ಕಾರ್ತೀಕ ಮಾಸದ ಕೊನೆ ಸೋಮವಾರವೆಂದು ಈಶ್ವರನ ದರ್ಶನಕ್ಕೆ ಮನೆ ಬಳಿಯ ಗುಡಿಗೆ ಹೋಗಿದ್ದೆ. ಸೋಮವಾರವಾದ ಕಾರಣ ಜನ ಜಂಗುಳಿ ಇಲ್ಲ. ಇರುವ ಭಕ್ತರನ್ನು ಸಾಲಾಗಿ ದರ್ಶನ ಮಾಡುವ ವ್ಯವಸ್ಥೆ ಮಾಡಿದ್ದರು. ಈಶ್ವರನನ್ನು ಕಣ್ತುಂಬಿತೊಂಡು, ಒಂದು ಪ್ರದಕ್ಷಿಣೆ ಹಾಕಿ, ಅಲ್ಲೇ ಮೂಲೆಯಲ್ಲಿ ಕುಳಿತೆ. ಬಾಯಿ ಶಿವ ಪಂಚಾಕ್ಷರಿ ಪಠಿಸುತ್ತಿದ್ದರೂ ನನ್ನ ಕಣ್ಣು ಸುತ್ತಲೂ ಗಮನಿಸುತ್ತಿತ್ತು. ನಾ ಕುಳಿತ ಬಲಗಡೆ ಮೂಲೆಯಲ್ಲಿ ಭಾರೀ ಜನ! ಪ್ರಸಾದಕ್ಕಿರಬಹುದೆಂದು ಎದ್ದು ನಾನುೂ ಆ ಸಾಲು ಸೇರಿದೆ. ಸಾಲು ಮುಂದೆ ಸಾಗುತ್ತಿದ್ದಂತೆ, ಬರಿಗೈಯಲ್ಲಿ ಬರುವವರ ನೋಡಿ ಪ್ರಸಾದದ ಸಾಲಲ್ಲವೆಂದು ಖಚಿತವಾಯಿತು. ಕುತೂಹಲ ಬಿಡದೆ ಮುಂದೆ ಹೋಗಿ ನೋಡಿದರೆ....ನಾಡಿ ಶಾಸ್ತ್ರ ಹೇಳುವ ಹಿಮಾಲಯದ ಸನ್ಯಾಸಿ!! ತಕ್ಷಣ ಅಮ್ಮ ಹೇಳಿದ ಗಾದೆ “ಶಿವ ಕೊಡದಿದ್ದು ಸಿಂಗಲೀಕ ಕೊಡ್ತಾನೆ?” ಮನಸ್ಸಿನಲ್ಲಿ ಮೂಡಿ ನಗು ಬಂತು. ಓಂಕಾರೇಶ್ವರ ದೇವಾಲಯದಲ್ಲಿ ೧೨ ಜ್ಯೋತಿರ್ಲಿಂಗಗಳೂ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಖ್ಯ ದೇವರು ಓಂಕಾರೇಶ್ವರ. ಅದ್ಭುತವಾದ ಅಲಂಕಾರ. ಮೆಲು ದನಿಯಲ್ಲಿ “ಓಂ ನಮಃ ಶಿವಾಯ” ತೇಲಿ ಬರುತ್ತಿತ್ತು.
ಇಷ್ಟಾದರೂ ಶಿವನನ್ನು ಪ್ರಾರ್ಥಿಸುವುದು ಬಿಟ್ಟು ಸನ್ಯಾಸಿಯ ಬಳಿ ಶಾಸ್ತ್ರ ಕೇಳುವುದೆಂತು? ಅದೇನು ಸಮಸ್ಯೆ ಇದ್ದರೂ ಈಶ್ವರನ ಕೃಪೆ ಇಲ್ಲದೆ ಬಗೆಹರಿಯುವುದೇ? ಅಸಲು ತನ್ನ ಸಂಸಾರದ ರಗಳೆಯೇ ಬೇಡವೆಂದು ಹಿಮಾಲಯಕ್ಕೆ ಹೋಗಿ ಸನ್ಯಾಸಿಯಾದವನಿಗೆ, ಇವರೆಲ್ಲರ ಸಮಸ್ಯೆ ಬಗೆಹರಿಸುವ ಉಸಾಬರಿ ಯಾಕೆ? ಇಷ್ಟಕ್ಕೂ ಇವರ ಕಷ್ಟಗಳೇನಿರಬಹುದು? ಹೀಗೆ ನನ್ನ ತರ್ಕ ಸಾಲಿನಲ್ಲಿ ನಿಂತವರನ್ನು ಮಾತಾಡಿಸಿತು. ಒಬ್ಬಾಕೆ ಇಂಜಿನೀಯರಿಂಗ್ ಓದಿರುವ ಮಗಳಿಗೆ ಕೆಲಸ ಸಿಕ್ಕಿಲ್ಲ ಎಂದಳು, ಮತ್ತೊಬ್ಬರು ೩೮ ವರ್ಷದ ಮಗನಿಗೆ ಮದುವೆ ಗೊತ್ತಾಗಿಲ್ಲ ಎಂದಳು. ಇನ್ನೊಬ್ಬ ತಾತ ದೇವರು ನಮ್ಮನ್ನ ಸುಖವಾಗಿ ಇಡಲಿಲ್ಲ ಅಂತ ನೇರವಾಗಿ ದೂರಿದ. ತಾತನ ಟೀಕೆ ಸ್ವಲ್ಪ ನನ್ನಲ್ಲಿ ಆಸಕ್ತಿ ಮೂಡಿಸಿ ಮಾತು ಮುಂದುವರೆಸಿದೆ. ಬಂದ ಕೆಲಸ ಮುಗಿಸಿ ಮನೆಗೆ ಹೊರಡೆಂದು ಮನ ಎಚ್ಚರಿಸುತ್ತಿದ್ದರೂ ಅಲಕ್ಷಿಸಿ “ ನಿಮ್ಮದು ಯಾವೂರು?” ಎಂದು ಸಂಭಾಷಣೆ ಶುರುವಾಯ್ತು! ಮುಂದುವರೆದ ಸಂಭಾಷಣೆಯಲ್ಲಿ ತಾತ ಹೇಳಿದ್ದು, “ನಾವು ಜೀವನ್ದಲ್ಲಿ ಭಾರೀ ಕಷ್ಟ ಪಟ್ವಿ , ಆದರೂ ದೇವ್ರು ಸುಖ ಕೊಡಲಿಲ್ಲ, ನನಗೆ ಮೂರು ಮಕ್ಕಳು. ದೊಡ್ಡೋನು ಬ್ಯಾರೆ ಹೋಗ್ತೀನಿ ಅಂದ ಬಾಗ ಬಿಸಾಕ್ದೆ , ಮಗಳ ಸಂಸಾರವೂ ಚನ್ನಾಗಿಲ್ಲ, ನಾವೂ ಒಳ್ಳೆ ಕಡೆ ನೋಡಿ ಮದ್ವೆ ಮಾಡ್ಲಿಲ್ಲ ಬಿಡಿ....ಸಣ್ಣೋನ್ ಬಂದ್ ಬೆಂಗ್ಳೂರ್ ಸೇರ್ಕಂಡ...ಯಾರ್ನೋ ಮದ್ವೆ ಆಗವ್ನಂತೆ!! ಇನ್ನು ನಮಗೂ ಹಾರ್ಟ ಪ್ರಾಬ್ಲಂ! ನಮ್ಮ ಹೆಂಡತೀಗೂ ಹಾರ್ಟ ಪ್ರಾಬ್ಲಂ”. ಇವರ ತೊಂದರೆಗಳ ಪಟ್ಟಿ ಕೇಳಿ ಬೇಜಾರಾದ್ರೂ ...ಇದ್ರಲ್ಲಿ ದೇವರ ಕಿತಾಪತಿ ಎಲ್ಲಿ ಅಂತ ತರ್ಕ ಶುರುವಾಯ್ತು. ಆದರೂ “ ನಿಮಗ್ಯಾಕೆ ಹೃದಯದ ತೊಂದರೆ? ಮಕ್ಕಳದೇ ಚಿಂತೆ ಮಾಡಬಾರ್ದು. ನಿಮ್ಮ ಕರ್ತವ್ಯ ನೀವ್ ಮಾಡಿದಿರಿ, ಮಕ್ಕಳು ಅಲಕ್ಷ ಮಾಡಿದ್ರೇನು ನಿಮ್ಮಹೆಂಡ್ತೀನ ನೀವೇ ಚನ್ನಾಗಿ ನೋಡ್ಕೋಬಹುದು” ಎಂದು ಸಮಾಧಾನ ಮಾಡಲು ಯತ್ನಿಸಿದೆ.
