Wednesday, May 8, 2019

ಪದ-ಬಂಧ

ಪದ-ಬಂಧ
ಸಂಜೆ ಕಾಫಿ ಸವಿಯುತ್ತಾ  ಸುಧಾ ವಾರಪತ್ರಿಕೆಯ ಪುಟಗಳನ್ನು ತಿರುವಿ ಹಾಕುತ್ತಿರುವಾಗ, ಶಬ್ದಶಿಲ್ಪದ ಪುಟ ಕಣ್ಣಿಗೆ ಬಿತ್ತು. ಅಲ್ಲಿ ಕೊಟ್ಟಿರುವ ವಾಕ್ಯಗಳಿಗೆ ಪದಗಳನ್ನು ಹೊಂದಿಸುವ ಪ್ರಯತ್ನ ಮಾಡತೊಡಗಿದೆ. ಆದರೆ ಒಂದು ವಾಕ್ಯಕ್ಕೂ ಶಬ್ದ ಗೊತ್ತಿಲ್ಲ!! ತರಹದ ಪದಬಂಧ ಬಿಡಿಸುವುದು ನನ್ನ ಬಾಲ್ಯದ ಹವ್ಯಾಸ. ನನಗೀಗಲೂ ನೆನಪಿದೆ: ತರಂಗ ವಾರಪತ್ರಿಕೆಯ ಕೆಣಕು-ತಿಣುಕು ಪದಬಂಧವನ್ನು ಎಲ್ಲರಿಗಿಂತ ಮೊದಲು ತುಂಬಿಸುತ್ತಿದ್ದದ್ದು ನಾನೇ! ಈಗೇಕೆ ಶಬ್ದ ದಾರಿದ್ರ್ಯ? ಪ್ರಶ್ನೆ  ನನ್ನನ್ನು ಕಾಡತೊಡಗಿತು.
ಆಲೋಚಿಸಿದರೆ, ಹೌದು! ನನ್ನ ನಾಲ್ಕು ವರ್ಷದ ಅಮೆರಿಕಾ ವಾಸ ಕನ್ನಡದ ಬಳಕೆಯನ್ನು, ನನ್ನ ಕನ್ನಡ ಭಾಷಾ ಸಾಮರ್ಥ್ಯವನ್ನು  ಕ್ಷೀಣಿಸಿದೆ. ಮಕ್ಕಳೊಂದಿಗೆ, ಪತಿಯೊಡನೆ, ನೆರೆಹೊರೆಯವರೊಂದಿಗೆ, ಅಂಗಡಿಗಳಲ್ಲಿ , ಎಲ್ಲೆಲ್ಲೂ ಇಂಗ್ಲೀಷ್ ಬಳಕೆ ನನ್ನ ಕನ್ನಡವನ್ನು ನುಂಗಿ ಹಾಕಿದೆ ಎನ್ನುವ ಕಟು ಸತ್ಯ ಮನವರಿಕೆಯಾಯಿತು.
ವಿಪರ್ಯಾಸವೆಂದರೆ ಸಮಸ್ಯೆ ನನ್ನೊಬ್ಬಳದೇ ಅಲ್ಲ. ನಮ್ಮ ಬೆಂಗಳೂರಿನ ಬಹುತೇಕ ಕನ್ನಡಿಗರದೂ ಹೌದು. ಹತ್ತು ಪದವಿರುವ ಒಂದು ವಾಕ್ಯದಲ್ಲಿ ಒಂದೆರಡೇ ಕನ್ನಡ ಪದಗಳನ್ನು ಕಾಣಬಹುದು. ಪ್ರತಿವಾಕ್ಯದಲ್ಲೂ ಇಂಗ್ಲೀಷ್ ಕಲಬೆರಕೆ. ನಮ್ಮ ಬೆಳಗಿನ ಉಪಹಾರಗಳ ಹೆಸರುಗಳೇ ಬದಲಾಗಿವೆ ! ಉಪ್ಪಿಟ್ಟಿಗೆ ಉಪ್ಮಾ, ದೋಸೆಗೆ ದೋಸಾ, ಹೆಸರು ಬೇಳೆ ಉಗ್ಗಿಗೆ ಪೊಂಗಲ್, ತರಾವರಿ ಚಿತ್ರಾನ್ನಗಳೆಲ್ಲಾ ಬಾತುಗಳಾಗಿವೆ. ಇನ್ನು ತಿಳಿಸಾರು ರಸಂ, ಹುಳಿ-ಕೂಟು ಸಾಂಬಾರ್ಇಂದು ಬಹುತೇಕ ಬೆಂಗಳೂರಿಗರಿಗೆ ಕನ್ನಡ ಸಂಖ್ಯೆಗಳಾಗಲೀ, ಹೂ-ಹಣ್ಣುಗಳ ಹೆಸರುಗಳಾಗಲೀ ತಿಳಿದಿಲ್ಲವೆಂಬುದು ವಿಷಾದಕರ ಸಂಗತಿ.
ಇತ್ತೀಚೆಗೆ ನಾ ಕಂಡಂತೆ ಬಹಳ ಮಂದಿ ತಮ್ಮ ಮಕ್ಕಳನ್ನು ಇಂಜಿನೀರ್-ಡಾಕ್ಟರ್ ಮಾಡುವ ಓಟದಲ್ಲಿ ಭಾಷೆಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಕನ್ನಡದಲ್ಲಿ ಬರೀ ಉತ್ತೀರ್ಣರಾದರೆ ಸಾಕು ಬೇರೆ ವಿಷಯಗಳಲ್ಲಿ ನೂರಕ್ಕೆ ನೂರೇಬೇಕೆಂಬ ಧೋರಣೆ ಎಲ್ಲರಲ್ಲಿದೆ. ವಿದ್ಯಾರ್ಥಿಗಳಿಗೆ ಕನ್ನಡ ಓದಲು ಮತ್ತು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಪಠ್ಯ ಪುಸ್ತಕದಲ್ಲಿನ ಕಥೆ, ಕವನ, ನಾಟಕಗಳು ವ್ಯಕ್ತಿತ್ವ ವಿಕಾಸಕ್ಕೆ ಮೆಟ್ಟಿಲುಗಳು. ಮಾತೃಭಾಷೆಯ ಮೇಲಿನ ಹಿಡಿತ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.
 ಕರ್ನಾಟಕದ ಶಾಸ್ತ್ರೀಯ ಸಂಗೀತ, ಬೇಲೂರು-ಹಳೇಬೀಡಿನ ಶಿಲ್ಪಕಲೆ, ಯಕ್ಷಗಾನ, ಮೈಸೂರಿನ ದಸರಾ ಜಗತ್ಪ್ರಸಿದ್ಧ. ಅಷ್ಟೇ ಅಲ್ಲ  ನಮ್ಮ ಮೈಸೂರ್ ಪಾಕು, ಬಿಸಿಬೇಳೆ ಹುಳಿಯನ್ನ, ಮದ್ದೂರು ವಡೆ ಮುಂತಾದ ರುಚಿಕರ ಖಾದ್ಯಗಳು ಕನ್ನಡಿಗರ ಸ್ವತ್ತು. ಸಂಸ್ಕೃತಿ ಮತ್ತು ಪರಂಪರೆಗೆ ಕನ್ನಡವೇ ವಜ್ರ ಕವಚ. ಭಾಷೆಯ ಅಳಿವು ಉಳಿವು ಅದರ ಬಳಕೆಯಲ್ಲಿದೆ. ಬೇರೆ ಭಾಷೆಗಳನ್ನು ಗೌರವಿಸುತ್ತಾ, ಶುದ್ಧ ಕನ್ನಡವನ್ನು ಮಾತಾಡುತ್ತಾ ನಮ್ಮ ಭವ್ಯ ಸಂಸ್ಕೃತಿಯನ್ನು ಕಾಪಾಡುವ ಕರ್ತವ್ಯ ನಮ್ಮದಾಗಿದೆ. ಕನ್ನಡದ ತತ್ವ, ಸಾಹಿತ್ಯ, ಇತಿಹಾಸಗಳ ಅಲಕ್ಷ್ಯವೇ ಕನ್ನಡಕ್ಕಿರುವ ಬಹು ದೂಡ್ಡ ತೊಂದರೆ. ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆಗಳು, ಚಿಂತನೆಗಳು ಇವು ಒಂದು ಭಾಷೆಗೆ ಅದರ ಭಾಷಿಕರಷ್ಟೇ ಮುಖ್ಯ. ಕನ್ನಡ ಬಳಕೆ  ಮನೆಯಿಂದಲೇ ಪ್ರಾರಂಭವಾಗಬೇಕು.
  ಭಾರತರತ್ನ ಪ್ರಶಸ್ತಿಗಳು, ಜ್ಞಾನಪೀಠ ಪ್ರಶಸ್ತಿಗಳು ಸಂದಿರುವ ಘನತೆ ಕನ್ನಡಕ್ಕಿದೆ. ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಲಾಗಿದೆ.. ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಬೆನಗಲ್ ನರಸಿಂಗ ರಾವ್ (ಇವರು ಭಾರತ ಸಂವಿಧಾನ ಸಭೆಯ ಮುಖ್ಯ ಕಾರ್ಯದರ್ಶಿಗಳು. ಭಾರತದ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ), ಬಿ.ಡಿ. ಜತ್ತಿ, ಸಿ.ಎನ್. ರಾವ್ ರಂಥಹ ಮಹನೀಯರ  ಕೊಡುಗೆ ನಮಗೆ ಆದರ್ಶ. ಹೀಗೆ ಭಾರತದ ರಾಜಕೀಯ, ಆರ್ಥಿಕತೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿರುವ ಮಹನೀಯರ ಘನತೆಯನ್ನು ಮುಂದುವರೆಸುವ ಹೊಣೆ ನಮ್ಮ ಪೀಳಿಗೆಯದು.
ಅರವಿಂದ ಮಾಲಗತ್ತಿಯವರು ಹೇಳಿದಂತೆ
ಜನ್ಮ ಭೂಮಿಗೆ ಮೀರಿದ ಸ್ವರ್ಗವೆ ಇಲ್ಲ
ಮಾತೃಭಾಷೆಗೆ ಮೀರಿದ ಅಮೃತವಿಲ್ಲ
ಕರುಳ ಬಳ್ಳಿಯ ಬಂಧವೆ ಎಲ್ಲ
ರಕ್ತ ಮೀರೀದ ಸಂಬಂಧವೇ ಎಲ್ಲ.
ಹೀಗೆ ನನ್ನ  ಮನದಲ್ಲಿ ಮೂಡಿದ ವಿಚಾರಗಳಿಂದ, ನಾನು ಶಬ್ದಶಿಲ್ಪ ಪೂರ್ಣ ಮಾಡಲಾಗಲಿಲ್ಲವೆಂಬುದನ್ನು ಅರಗಿಸಿ ಕೊಳ್ಳಲಾಗಲಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ನಾನೇ ಹೀಗಾದರೇ ಕನ್ನಡದ ಗಂಧವಿಲ್ಲದ ನನ್ನ ಮಕ್ಕಳ ಪರಿಸ್ಥಿತಿಪ್ರತಿವರ್ಷ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಾಗಿ, ಫ್ರೆಂಚ್, ಜರ್ಮನ್, ಡಚ್, ಲಾಟೀನ್ ಸೇರಿದಂತೆ ಹದಿನೈದು ಭಾಷಾಮೂಲ ಪದಗಳನ್ನು ನನ್ನ ಮಕ್ಕಳಿಗೆ ಕಲಿಸುವ ನಾನು, ಕನ್ನಡ ಕಲಿಸದಿರಲು ಅಪರಾಧಿ ಪ್ರಜ್ಞೆ ಕಾಡಿತು. ಅಂದೇ ನನ್ನ ಇಬ್ಬರು ಮಕ್ಕಳಿಗೂ ಕನ್ನಡ ಪಾಠ ಪ್ರಾರಂಭಿಸಿದೆ ಮತ್ತು ಆದಷ್ಟೂ ಕನ್ನಡದಲ್ಲಿಯೇ ಪ್ರತಿಕ್ರಿಯಿಸಲು ಮೊದಲು ಮಾಡಿದೆ. 25 ಕಿಲೋ ತೂಕದ 6 ಚೀಲಗಳನ್ನು ಒಯ್ಯುವ ನಾನೇಕೆ ಕನ್ನಡ ಪುಸ್ತಕಗಳನ್ನು ಕೊಂಡೊಯ್ಯಲಿಲ್ಲವೆಂಬ ಪಶ್ಚಾತ್ತಾಪವಾಯಿತು. ಮರುದಿನವೇ ಬಸವನಗುಡಿಯ ಗೋಖಲೆ ವಿಚಾರ ಸಂಸ್ಥೆಯಿಂದ ಹಲವು ಪುಸ್ತಕಗಳು ನನ್ನ ಚೀಲ ಸೇರಿದವು. ಪುಸ್ತಕಗಳನ್ನು ಪ್ರತಿದಿನ ಓದಿ ಸವಿಯುವ ಸುಖ ಈಗ ನನ್ನದಾಗಿದೆ. ಕನ್ನಡ ಎಲ್ಲರ ಮನೆ ಮನ ತುಂಬಲಿ. ಸಿರಿ ಗನ್ನಡಂ ಗೆಲ್ಗೆ.


ದೀಪಾ ಶಂಕರ
5 ನೇ ತಂಡ( ಬ್ಯಾಚ್)
 ಬಿ
ಗೃಹಿಣಿ
ಬೆಂಟಾನ್ವಿಲ್
ಆರ್ಕ್ಯಾನ್ಸಸ್
ಯು.ಎಸ್.



ಲಾಲನೆ ಪಾಲನೆ

ಲಾಲನೆ-ಪಾಲನೆ
ನನ್ನ ಖಾತೆ ಪುಸ್ತಕಕ್ಕೆ ಏಪ್ರಿಲ್ ತಿಂಗಳ ನಮೂದು ಮಾಡಿಸಿಕೊಂಡು ಬಸವನಗುಡಿಯ ಅಂಚೆ ಕಛೇರಿಯಿಂದ ಮನೆಗೆ ಹೊರಟಿದ್ದೆ. ರಸ್ತೆ ದಾಟಿ ಗಾಂಧಿ ಬಜಾರು ಮಾರ್ಗವಾಗಿ ಬಸ್ ನಿಲ್ದಾಣ ತಲುಪಿದೆ. ಮಧ್ಯಾಹ್ನವಾದ್ದರಿಂದ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ನಿಲ್ದಾಣ ಕಿಕ್ಕಿರಿದಿತ್ತು. ಸಮಯದಲ್ಲಿ ಬಸ್ಸುಗಳೂ ವಿರಳ. ಸ್ವಲ್ಪ ಸಮಯ ಬಸ್ಸಿಗಾಗಿ ಕಾದುನಿಂತು ತಂಗುದಾಣದಲ್ಲಿ ಬಂದು ಕುಳಿತೆ. ನನ್ನಂತೆಯೇ ಬಸ್ಸಿಗಾಗಿ ಕಾದು ಕುಳಿತ ವೃದ್ಧರೊಬ್ಬರು ಮಾತಿಗೆ ಸಿಕ್ಕರು. ಕಿಕ್ಕಿರಿದ ಶಾಲಾ ಮಕ್ಕಳನ್ನು ನೋಡಿ, “ ಪರೀಕ್ಷೆ ಮುಗೀತು! ಇನ್ನು ಎರಡು ತಿಂಗಳು ರಸ್ತೇಲಿ ಇವರ ಕಾಟವಿಲ್ಲ”  ಎಂದರು. ಅವರ ಮಾತಿಗೆ ದನಿ ಗೂಡಿಸಿ ಮತ್ತೊಬ್ಬಾಕೆ, “ ಮನೇಲಿ ಹೇಗೆ ಇವರನ್ನು ಇನ್ನೆರಡು ತಿಂಗಳು ಸಂಭಾಳಿಸೋದುಎಂದರು. ನಮ್ಮ ಚರ್ಚೆಗೆ ಅಕ್ಕ-ಪಕ್ಕ ನಿಂತಿದ್ದವರೂ ಬಾಯಿ ಹಾಕಿದರು. ಎಲ್ಲರ ಸಮಸ್ಯೆ ಒಂದೇ. ಮಕ್ಕಳು ಹೇಳಿದ ಮಾತು ಕೇಳಲ್ಲ. ದೊಡ್ಡವರಿಗೆ ಗೌರವ ಕೊಡಲ್ಲ. ಮನೆಯಲ್ಲಿ ಮಾಡಿದ್ದು ತಿನ್ನಲ್ಲ. ಓದಲ್ಲ- ಬರಿಯಲ್ಲ. ದುಂದು ವೆಚ್ಚ ಮಾಡ್ತಾರೆ. ಯಾವಾಗಲೂ ಫೋನ್ ನೋಡ್ತಿರ್ತಾರೆ. ಕರೆದರೆ ಗಮನವೇ ಇಲ್ಲ. ದುರಹಂಕಾರ...ಹೀಗೇ ಇನ್ನು ಬೇಕಷ್ಟು ದೂರುಗಳು. ವಿಚಾರಗಳಿಗೆ ನಾನು  ಪ್ರತಿಕ್ರಿಯಿಸುವುದಕ್ಕಿಂತ ಮೊದಲೇ ನನ್ನ ಬಸ್ಸು ಬಂತು. ವಿದ್ಯಾರ್ಥಿಗಳ ನಡುವೆ ಸ್ವಲ್ಪ ಕಷ್ಟ ಪಟ್ಟೇ ಬಸ್ ಏರಿದೆ. ಅದೃಷ್ಟವೆಂಬಂತೆ ಕುಳಿತುಕೊಳ್ಳಲು ಕಿಟಕಿ ಬಳಿ ಜಾಗವೂ ದೊರಕಿತು. ನನ್ನ ಮನ ಬಸ್ ನಿಲುಗಡೆಯ ಬಳಿ ನಡೆದ ಚರ್ಚೆಯ ಸುತ್ತಲೇ ತಿರುಗ ತೊಡಗಿತು.

