Tuesday, August 11, 2020

ಸೈಲೆನ್ಸ್ ಪ್ಲೀಸ್....


ಬೆಳಗ್ಗೆ ಸುಮಾರು ಆರಕ್ಕೆ ಎದ್ದರೆ, ಮಕ್ಕಳಿಬ್ಬರನ್ನೂ ಶಾಲೆಗೆ ಕಳಿಸುವವರೆಗೂ ಗಡಿಯಾರ ನೋಡಲು ಕೂಡ ಪುರುಸೊತ್ತು ಇರುತ್ತಿರಲಿಲ್ಲ. ನಾ ಎದ್ದು ಗೀಸರ್ ಹಾಕಿ, ಅಕ್ಕಿ-ತರಕಾರಿ ಬೇಯಲು ಕುಕ್ಕರಿಕೆ ಹಾಕಿ, ಚಪಾತಿಗೆ ಹಿಟ್ಟು ಕಲೆಸಿ, ಅನ್ನಕ್ಕೆ ಮತ್ತು ಪಲ್ಯಕ್ಕೆ ಒಗ್ಗರಣೆ ಹಾಕಿ, ಮಕ್ಕಳನ್ನು ಎಬ್ಬಿಸಿ, ಅವರಿಗೆ ಹಾಲು ಕಾಫಿಗಳನ್ನು ಕೊಟ್ಟು, ಸ್ನಾನಕ್ಕೆ ಕಳಿಸಿ, ಸ್ನಾನದಿಂದ ಬರುವುದರೊಳಗೆ  ಯುೂನಿಫಾರಂ ಇಸ್ತ್ರಿಮಾಡಿ, ಕೂಗುತ್ತಿರುವ ಕುಕ್ಕಕ್  ಬಾಯಿಮುಚ್ಚಿಸಿಸಲು ಅಡಿಗೆ ಮನೆಗೆ ಹಾರಿ, ಘಳಿಗೆ ಘಳಿಗೆಗೂ ಪ್ರೆಶರ್ ಇಳಿದಿದೆಯೇ ಎಂದು ಕುಕ್ಕರಿನ ವೈಟ್ ಎತ್ತಿ-ಎತ್ತಿ ನೋಡುತ್ತಾ, ಚಪಾತಿಗಳ ಒತ್ತಿ, ಹೆಂಚಿನ ಮೇಲೆ ಬೇಯಿಸಿ, ಅಷ್ಟರೊಳಗೆ ಕುಕ್ಕರಿನ ಪ್ರೆಶರನ್ನು ಬಲವಂತದಿಂದ ತೆಗೆದು, ಬೆಂದ ತರಕಾರಿಗೆ ಒಗ್ಗರಣೆ ಕಲಸಿ ಉಪ್ಪು ಸಾಕೇ ಎಂದು ಮರೆಯದೇ ಪರೀಕ್ಷಿಸಿ, ಡಬ್ಬಗಳಿಗೆ ತುಂಬಿ, ನೀರಿನ ಬಾಟಲ್ ತುಂಬಿಸಿ, ಚಮಚ ಕರವಸ್ತ್ರದ ಸಮೇತ ಚೀಲದೊಳಿರಿಸಿ, ಯೂನಿಫಾರಂ ಧರಿಸಿ ಬಂದ ಮಕ್ಕಳಿಗೆ ತಲೆಬಾಚಿ ಹಣೆಗಿಟ್ಟು, ಬಲವಂತದಿಂದ ತಿಂಡಿ ತಿನ್ನಿಸಿ, ಪುಸ್ತಕದ ಚೀಲದಲ್ಲಿ ವೇಳಾ ಪಟ್ಟಿಗೆ ಸರಿಯಾದ ಪುಸ್ತಕಗಳಿವೆಯೇ ಎಂದು ಖಾತ್ರಿ ಪಡಿಸಿಕೊಂಡು, ತಯಾರಾದ ಮಕ್ಕಳನ್ನು ಬಸ್ ನಿಲ್ದಾಣಕ್ಕೆ ಒಯ್ದು, ಬಸ್ ಚಾಲಕನಿಗೆ ಫೋನಾಯಿಸಿ ಇನ್ನೂ ಬರಲಿಲ್ಲವೇಕೆಂದು ದಬಾಯಿಸಿ, ನಂತರ  ಮಕ್ಕಳಕೆನ್ನೆಗೆ ಮುತ್ತನೊತ್ತಿ ಶಾಲೆಯ ಬಸ್ ಹತ್ತಿಸಿ ಮನೆಗೆ ಬಂದು ಬೆಳಿಗ್ಗೆ ಮಾಡಿಟ್ಟ ಕಾಫಿಯನ್ನು ಬಿಸಿ ಮಾಡಿ ಹೀರುತ್ತಾ ನ್ಯೂಸ್ ಪೇಪರ್ ಓದುತ್ತಿದ್ದ  ದಿನಗಳೆಲ್ಲಿ

