾನಕ್ಕೆ ಹೋದಾಗ ನಮಗೆ ಅಲ್ಲಿನ ಏರ್ಪಾಟುಗಳನ್ನು ನೋಡಿ ಖುಷಿಯ ಜೊತೆ ಆಶ್ಚರ್ಯ. ಉಗಾದಿಯಿಂದ ಶ್ರೀರಾಮ ನವಮಿಯವರೆಗೂ ಪ್ರತಿದಿನ ದೇವಸ್ಥಾನಕ್ಕೆ ಹೋಗಿಬರೋದು ಅಂದೇ ತೀರ್ಮಾನ ಆಯ್ತು. ಅಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ನಾ ನೋಡಿದ ಮೊದಲ ದೇವರ ಕಲ್ಯಾಣೋತ್ಸವ. ಅಲ್ಲಿಯ ಊಟ ಪ್ರಸಾದಗಳನ್ನು ಕನ್ನಡದವರೇ ವ್ಯವಸ್ಥೆ ಮಾಡುತ್ತಿದ್ದರು. ಸ್ವಯಂಸೇವಕರೇ ಕಾರ್ಯಕ್ರಮವನ್ನು ಅಭೂತ ಪೂರ್ವವಾಗಿ ಸಂಯೋಜಿಸುತ್ತಿದ್ದರು. ಅಲ್ಲಿಂದ ಪ್ರಭಾವಿತರಾಗಿ ನಮ್ಮನೆಯಲ್ಲೂ ಒಂದು ರಾಮ ಕಾರ್ಯವಾಗಬೇಕೆಂಬ ಆಶಯ ಮೂಡಿತು.

ಹೇಗೂ ಅಮ್ಮ ಬರೆದ ರಾಮ ಕೋಟಿ ರಚನಗೆ ಉದ್ಯಾಪನೆಯನ್ನು ಮಾಡಬೇಕಿತ್ತು. ಉದ್ಯಾಪನೆಯ ವಿಧಿ ವಿಧಾನಗಳನ್ನು ಕೇಳಲು ಪುರೋಹಿತರ ಭೇಟಿ ಮಾಡಿ, ಇದರ ಅಂಗವಾದು ಕಲ್ಯಾಣೋತ್ಸವ ಮಾಡಬಹುದೇ? ಎಂದು ಕೇಳಿದಾಗ ಅವರು ‘ರಾಮಾಯಣದ ಪಾರಾಯಣ ಮಾಡಿ  ಕಲ್ಯಾಣೋತ್ಸವ ಮತ್ತು ಶ್ರೀರಾಮ ಪಟ್ಟಾಭಿಷೇಕ ಮಾಡಿ’, ಮತ್ತು ‘ಉದ್ಯಾಪನೆಯ ಅಂಗವಾಗಿ ತಾರಕ ಹೋಮ’ ಮಾಡಿ ಎಂದು ನಿರ್ದೇಶಿಸಿದರು. ಪಟ್ಟಾಭಿಷೇಕಕ್ಕೆ ವಿಶೇಷವಾಗಿ ಬೆಟ್ಟದ, ಗೋಶಾಲೆಯ, ಅಶ್ವಶಾಲೆಯ ಮತ್ತು ಗಜಶಾಲೆಯ ಮೃತ್ತಿಕೆ, ಅಷ್ಟಲ್ಲದೆ ರಥ ಬೀದಿಯ, ರಾಜದ್ವಾರದ ಮೃತ್ತಿಕೆಯನ್ನೂ, ಸಾಗರಗಳ ತೀರ್ಥ, ನದೀ ತೀರ್ಥಗಳ ಸಂಗ್ರಹಣೆ ಮಾಡಬೇಕಿತ್ತು. ಸಂಗ್ರಹಣೆಯ ನೆಪದಲ್ಲಿ ಕನ್ಯಾಕುಮಾರಿಯಿಂದ ಅಯೋಧ್ಯೆವರೆಗೆ ಯಾತ್ರೆಯೂ ಆಯ್ತು.