ಅವರ ದೂರುಗಳೊಂದೂ ಉತ್ಪ್ರೇಕ್ಷೆಯಲ್ಲ. ಎಲ್ಲವೂ ಕಣ್ಣಿಗೆ ಕಾಣುವ ಸತ್ಯವೇ. ನಮ್ಮ ದಿನಗಳೇ ಬೇರೆ. ಈಗಿನವರ ವರಸೆಯೇ ಬೇರೆ. ದೂರುಗಳು ತಂದೆ ತಾಯುಂದಿರೇ ಅವರ ಮಕ್ಕಳ ಮೇಲೇ ಹೇಳುವುದು ಕೂಡ ಇದೆ. ಇದಕ್ಕೆಲ್ಲ ಮೂಲ ಕಾರಣವನ್ನು ಹುಡುಕಲು ಪ್ರಯತ್ನಿಸಿದರೆ, ಮಕ್ಕಳ ಇಂದಿನ ಪ್ರವರ್ತನೆಗೆ ಪೋಷಕರೇ ಹೊಣೆ ಎನಿಸುತ್ತದೆ. ವಾದವನ್ನು ಸ್ವೀಕರಿಸಲು ಪೋಷಕರ ಸ್ವಾಭಿಮಾನ ಬಿಡುವುದಿಲ್ಲ. ಆದರೆ ಬಹುಮಟ್ಟಿಗೆ ಅದೇ ಸತ್ಯ. ಅವರವರ ಮಕ್ಕಳಿಗೆ ಜೀವನದಲ್ಲಿ  ಅವರ ಓದಿಗಂತ ಅವರ ನಡವಳಿಕೆಯೇ ಮುಖ್ಯವೆಂಬುದನ್ನು ಮನವರಿಕೆ ಮಾಡಿಸುವ ಕರ್ತವ್ಯ ಪೋಷಕರದೇ

ಹಾಗೆ ನೋಡಿದರೆ, ಮಕ್ಕಳ ನಡವಳಿಕೆ ಅವರ ಹುಟ್ಟಿನಂದ ಬಂದದ್ದೇನಲ್ಲ. ಕ್ರಮೇಣ ಅಭ್ಯಾಸವಾದದ್ದು. ಮಗು ಹುಟ್ಟಿದ ದಿನದಿಂದಲೇ ತಂದೆ-ತಾಯಿಯ ಕಣ್ಮಣಿಯಾಗುತ್ತದೆ. ತಂದೆ ತಾಯಿಯರಿಗೆ ಅಂದೇ ಜೀವನದಲ್ಲಿ ಏನೇ ಕಷ್ಟ ಬಂದರೂ ಎದಿರುಸುವ ನಂಬಿಕೆ ಇಮ್ಮಡಿಸುತ್ತದೆ. ಅದರ ಕಿರು ನಗುವೊಂದೇ ಸಾಕು, ತಮ್ಮೆಲ್ಲ ಒತ್ತಡಗಳಿಂದ ಹೊರಬರಲು. ಮನೆಯಲ್ಲಿ ಮಗುವಿನದೇ ದರ್ಬಾರು. ಅಜ್ಜಿ-ತಾತರಿಗಂತೂ ಮನೆ ಸ್ವರ್ಗಕಕ್ಕಿಂತಲೂ ಮಿಗಿಲು. ಪ್ರತಿದಿನವೂ ಹಬ್ಬವೇ. ಅದು ಮೊದಲ ಸಲ ಅಮ್ಮ-ಅಪ್ಪ ಅಂದ ಕ್ಷಣ ಅದ್ಭುತ. ಅನುಭವವನ್ನು ವರ್ಣಿಸಲು ಪದಗಳೇ ಇಲ್ಲ. ಪ್ರತಿ ತಾಯಿ ತಂದೆಗೂ ಜೀವನದಲ್ಲಿ ಯಾವಾಗ ನೆನದರೂ ಕಣ್ಣಂಚಿನಲ್ಲಿ ನೀರು ತರುವ ಅತ್ಯುತ್ತಮ ಕ್ಷಣ. ಅದರ ನಗು, ಅಳು, ಅಂಬೆಗಾಲು, ತೊದಲು ನುಡಿ, ಹಟ, ತಪ್ಪು ಹೆಜ್ಜೆ ಇವಲ್ಲದುರ ನಡುವೆ  ಮೊದಲ ಹುಟ್ಟು ಹಬ್ಬ ಬಂದೇ ಬಿಡುತ್ತದೆ.