ಸಾಮಾನ್ಯವಾಗಿ ಶ್ರಾವಣ ಮಾಸದ ಹಬ್ಬಗಳ ಗಡಿಬಿಡಿಯಲ್ಲಿ ಮಕ್ಕಳಿಗೆ ಊಟದ ಡಬ್ಬಿ ಅವರೊಂದಿಗೆ ಕಳಿಸಲು, ವೇಳಾಪಟ್ಟಿ ಪರಿಶೀಲಿಸಲು ಒಮ್ಮೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಆಗ  ಪುಸ್ತಕ ಮರೆತಿದ್ದಾರೆಂದೋ, ಊಟದಡಬ್ಬಿ ಕೊಡಲೆಂದೋ ಹೀಗೆ ಯಾವುದಾರೂ ನೆಪದಿಂದ ಶಾಲೆ ಬಳಿಗೆ ಹೋಗುವುದು ನನಗೆ ಬಲು ಇಷ್ಟವಾಗುತ್ತಿತ್ತುಹೋದ ಕೆಲಸ ಮುಗಿದರೂ ಮಕ್ಕಳು ಆವರಣದೊಳಗೆ ಬರುವುದನ್ನೇ ಕಾಯುತ್ತಾ, ಸಾಲಿನಲ್ಲಿ ಬರುವ ನನ್ನ ಮಕ್ಕಳು ನಾನಿರದ ಸಮಯದಲ್ಲಿ ಹೇಗಿರುತ್ತಾರೆಂದು ನೋಡುವ ಕುತೂಹಲ. ಸ್ನೇಹಿತರೊಂದಿಗೆ ನಗುತ್ತಾ, ಚೇಷ್ಟೆ ಮಾಡುತ್ತಾ, ಟೀಚರನ ಕಣ್ಣೋಟಕ್ಕೆ ತಕ್ಷಣಕ್ಕೆ ಹೆದರಿ, ಮರು ಕ್ಷಣಕ್ಕೆ  ತರಲೆ ಮಾಡುವ...ಮುದ್ದು ಮಕ್ಕಳನ್ನು ನೋಡುವುದೊಂದು ಸಂಭ್ರಮ. ಇವರುಗಳ ದಿನವಿಡೀ ಸಂಭಾಳಿಸುವ ಶಿಕ್ಷಕರಿಗೆ ಕೃತಜ್ಞತೆಯ ನಮನ. ಮತ್ತೂ ಯಾರಾದರೂ ನೀವು ಅಭಿರಾಮನ ತಾಯಿಎಂದು ಗುರುತಿಸಿ ಮಾತನಾಡಿಸಿ ಮಗನಬಗ್ಗೆ ಒಂದು ಒಳ್ಳೆ ಮಾತ್ಹೇಳಿದರಂತೂ ಕಿರೀಟ ತೊಡಿಸಿದ ಸಂಭ್ರಮ. ಶಾಲೆಯಲ್ಲಿರುವ ಪ್ರತಿಕ್ಷಣವೂ ನನ್ನ ಬಾಲ್ಯದ ನೆನಪು....ನಾನೂ ಹೀಗೆ ಬಾಯಾಳಿಯಾಗಿದ್ದೆ, ನನಗೂ ಅಷ್ಟೇ ಜಡೆ ಇತ್ತು, ನಾನೂ ಯಾವತ್ತೂ ಪೂರ್ತಿ ಡಬ್ಬಿ ಖಾಲಿ ಮಾಡಿಲ್ಲ...ನಮ್ಮ ಟೀಚರ್ ಕೂಡ ಹೀಗೆ ಇದ್ದರು.... ಉಲ್ಲಾಸಕರ ನೆನಪುಗಳು ಮನೆಗೆ ಹಿಂದಿರುಗಿದರೂ ಮನ ತುಂಬಿರುತ್ತಿದ್ದವು