ಆತ “ ಅಯ್ಯೋ ನಮಗೀಗ ಬುದ್ದಿ ಬಂದದೇ...ವಯಸ್ನಾಗಿದ್ದಾಗ ನಾವು ಡ್ರಿಂಕ್ಸ ಮಾಡ್ತಿದ್ವಿ...ಆವಾಗವಾಗ ಬೀಡಿ ಅಭ್ಯಾಸನೂ ಇತ್ತು...ಏನಾದ್ರೇಳಿ ದೇವ್ರಿಗೆ ದಯೆ ಇಲ್ಲ...ಈ ವಯಸ್ನಾಗೆ ಆಸ್ಪತ್ರೆ ಅಲೆಯೋ ಹಾಗೆ ಮಾಡ್ದ” ಅಂದರು. ಇನ್ನೂ ನಾಡಿ ಶಾಸ್ತ್ರದ ಸಾಲಿನಲ್ಲೇ ಇದ್ದ ನನ್ನನ್ನು ಆತ “ನಿಮ್ದು ಏನು ಸಮಸ್ಯೆ?” ಎಂದರು. ನಾನು “ಬರುವಾಗ ಗಾಡೀಲ್ ಬಂದಿಲ್ಲ...ಈಗ ಆಟೋ ಸಿಗುತ್ತೋ ಇಲ್ಲವೋ ಅದೇ ಸಮಸ್ಯೆ, ನಾ ಬರ್ತೀನಿ ಯಜಮಾನ್ರೆ...ನೀವು ಕೂತ್ಕೊಳ್ಳಿ...ಜನ ಜಾಸ್ತಿ ಇದಾರೆ” ಎಂದು ಇಳಿದು ಬಂದೆ. ನನ್ನ ನಿರೀಕ್ಷೆಯಂತೆಯೇ ಆಟೋಗಳ ಸುಳಿವಿಲ್ಲ!! ಪೋನ್ನಲ್ಲಿ ನೆಟ್ವರ್ಕ ಇಲ್ಲ..! ಸರಿ ನಡೆದೇ ಮನೆ ಸೇರೋಣೆಂದು ಹೊರಟೆ. ನನ್ನ ಹಿಂದೆಯೇ ಆ ತಾತನೂ ಇಳಿದು ಬರುತ್ತಿದ್ದದ್ದನ್ನು ಗಮನಿಸಿ ನಿಂತೆ.
“ನಮ್ಮ ಕಥೆ ಕೇಳಿ ನಿಮಗೆ ಬೇಜಾರಾಯ್ತೇನೋ..ಏನನ್ಕ ಬೇಡಿ... ಏನೋ ಸಂಕಟ ಮಾತಾಡಸ್ತು” ಅಂದರು. ನಾನು “ಬೇಜಾರೇನಿಲ್ಲ...ಆದ್ರೂ ನೀವೇಳಿದ್ದಕ್ಕೆ ಹೇಳ್ತೀನಿ...ನಿಮ್ಮ ಈ ಕಷ್ಟಾನೆಲ್ಲಾ ಆ ಸನ್ಯಾಸಿ ಬಗೆಹರಿಸಲ್ಲ...ಕುಡಿತ-ಬೀಡಿ ಅಭ್ಯಾಸ ಇರೋರ್ಗೆಲ್ಲ ಆರೋಗ್ಯ ಸಮಸ್ಯೆ ಬರುತ್ತೆ...ನೀವು- ನಿಮ್ಮಕ್ಕಳು ಕೊಟ್ಟಿರೋ ಟೆನ್ಷನ್ಗೆ ಯಾವ ಚಟನೂ ಇಲ್ಲದ ನಿಮ್ಮ ಹೆಂಡ್ತೀಗೂ ಸಮಯ್ಯೆ ಬಂದಿದೆ...ಇಲ್ಲಿ ದೇವರದೇನೂ ಕೈವಾಡ ಇಲ್ಲ. ಸಾಧ್ಯ ಆದರೆ ಮಗಳನ್ನ ಕರ್ಕೊಂಡು ಬಂದು ಮನೇಲಿಟ್ಕೊಳ್ಳಿ...ಹೇಗೂ ಆಕೆ ಸಂಸಾರ ಸರಿ ಇಲ್ಲಾಂದ್ರಿ...ನಿಮಗೂ ಈ ವಯಸ್ನಲ್ಲಿ ಮಕ್ಕಳಾಸ್ರೆ ಬೇಕು ಆಕೆಗೂ ನಿಮ್ಮ ಬೆಂಬಲ ಬೇಕು ಎಂದು ಮಾತು ಮುಗಿಸಲು ಯತ್ನಿಸಿದೆ”. ಆತ “ ಹಂಗಂತೀರಾ....ನಮ್ಮ ಕೈಲೇ ಎಲ್ಲಾ ಇದ್ರೆ ಈ ದೇವರ ದಾಕ್ಷಿಣ್ಯ ಯಾಕೆ ?”ಅಂದ್ರು. ಅವರ ಪ್ರಶ್ನೆಗೆ ನನ್ನ ಕಿರು ನಗುವೇ ಉತ್ತರವಾಯ್ತು...ಅವರೂ ನಕ್ಕು ಮತ್ತೆ ದೇವಸ್ಥಾನಕ್ಕೆ ಹೊರಟರು. ನಾ ನಡೆದು ಮನೆ ಸೇರಿದೆ.