 ಎರಡನೇ ವರ್ಷಕ್ಕೆಕಾಲಿಡುತ್ತಿದ್ದಂತೇ ತುಂಟಾಟ ಶುರು. ಸದಾ ಅಮ್ಮನ ಬಾಲ. ಅಡಿಗೆ ಮಾಡುವಾಗ, ಬಟ್ಟೆ ಒಗೆಯುವಾಗ ( ಅಥವಾ ತಂತಿಯ ಮೇಲೆ ಹರಡುವಾಗ) , ದೇವರ ಕೋಣೆಯಲ್ಲಿ, ಎಲ್ಲೆಲ್ಲಿಯೂ ಹಾಜರ್! ಎಲ್ಲವನ್ನೂ ಅನುಕರಿಸುವ ಪಕ್ಕಾಕಾಪಿ ಕ್ಯಾಟ್’. ವೇಳೆಗಾಗಲೇ ಮಗುವಿಗಾಗಿ ಶಾಲೆಯ ಹುಡುಕಾಟವೂ ಶುರು. ಎರಡು ವರ್ಷ ತುಂಬಲು ಮುದ್ದು ಮಾತುಗಳು ಉಕ್ಕುತ್ತವೆನಿದ್ದೆ ಕಡಿಮೆ ಮಾಡಿ, ಬಿಡುವಿಲ್ಲದಂತೆ ಚೇಷ್ಟೆ ಶುರುವಾಗುತ್ತದೆ. ತುಂಟುತನವನ್ನು ನಿಯಂತ್ರಿಸಲು ಕಾರ್ಟೂನ್, ಫೋನಿನಲ್ಲಿಯ ಆಟಗಳು ಪ್ರಾರಂಭ. ಮೂರನೇ ವರ್ಷದ ಹುಟ್ಟು ಹಬ್ಬಕ್ಕೆ  ಮಗುವಿಗೆ ಒಂದು ಟ್ಯಾಬ್ ಉಡುಗೊರೆ. ತಂದೆ-ತಾಯಿ ಯಾವುದಾದರು ಸಮಾರಂಭಕ್ಕೆ ಹೋದಾಗ, ಶಾಪಿಂಗ್ ಹೋದಾಗ, ಪೂಜೆ ಮಾಡುವಾಗ, ಮನೆಗೆ ಸ್ನೇಹಿತರು ಬಂದಾಗ...ಹೀಗೇ ಸರ್ವಕಾಲದಲ್ಲಿಯೂ ಮಗು ತೊಂದರೆ ಮಾಡದಿರಲು ಟ್ಯಾಬ್ ಉಪಯೋಗಕ್ಕೂ ಬಂತು. ಮನೆಯಲ್ಲಿನ ದೂರದರ್ಶನದಲ್ಲಿ ಅವರಿಗೆ ಬೇಕಾದ್ದು ನೋಡುವ ಸರ್ವ ಸ್ವಾತಂತ್ರ್ಯ ಮನೆಯವರದಾಯಿತು. ಶಾಲೆಗೆ ಸೇರುವ ಮೊದಲೇ ಬಿ ಸಿ ಡಿ ಗಳು, ನರ್ಸರಿ ಹಾಡುಗಳು ಎಲ್ಲಾ ಕಲಿಯಿತು. ಇದೆಲ್ಲಾ ಮನೆಯವರಿಗೆಲ್ಲಾ ಬಹಳ ಖುಷಿ, ಹೆಮ್ಮೆ ತಂದಿತು. ಮಧ್ಯೆ ಅದು ವಯಸ್ಸಿಗೆ ಮೀರಿದ ಕಾರ್ಟೂನ್ ವೀಕ್ಷಿಸುವುದು ಪೋಷಕರ ಗಮನಕ್ಕೆ ಬರುವುದೇ ಇಲ್ಲ. ಅಜ್ಜಿಯ ಕನ್ನಡಕ ಮುರಿದಿದ್ದು, ತಾತನ ಫೋನ್ ಎಸೆದಿದ್ದು, ಕಾರ್ಟೂನನ್ನು ಅನುಕರಿಸಿ ಎಲ್ಲವನ್ನೂ ಕಾಲಿನಿಂದ ತಳ್ಳುವುದು, ಯಾವುದಕ್ಕಾದರು ವಿರೋಧಿಸಿದರೆ ಕಿರುಚುವುದು.... ತರಹದ ವರ್ತನೆಗಳು ಸಣ್ಣ ಪುಟ್ಟ ತಪ್ಪುಗಳಂತೆಯೇ ಕಂಡವುಮೂರನೇ ವರ್ಷಕ್ಕೆ ಶಾಲೆಗೆ ಹೋಗಲು ಪ್ರಾರಂಭಿಸಿತು. ಪ್ರತಿದಿನ ಹೋಂ ವರ್ಕ್. ಅದನ್ನು ಪೂರ್ಣ ಮಾಡಲು ಮನವೊಲಿಸಲು ಮತ್ತೆ   ಟ್ಯಾಬ್, ಹೊರಗಡೆಯ ತಿಂಡಿ, ದಿನಕ್ಕೊಂದು ಆಟಿಕೆ. ಅಭ್ಯಾಸ ಎಲ್ಲದಕ್ಕೂ ರೂಢಿಯಾಯಿತು. ಇದೇ ದುಂದು ವೆಚ್ಚಕ್ಕೆ , ಹೇಳಿದ ಮಾತು ಕೇಳದಿರುವುದಕ್ಕೆ, ಹಟಮಾರಿತನಕ್ಕೆ  ನಾಂದಿಯಾಯ್ತು