ಈಗ ಮಕ್ಕಳನ್ನು ಶಾಲೆಗೆ ಕಳಿಸವ ಆತುರವಿಲ್ಲ, ಅವರ ಚಟುವಟಿಕೆಗಳ ನೋಡುವ ಕಾತರವೂ ಇಲ್ಲ. ಶುಲ್ಕ ಭರಿಸಲೆಂದು ಶಾಲೆಯ ಬಳಿ ಹೋದರೆ, ಏಳೆಂಟು ಗೇಟ್ಗಳಿರುವ ಬೃಹತ್ ಶಾಲಾವರಣದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ. ಸದಾ ಮಕ್ಕಳ ಕಲರವದಿಂದಿದ್ದ ಕೊಠಡಿಗಳು ಮೌನ. ಸದಾ ‘silence please’ , ‘ be quite’ ಮಂತ್ರ ಹೇಳುವ ಶಿಕ್ಷಕರ ಸದ್ದಿಲ್ಲ. ಮಕ್ಕಳು ತರ್ಲೆ ಮಾಡಿದ್ದು, ಹಾಡಿದ್ದು, ಕುಣಿದಿದ್ದು, ಚಾಡಿ ಹೇಳಿದ್ದು...ಬಹುಮಾನ ಗಳಿಸಿದ್ದು, ಪರೀಕ್ಷೆ ಬರೆದಿದ್ದುಈಗ ನೆನಪಷ್ಟೇ. ಆನಲೈನ್ ತರಗತಿಗಳನ್ನು ಸಂಸ್ಥೆಗಳು ನಡೆಸುತ್ತಿದ್ದರೂ ಶಿಕ್ಷಣದ ಗಂಭೀರತೆ ಕುಸಿಯುತ್ತಿದೆ. ಮಕ್ಕಳಿಗೂ ಮನೆಯಿಂದ ತರಗತಿಗಳಲ್ಲಿ ಕೇಂದ್ರೀಕರಿಸುವುದು ಸುಲಭವಲ್ಲ. ಮನೆಯಲ್ಲಿ ಪಾಠ ಕೇಳಲು ತೊಂದರೆಗಳು ಹೆಚ್ಚು. ಫೋನ್ ರಿಂಗಾಗುವುದು, ಕುಕ್ಕರ್ ವಿಶಲ್ ಶಬ್ದಕೊರಿಯರ್, ಪಕ್ಕದ ಮನೆಯವರ ಲೌಡ್ ಸ್ಪೀಕರಿನ ಹಾಡು.. ಬೀದಿಯಲ್ಲಿ ಮಾರಲು ಬರುವ ತರಕಾರಿ ಹೂ-ಹಣ್ಣುಮನೆಯ ಹಿರಿಯರು ನೋಡುವ ಕೊರೋನ ಸುದ್ದಿ...ಹತ್ತಿರದ ರಸ್ತೆಗಳಲ್ಲಿ ಗುಯ್ ಗುಡುವ  ಆ್ಯಂಬುಲೆನ್ಸ್...  ಅಷ್ಟಲ್ಲದೇ ಹೋಗಿ ಬರುವ ನೆಟ್ವರ್ಕ. ಗಂಟೆಗಟ್ಟಲೇ ear plugs ಉಪಯೋಗಿಸುವುದು ಅಪಾಯ. ಇದೇ ಸವಾಲು ಶಿಕ್ಷಕರಿಗೂ. ಮನೆಯು ಮೊದಲ ಪಾಠ ಶಾಲೆಯಷ್ಚೇ. ಮಕ್ಕಳ ಪ್ರಬುದ್ಧತೆಯ ಬೆಳವಣಿಗೆಗೆ ಸಂಘದ ಸಂಪರ್ಕ ಬೇಕು. ಮಕ್ಕಳು ಕಲಿಯುವುದೇ ಅನುಕರಣೆಯಿಂದ. ‘ನೋಡಿ ಕಲಿ ಮಾಡಿ ತಿಳಿಶಾಲೆಯ ಮೂಲ ಮಂತ್ರ. ಜೀವನದ ಶಿಸ್ತಿನ ಪಾಠಕ್ಕೆ ಶಾಲೆ ಅತ್ಯಗತ್ಯ.