(ಅಯೋಧ್ಯೆಯ ಸರಯೂ ನದಿಯಲ್ಲಿ ಮಿಂದು ದಶರಥನ ಭವನದ ರಾಜದ್ವಾರದಿಂದ ಮೃತ್ತಿಕೆ ತಂದಿದ್ದು ವಿಶೇಷ.) ನೆಂಟರಿಷ್ಟರನ್ನು ಆಹ್ವಾನಿಸಿದ್ದಾಯ್ತು. ಹೋಮ-ಪೂಜೆಗಳಿಗೆ ಬೇಕಾದ ದ್ರವ್ಯಗಳನ್ನು ಕೊಂಡು ತಂದಿದ್ದಾಯ್ತು. ಅತಿಥಿಗಳಿಗೆ ಉಡುಗೊರೆಗಳು ಖಕೀದಿಸಿದ್ದಾಯ್ತು. ಸೀತಾ, ರಾಮ ಲಕ್ಷ್ಮಣರಿಗೆ ವಸ್ತ್ರಗಳು..ಕಲ್ಯಾಣಕ್ಕೊಂದು, ಪಟ್ಟಾಭಿಷೇಕಕ್ಕೊಂದು. ಮನೆಯ ಹೆಣ್ಣು ಮಕ್ಕಳಿಗೆಲ್ಲಾ ಉಡಿತುಂಬಲು ಚಕ್ಕಲಿ ಉಂಡೆಗಳನ್ನು ಮಾಡಿಕೊಡಲು ಒಪ್ಪಿಸಿಯಾಯ್ತು. ಅಡಿಗೆಯವರಿಗೂ ಮೂರುದಿನಗಳ ಒಪ್ಪಂದ. ಪ್ರತಿದಿನ ನಾಲ್ಕರಿಂದ ಐದು ಗಂಟೆ ಪಾರಾಯಣದ ವಿಧಿಯಂತೆ ರಾಮಾಯಣದ ಪಾರಾಣವೂ ಸಾಂಗವಾಗಿ ನಡೆಯಿತು.  ಆದರೆ ಕೊರೊನಾ ಕೃಪೆಯಿಂದ ನಾವು ತೀರ್ಮಾನಿಸಿದ ದಿನಕ್ಕೆ ಕಾರ್ಯಕ್ರಮ ನಡೆಸಲಾಗಲಿಲ್ಲ. ಆದರೆ ಸಂಕಲ್ಪಕ್ಕೆ ಧಕ್ಕೆ ಬಾರದಂತೆ ಸಂಭಾವ್ಯ ರೀತಿಯಲ್ಲಿ ಕುಟುಂಬದವರು ಮಾತ್ರವೇ ಸೇರಿ ತಾರಕ ಹೋಮ ಮಾಡಿದೆವು. ಶ್ರೀರಾಮನವಮಿಗೆ ಪಾರಾಯಣ ಮುಗಿಸಿ ರಾಮನಿಗೆ ವಿಷೇಶ ಪೂಜೆಮಾಡಿ ಮುಂದೆ ಅತಿ ಶೀಘ್ರದಲ್ಲಿ ಕಾರ್ಯಕ್ರಮ ನಡೆಯುವಂತೆ ಬೇಡಿದೆವು. ರಾಮಾನುಗ್ರಹದಿಂದ ಚೈತ್ರದಲ್ಲಿ ನಡೆಯಬೇಕಿದ್ದ ರಾಮೋತ್ಸವ ಕಾರ್ತೀಕದಲ್ಲಿ ಅದ್ದೂರಿಯಾಗಿ ನಡೆಯಿತು.

ಮತ್ತೆ ಕಾರ್ತಿಕ ಮಾಸದಲ್ಲಿ ಸುಂದರ ಕಾಂಡ ಪಾರಾಯಣದೊಂದಿಗೆ  ರಾಮೋತ್ಸವ ಪ್ಾರಂಭವಾಯ್ತು. ಸೀತಾ ಕಲ್ಯಾಣದ ಕಾರ್ಯಕ್ರಮದ ರೂಪದ ಬಗ್ಗೆ ಅಷ್ಚು ಕಲ್ಪನೆಯಿಲ್ಲದಿದ್ದರೂ ತಯಾರಿಯಂತೂ ನಮ್ಮ ಮಕ್ಕಳ ಮದುವೆಗೆ ಸಿದ್ಧತೆ ನಡೆಸಿದಂತೆ ಪಟ್ಟಿಮಾಡಿ ಅಂಗಡಿಗಳನ್ನು  ತಿರುಗಿ, ಶಾಸ್ತ್ರ ಸಮ್ಮತವಾದ ದ್ರವ್ಯಗಳನ್ನು ತರಲಾಗಿತ್ತು. ಎಲ್ಲವನ್ನೂ ಪಟ್ಟಿ ಮಾಡಿದಂತೆ ಬೇರೆ ಬೇರೆ ರಟ್ಟಿನ ಡಬ್ಬದಲ್ಲಿ ಹಾಕಿದ್ದೆವು. ನಮ್ಮನೆಯಂತೂ ಸಾಮಾನ್ಯವಾಗಿಯೇ ಅಕ್ಕ-ತಂಗಿಯರ ಸಂತೆ. ಈಗಂತೂ ಮದುವೆ ಮನೆಯೇ.. ಅಡಿಗೆ ಮನೆಯಲ್ಲಿ ಸೀತೆಗೆ ಮಡಿಲು ತುಂಬಲು ತಿಂಡಿಗಳ ತಯಾರಿ, ಮುಂದಿನ ಪಡಸಾಲೆಯಲ್ಲಿ ಹೂ ರಾಶಿ, ಮಲ್ಲಿಗೆಯನ್ನು ವಿಷೇಶವಾಗಿ ಜೋಪಾನ ಮಾಡುವವರು..ಸ್ನಾನಕ್ಕಾಗಿ ಸರದಿ ಕಾಯುವವರು. ಹಿಟ್ಟನ್ನು ಜರಡಿಮಾಡುತ್ತಾ ಯಾವುದೋ ಹಾಡಿನ ತುಣಕು..ಎಲ್ಲರೂ ದನಿಗೂಡಿಸುವುದು. ಮುಖ್ಯ ಪಡಸಾಲೆಯಲ್ಲಿ ಮಕ್ಕಳ ಸಾಮ್ರಾಜ್ಯ.. ಫ಼ೋನ್ಗಳಲ್ಲಿ ಮುಳುಗಿ ಹೋಗಿರುವವರನ್ನು ಊಟಕ್ಕೂ ತಿಂಡಿಗೂ ಕರೆಕರೆದು ಅಮ್ಮಂದಿರ ಮುನಿಸು. ಇದಕ್ಕೆಲ್ಲಾ ಸಾಕ್ಷಿ ನಮ್ಮ ಮುದ್ದು ಕೂಸು. ಫೋನಿನಲ್ಲಿರುವ ತಮಾಷೆಯನ್ನು ಎಲ್ಲರಿಗೂ ತೋರಿಸಿ ನಗುವವರು…ಕೂಸಿನೊಂದಿಗೆ ಸೆಲ್ಫ಼ಿ , ಗಾಡಿಯ ಕೀಗಾಗಿ ಕೆಳಗಡೆಯಿಂದ ಕೂಗಿ ಕರೆಯುವವರು, ಕೋಣೆಗಳಲ್ಲಿ  ಇಯರ್ಪೋನ್ ಹಾಕಿಕೊಂಡು ಮೀಟಿಂಗ್ ಗೆ ಹಾಜರಿ ಹಾಕುವವರು. ಗೇಟ್ ಬಳಿ ಚಪ್ಪರ ಹಾಕುವವನು…ಗರಿ ಸರಿಯಾದ್ದು ತಂದಿಲ್ಲವೆಂದು ಅವನಿಗೆ ದಬಾಯಿಸುವವರು. ಅಡಿಗೆಮನೆಯಲ್ಲಿನ ಸಂಭ್ರಮದ ಘಮದೊಂದಿಗೆ ಅಪ್ಪ-ಅಮ್ಮನ ಕೊರತೆಯ ಅಳು, ಸ್ವಸಾಂತ್ವನ. ಅಣ್ಣ ತಮ್ಮಯ್ಯರ ಶ್ಲಾಘನೆ. ಅವಳೂಬ್ಬಳು ಬರಲಿಲ್ಲವೆಂಬ ವಿಷಾದ. ಒಂದು ಒಲೆಯಲ್ಲಿ ಬಿಡುವಿಲ್ಲದೆ ತಯಾರಾಗುತ್ತಿದ್ದ ಕಾಫ಼ಿ.  ಒಂದೆಡೆ ಜಡೆಹಾಕಿಕೊಳ್ಳುವವರು ಮತ್ತೊಂದೆಡೆ ಕೂದಲಿಗೆ ಬಣ್ಣ ಹಾಕಿಕೊಳ್ಳುವವರು. ನಾಳೆ ಉಡುವ ಸೀರೆಯಾವುದು ಎಂಬ ಯಕ್ಷ ಪ್ರಶ್ನೆ ..ಈ ಗದ್ದಲದ ಮಧ್ಯೆ ನುಗ್ಗಿ ಬರುತ್ತಿದ್ದ ನಿತ್ಯ ಪೂಜೆಯ ಘಂಟಾರವ. ಇದು ಸಂಭ್ರಮದ ಅತಿರೇಕ.