ಚಿಕ್ಕಂದಿನಲ್ಲಿ ಮಕ್ಕಳು ಮಾಡಿದ್ದೆಲ್ಲಾ ಪೋಷಕರಿಗೆ  ಮುದ್ದು. ಎಲ್ಲಕ್ಕೂಪಾಪ ಮಗು, ಅದಕ್ಕೇನು ತಿಳಿಯುತ್ತೆ ?’ ಎನ್ನುವ ಕ್ಷಮೆ. ಮಕ್ಕಳು ದೊಡ್ಡವರಾದಂತೆ ಅವರ ತಪ್ಪುಗಳು ಪೋಷಕರ ವ್ಯಾಮೋಹದ ಬೂದಿಯಿಂದ ಮುಚ್ಚಿಹೋಗುತ್ತವೆ. ಬೇರೆಯವರಿಂದ ಮಕ್ಕಳ ಮೇಲೆ ದೂರು ಬರುವವರೆಗೂ, ಮಕ್ಕಳ ವರ್ತನೆ ತಿದ್ದುವ  ಗೋಜಿಗೆ ಹೋಗುವುದಿಲ್ಲ. ದೂರು ಬಂದಾಗ ಅವಮಾನಕ್ಕೆ ಒಳಗಾಗಿ, ಆಗ ಮಕ್ಕಳಿಗೆ ಶಿಸ್ತಿನ ಪಾಠ. ವೇಳೆಗಾಗಲೇ ಅಶಿಸ್ತು ಮಕ್ಕಳಿಗೆ ಒಗ್ಗಿ ಹೋಗಿರುತ್ತದೆ. ಅವರಿಗೆ ಅದರಿಂದ ಹೊರಬರಲು ಪೂರಕ  ವಾತಾವರಣ ಮನೆಯಲ್ಲಿ ಸೃಷ್ಟಸಬೇಕು. ಬದಲಿಗೆ ಮಕ್ಕಳನ್ನು ಹಂಗಿಸುವುದು, ಅವರ ತಪ್ಪನ್ನು ಮತ್ತೆ ಮತ್ತೆ ನೆನಪಿಸುವುದು, ತಂದೆ-ತಾಯಿ ಇಬ್ಬರೂ ಕಟುವಾಗಿ ದಂಡಿಸುವುದು... ಹೀಗೆ ಮಾಡುವುದರಿಂದ, ಅವಮಾನಕ್ಕೆ ಗುರಿಯಾಗಿ ಅವರಲ್ಲಿ  ಜಿದ್ದು ಮೂಡುವ ಅಪಾಯವೇ ಹೆಚ್ಚು. ಮಕ್ಕಳು ಸಣ್ಣ ಪುಟ್ಟ ತಪ್ಪು ಮಾಡಿದಾಗಲೇ ತಿದ್ದುವುದು ಸುಲಭ. ಅದೇ ಸರಿ. ಅಂದು ಅಜ್ಜಿಯ ಕನ್ನಡಕವನ್ನು ಸಿಟ್ಟಿನಲ್ಲಿ ಎಸದದ್ದನ್ನು ದಂಡಿಸಿದ್ದಿದ್ದರೆ, ಇಂದು ಬೆಲೆ ಬಾಳುವ ಫೋನ್ ಒಡೆಯುತ್ತಿರಲಿಲ್ಲ
 ಈತರಹದ ತಂಟೆ-ತರಲೆಗಳು ಆಗಾಗ್ಗೆ ಮರುಕಳಿಸಿದಾಗ ಪೋಷಕರ ಸಹನೆಯ ಕಟ್ಟೆ ಒಡೆದು, ಮಕ್ಕಳು ತೀವ್ರವಾಗಿ ಶಿಕ್ಷಿಸಲ್ಪಡುತ್ತಾರೆ. ನಂತರ ಮಕ್ಕಳು ಮಾಡುವ ಕೆಲಸವೆಲ್ಲಾ ತಪ್ಪೇ. ಟಿ.ವಿ ನೋಡುವಂತಿಲ್ಲ. ಆಟ ಆಡುವಂತಿಲ್ಲ. ಸ್ನೇಹಿತರೊಂದಿಗೆ ಹೊರಗೋಗುವಂತಿಲ್ಲ. ಹೀಗೆ ಎಲ್ಲಬೇಡಗಳುಮಕ್ಕಳಿಗೆ  ಉಸಿರು ಕಟ್ಟಿದಂತಾಗಿತ್ತದೆ. ಇದು ಅವರ ವ್ಯಕ್ತಿತ್ವ ಮತ್ತು ಓದಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವುದಕ್ಕೂ ಬಗ್ಗದ ಮಕ್ಕಳ ನಡವಳಿಕೆ ತಿದ್ದುವುದಕ್ಕೆ ಥೆರಪಿಸ್ಟ್ ಮೊರೆ ಹೋಗುತ್ತಾರೆ. ಥೆರಪಿಸ್ಟ್ ಸಹಾಯ ಪಡೆಯಯುವುದು ತಪ್ಪಲ್ಲ. ಅದು ಸರಿಯಾದ ಸಮಯಕ್ಕೆ ಆಗಬೇಕು. ಕಬ್ಬಿಣ ಕಾದಾಗ ಬಗ್ಗಿಸುವಂತೆ.