ಶಿಕ್ಷಣದ ಗುರಿ ಬರೀ ಅಂಕಗಳಲ್ಲ. ಅದು ಸಂಪೂರ್ಣ ವ್ಯಕ್ತಿತ್ವದ ಅಭಿವೃದ್ಧಿ. ಪ್ರತ್ಯಕ್ಷ ಉದಾಹರಣೆಗಳೊಂದಿಗೆ ಪುಸ್ತಕದ ಪಾಠವೇ ಪವರ್ ಪಾಯಿಂಟ್ ಪ್ರಸೆಂಟೇಶನ್ಗಿಂತ ಸೂಕ್ತ. ಆದರೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಕಡ್ಡಾಯ ಮಕ್ಕಳಿಗೆ . ಈಗ ಮಕ್ಕಳ ಮಾನಸಿತ ಸ್ವಸ್ಥ್ಯವನ್ನು ಕಾಪಾಡುವ ಕರ್ತವ್ಯ ಪೋಷಕರದು. ಕೊರೋನಾ ಸಮುದಾಯಕ್ಕೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮನೆಯೇ ಸದ್ಯಕ್ಕೆ ಕ್ಷೇಮ. ಇದೂ ಒಂದು ಪಾಠ

Saturday, May 9, 2020

ಈ ಅಮ್ಮಂದಿರ ದಿನ....

ಅಮ್ಮಂದಿರ ದಿನ....

ಅಮ್ಮಾ ನನ್ನ ಸಾಕ್ಸ್ ಎಲ್ಲಿ? ಅಮ್ಮಾ ನನ್ನ ಬುಕ್ ಎಲ್ಲಿ? ಅಯ್ಯೋ ಅಮ್ಮಾ ಇನ್ನೂ ತಿಂಡಿ ಆಗಿಲ್ವಾ? ಸರಿ ಲ್ಯಾಪ್ ಟಾಪ್ ಪಾಸ್ ವರ್ಡ ಹೇಳು ( ಬದಲಾಗಿರುವುದೇ ಇಲ್ಲ, ಆತುರದಲ್ಲಿ ತಪ್ಪು ಟೈಪ್ಮಾಡಿ..), ಹಂಗೆ ಲಂಚ್ ಬಾಕ್ಸ್ ಬ್ಯಾಗ್ ಗೆ ಹಾಕು. ತಿಂಡಿನೇ ಹಾಕ್ಬೇಡ. ಅನ್ನನೂ ಬೇಡ. ಚಪಾತಿಗೆ ಸಾಂಬಾರಾ? ಬೇಡ ಬೇಡ ಪಲ್ಯ ಹಾಕು. ಬದನೇ ಕಾಯಿ ಪಲ್ಯ ಮಾಡ ಬೇಡ, ಬೇರೆ ತರಕಾರಿ ಇಲ್ವಾ? ರಾತ್ರಿನೇ ತರಕೇನು..??. ನಂಗೇನು ಬೇಡ ಮಧ್ಯಹ್ನಕ್ಕೆ ನೀನೆ ತಿನ್ನು, ನಾ ಅಲ್ಲೆ ಏನಾದ್ರೂ ತಿನ್ಕೋತೀನಿ. ಸಂಜೆಗೆ ಇದೇ ಇಟ್ಟಿರಬೇಡ, ಬಿಸಿ ಬಿಸಿ ಮಾಡು. ಬಟ್ಟೆ ಇಸ್ತ್ರಿಗೆ ಕೊಡು.....ಇದು ಮಕ್ಕಳು ಪ್ರತಿದಿನ ಬೆಳಗ್ಗೆ ತಾಯಿಗೆ ಹೇಳೋ ಆಜ್ಞೆಗಳು. ಅವರಿಗೆ ತಮ್ಮ ಕೆಲಸ ಮಾಡಿ ಕೊಳ್ಳಲು ಬಿಡುವಿಲ್ಲವೆಂದಲ್ಲ. ರಾತ್ರಿ ಮನೆಗೆ ಬೇಗ ಹಿಂದಿರುಗಿದ್ದರೂ ತಂತಮ್ಮ ಪೋನ್ಗಳಲ್ಲೋ, ಕಂಪ್ಯೂಟರ್ನಲ್ಲೋ ಟಿವಿ ಶೋಗಳನ್ನು ನಡು ರಾತ್ರಿಯವರೆಗೆ ನೋಡಿ, ಬೆಳಗ್ಗೆ ಕಾಲೇಜು ಬಸ್ ( ಕಂಪನಿ ಬಸ್ ) ಬರುವ ಹತ್ತು ನಿಮಿಷ ಮುಂಚೆ ಎದ್ದು