ಇದಲ್ಲದೆ, ಆಧುನಿಕತೆಯ ಹುಚ್ಚು ಪೋಷಕರ ವಿಚಾರಶೀಲತೆಯನ್ನು ಕುಂಠಿತ ಗೊಳಿಸಿದೆ. ಕಷ್ಟ ಪಟ್ಟಾದರೂ ದುಬಾರಿ ಜೀವನ ನಡೆಸುವುದು ಅವಶ್ಯಕವೆಂದು ತಿಳಿದಿದ್ದಾರೆ. ಒಳ್ಳೆಯ ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ದುಬಾರಿ ಶಾಲೆಯೇ ಒಳ್ಳೆಯ ಶಾಲೆ ಎಂದು ಭ್ರಮಿಸುತ್ತಾರೆ. ಪಾಠ-ಆಟದ ಜೊತೆಗೆ ಸಂಗೀತ, ಕರಾಟೆ, ಯೋಗ, ನೃತ್ಯ, ರೋಬೋಟಿಕ್ಸ್, ಈಜು, ಹೀಗೆ ಎಲ್ಲವನ್ನೂ ಶಾಲೆಯೇ ಕಲಿಸಬೇಕು. ಹೋಂ ವರ್ಕ ಕೂಡ ಶಾಲೆಯಲ್ಲಿಯೇ ಮುಗಿಸಿ ಬರಬೇಕು. ಶಾಲೆಯಲ್ಲಿಯೇ ಕ್ಯಾಂಟಿನ್ ಸೌಲಭ್ಯವೂ ಇರಬೇಕು. ಶ್ಲೋಕ, ರಂಗೋಲಿ, ಮೆಹಂದಿ, ಸಣ್ಣ ಪುಟ್ಟ ಹಾಡುಗಳನ್ನು ಕಲಿಸುವ ಕನಿಷ್ಠ ಸಹನೆ ತಾಯಂದಿರಲ್ಲಿಲ್ಲ. ಎಲ್ಲವನ್ನು ಹೊರಗಡೆಯೇ ತರಬೇತಿ ಕೊಡಿಸುತ್ತಾರೆ. ಇನ್ನು ತಂದೆಯ ವರಸೆಯೂ ಅದೇ. ಸಮಯವಿಲ್ಲವೆಂಬ ಮಂತ್ರ. ಇರುವ ಸಮಯದಲ್ಲಿಯೇ ಮಕ್ಕಳೊಂದಿಗೆ ಕಳೆದರೆ ಮಕ್ಕಳ ಮನಕ್ಕೆ ಹಿತ. ತಂದೆಗೂ ಕೆಲಸದ ಒತ್ತಡದಿಂದ ಬಿಡುವು. ತಂದೆ-ತಾಯಿಯ ಕೆಲಸ ಬರೀ ಶಾಲೆಯ ಮತ್ತು ಖಾಸಗಿ ಶಿಕ್ಷಣದ ಶುಲ್ಕ ಭರಿಸುವುದು ಮಾತ್ರವಲ್ಲ. ಪ್ರತಿ ಹೆಜ್ಜೆಯಲ್ಲಿಯು ಅವರನ್ನು ತಿದ್ದುವ ಸಂಪೂರ್ಣ ಜವಾಬ್ದಾರಿ ಪೋಷಕರದೇ. ದಿನದ ಬಹು ಭಾಗ ಮಕ್ಕಳು ಶಾಲೆಯಲ್ಲಿ ಕಳೆದರೂ  ಅಲ್ಲಿ ಪ್ರತಿಯೊಬ್ಬರಿಗೂ  ಪ್ರತ್ಯೇಕ ಗಮನ ಕೊಡಲಾಗುವುದಿಲ್ಲ. ಹಣ ಕೊಟ್ಟ ಮಾತ್ರಕ್ಕೆ ಶಾಲಾ ಸಿಬ್ಬಂದಿಯನ್ನು ನಿಂದಿಸುವುದು ಪರಿಹಾರವಲ್ಲಶಾಲೆಯಲ್ಲಿ ಕಲಿತ ಪಠ್ಯ ಪುಸ್ತಕದ ವಿಷಯಗಳನ್ನು ಮನೆಯಲ್ಲಿ ಅಭ್ಯಾಸ ಮಾಡುವಂತೆ ಒಳ್ಳೆಯ ನಡವಳಿಕೆಗಳನ್ನೂ ಅಭ್ಯಾಸ ಮಾಡಿಸ ಬೇಕು
ಭಾಷೆಗಳಿಗೂ ಬೇರೆ ವಿಷಯಗಳಿಗೆ ಕೊಟ್ಟಷ್ಟೇ ಆದ್ಯತೆ ಕೊಡಬೇಕು. ಭಾಷೆಗಳನ್ನು ಅಲಕ್ಷ್ಯ ಮಾಡಿದರೆ, ಮಕ್ಕಳಿಗೆ ಮಾನವೀಯತೆಯನ್ನು  ಕಲಿಸಲು ಬೇರೆ ಮಾರ್ಗಗಳಿಲ್ಲ. ಅಲ್ಲಿನ ಕಥೆ, ಕಾವ್ಯ, ನಾಟಕಗಳ ಅಧ್ಯಯನ ಮಕ್ಕಳ ವಿಚಾರ ಶೀಲತೆಯನ್ನು ಹೆಚ್ಚಿಸುತ್ತದೆ. ಕಥೆಗಳಲ್ಲಿನ ಪಾತ್ರಗಳು ವ್ಯಕ್ತಿತ್ವದ ವಿಕಾಸಕ್ಕೆ ಪೂರಕ. ಪಠ್ಯದ ವಿಷಯಗಳನ್ನು ಯಾರುಬೇಕಾದರೂ, ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಕಲಿಸಬಹುದು. ಅವರವರ ಮಕ್ಕಳಿಗೆ ಆಯಾ ವಯಸ್ಸಿಗೆ ತಕ್ಕಂತೆ ವ್ಯಕ್ತಿತ್ವವನ್ನು ರೂಪಿಸುವ ಕರ್ತವ್ಯ ಪೋಷಕರದೇ.

ಹಾಗೆಂದು ಶಾಲೆಯ-ಶಿಕ್ಷಕರ  ಪಾತ್ರವೇ ಇಲ್ಲವೆಂದಲ್ಲ. ಬಹುತೇಕ ಪ್ರತಿಷ್ಠಿತ ಶಾಲೆಗಳು ತಮ್ಮ ಜನಪ್ರಿಯತೆಗಾಗಿ ಫಲಿತಾಂಶಕ್ಕೆ ಒತ್ತು ಕೊಡುತ್ತಿದ್ದಾರೆ. ನಿಟ್ಟಿನಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಮೀರಿದ್ದನ್ನು ಕಲಿಸುತ್ತಿದ್ದಾರೆ. ಪ್ರತಿದಿನವೂ ಪರೀಕ್ಷೆ. ನೂರಕ್ಕೆ ನೂರು ನಿರೀಕ್ಷೆ. ಪ್ರಯತ್ನದಲ್ಲಿ  ಮಕ್ಕಳು ನಿರೀಕ್ಷಿತ ಫಲಿತಾಂಶ ನೀಡದಿದ್ದಲ್ಲಿ, ಅನವಶ್ಯಕ ಒತ್ತಡಕ್ಕೆ ಗುರಿಯಾಗುತ್ತಾರೆ. ವಯಸ್ಸಿಗೆ ತಕ್ಕನಾದ ಪಾಠವೇ ಸೂಕ್ತ. ಅಂಕ ಕೇವಲ ಒಂದು ಸಂಖ್ಯೆಯಷ್ಟೇ. ರಕ್ತದಲ್ಲಿನ ಸಕ್ಕರೆ ಪ್ರಮಾಣದಂತೆ. ಭವಿಷ್ಯದ ದೃಷ್ಠಿಯಿಂದ ಕೇವಲ ಅಂಕಗಳಿಗೆ ಆದ್ಯತೆ ನೀಡಿದರೆ, ಮಕ್ಕಳ ಬಾಲ್ಯವನ್ನು ಅಡವಿಟ್ಟಂತಾಗುತ್ತದೆ. ಓದಿನ ಜೊತೆ ಜೀವನ ಮೌಲ್ಯಗಳನ್ನು ಅಳವಡಿಸಲು ಒತ್ತು ನೀಡಬೇಕು. ಮಾನವೀಯತೆ, ಸಹಾನುಭೂತಿ ಸಹಜವಾಗಿ ಅಭ್ಯಾಸ ಮಾಡಿಸಬೇಕು

ಪೋಷಕರೇ ಮಕ್ಕಳಿಗೆ ಆದರ್ಶ. ಮಕ್ಕಳೆದುರಿಗೆ ಮನೆಯಲ್ಲಿನ ಹಿರಿಯರನ್ನು ಗದರುವುದು, ತಾಯಿತಂದೆಯರು ಪರಸ್ಪರ ಜರಿಯುವುದು, ನೆರೆಹೊರೆಯವರನ್ನಾಗಲೀ, ಶಾಲಾ ಶಿಕ್ಷಕರನ್ನಾಗಲೀ ಮೂದಲಿಸುವುದು ಪ್ರಮಾದಕರ. ಶಾಲೆಯಲ್ಲಿಯೂ ಮಕ್ಕಳು ಬೇರೆಯವರನ್ನು ಅನುಸರಿಸಿ ತಪ್ಪಾಗಿ ನಡೆದು ಕೊಳ್ಳುವ ಸಂಭವವಿದೆ. ಮಕ್ಕಳ ಸ್ವಭಾವದ ದೋಷಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ತಿದ್ದುವುದು ಕ್ಷೇಮಕರ. ತಪ್ಪು-ಸರಿಗಳ ಸೂಕ್ಷ್ಷತೆ ಅವರಿಗೆ ತಿಳಿಸುವ ಕಲೆ ಪೋಷಕರಿಗೆ ಅತ್ಯಗತ್ಯ. ಮಕ್ಕಳೊಂದಿಗೆ ಸಮಯ ಹಂಚಿಕೊಂಡರಷ್ಟೇ ಇದು ಸಾಧ್ಯ. ರಿಯಾಲಿಟಿ ಶೋಗಳಲ್ಲಿ ಕಾಣಿಸುವ ಮಕ್ಕಳಿಗೆ, ತಮ್ಮ ಮಕ್ಕಳನ್ನು ಹೋಲಿಸಿ ಮೂದಲಿಸುವ ಮೊದಲು, ತಮ್ಮ ವಯಸ್ಸಿನವರು ತೀರ್ಪುಗಾರರಾಗಿರುವುದನ್ನೂ ಗಮನಿಸ ಬೇಕು


ಸಾಮಾನ್ಯವಾಗಿ ಬಸ್ಸಿನಲ್ಲಿ ಕುಳಿತ ತಕ್ಷಣ ಅಯ್ಯೋ ಇನ್ನೆಷ್ಟು ಹೊತ್ತಪ್ಪ ಎಂಬಂತಹ ಅತೃಪ್ತಿ ಕಾಡುತ್ತಿತ್ತು. ನನ್ನ  ವಿಚಾರ ಲಹರಿಯಲ್ಲಿ ದಾರಿ ಸವೆದದ್ದೇ ತಿಳಿಯಲಿಲ್ಲ ಚಿಂತನೆಗಳು ನನ್ನ ಕರ್ತವ್ಯಗಳನ್ನೂ ಜಾಗೃತ ಗೊಳಿಸಿದವು. ಅಂದು ಶಾಲೆಯ ಕೊನೆದಿನವೆಂದು ಹೊಳೆದು, ಮನೆ ಸೇರುವ ಮೊದಲು ಶಾಲೆಯ ಬಸ್ ನಿಲುಗಡೆಯ ಬಳಿ  ಮಕ್ಕಳನ್ನು ನಿರೀಕ್ಷಿಸುತ್ತಾ ನಿಂತೆ. ಬಸ್ ಇಂದ ಇಳಿದ ಮಕ್ಕಳ ಮುಖದಲ್ಲಿನ ಬೇಸಿಗೆ ರಜೆಯ ಉತ್ಸಾಹ ನನ್ನ ಬಿಸಿಲ ಬಳಲಿಕೆಯನ್ನೆಲ್ಲಾ ನೀಗಿಸಿತು.ಮಕ್ಕಳ ಜೀವನವನ್ನು ಬಾಲ್ಯದ ಸವಿ ನೆನಪುಗಳಿಂದ ಸ್ಮರಣೀಯ ಮಾಡುವ ಜವಾಬ್ದಾರಿಯುತ ಯೋಚನೆ ತುಂಬಾ ಪ್ರಿಯವಾಯಿತು