ಸಿದ್ಧವಾಗಿ ಹೋಗುವವರ ಪರಿ. ಅಲ್ಲಿ ಅಮ್ಮನಿಗೆ ಮರು ಉತ್ತರಿಸಲೂ ಅವಕಾಶ ಕೊಡದೆ ಒಂದೇಸಮ ಒಂದರ ಹಿಂದೊಂದು ಕೆಲಸ ಹೇಳುತ್ತಿರುವುದುಇಷ್ಟಾಗಿ ಬಸ್ ನಿಲುಗಡೆಗೆ  ಹೊರಟ ಕೂಡಲೇ ಫೋನ್ಅಮ್ಮಾ ಐಡಿ ಕಾರ್ಡ ತಂಕೊಡು ಬಸ್ ಇನ್ನೇನು ಬರುತ್ತೆ”.
ಆಗ ಆಕೆ ಮಾಡುತ್ತಿದ್ದ ಕೆಲಸ ಬಿಟ್ಟು ಎಲ್ಲೋ ಹಾಸಿಗೆ ತುದಿಯಲ್ಲಿ ಬಿದ್ದಿರುವ ಐಡಿ ಕಾರ್ಡ ಹುಡುಕಿ..ಓಡಿಹೋಗಿ ಕೊಟ್ಟು ಬರುವಲ್ಲಿ..ಒಲೆ ಮೇಲಿನ ಹಾಲು ಉಕ್ಕಿ, ಪಾತ್ರೆ ಸೀದು ಕರಕಲಾಗಿಕುಕ್ಕರು ಕೂಗಿಕೂಗಿ ಅನ್ನವೆಲ್ಲಾ ಅಂಬಲಿಯಾಗಿರುತ್ತೆ, ಅದನ್ನೆಲ್ಲಾ ಸ್ವಚ್ಛಮಾಡಿ ಬಂದು ಹಾಲಿನಲ್ಲಿ ಉಸ್ಸೆಂದು ಕುಳಿತರೆ, ಟೇಬಲ್ ಮೇಲೆ ಬೆಳಗ್ಗೆ  ಕುಡಿಯಲೆಂದು ಬಿಸಿಮಾಡಿದ ಕಾಫಿ ಅಣಕಿಸುತ್ತದೆ. ಮಗ/ಮಗಳು ಖಾಲಿ ಹೊಟ್ಟೆಯಲ್ಲಿ ಹೊರಟಿದ್ದೊಂದು ಸಂಕಟ. ಇದು ಒಂದು ದಿನದ ಕಥೆಯಲ್ಲ. ಪ್ರತಿದಿನವೂ ಹೀಗೆಯೇ! ಮಾಡಿದ ಅಡಿಗೆ ತಿನ್ನದೇ, ಕಾಲೇಜಿಗಾಗಲೀ, ನೌಕರಿಗಾಗಲಿ ಹೊರಡಲು  ಮುಂಚೆ ಎದ್ದು ತಯಾರಾಗದೇ ಮಕ್ಕಳು ಅಮ್ಮನನ್ನು ಕಾಡುವ ಪದ್ದತಿ. ಮಧ್ಯೆ ಅಮ್ಮ ವಾಕಿಂಗ್ ಮಾಡೋದು ಯಾವಾಗ? ಮಿಕ್ಕಿರುವ ಅಡಿಗೆ ತಿನ್ನುವವಳು ಡಯಟ್ ಮಾಡೋದು ಹೇಗೆ? ಸದಾ ಮಕ್ಕಳ, ಪತಿಯ ಅಥವಾ ಇತರ ಕುಟುಂಬ ಸದಸ್ಯರ ಬಗ್ಗೆಯೇ ಯೋಚನೆ ಮಾಡುವವಳಿಗೆ ಸ್ಟ್ರೆಸ್ ಕಮ್ಮಿಯಾಗುವುದು ಹೇಗೆ? ಶುಗರ್-ಬಿಪಿ ಮಟ್ಟವನ್ನು ನಿರ್ವಹಿಸುವುದು ಹೇಗೆ?

  ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅಮ್ಮನ ಸಹಾಯ ಅತ್ಯಗತ್ಯ. ಆದರೆ ಮಕ್ಕಳಿಗೆ ಮಕ್ಕಳಾದರೂ ಅಮ್ಮನ ಆಶ್ರಯಸಿರುವುದು ಅನುಚಿತ. ಚಿಕ್ಕಂದಿನಲ್ಲಿ  ಅತ್ಯಂತ ಖುಷಿಕೊಟ್ಟ ಮಕ್ಕಳು ದೊಡ್ಡವರಾದಂತೆ ತಂದೆ-ತಾಯಿಗೆ ಹೊಣೆಯಾಗುತ್ತಿರುವುದು ಸ್ವಾಗತಾರ್ಹವಲ್ಲ. ಸಾವಿರಗಟ್ಟಲೆ ಸಂಬಳ ತಂದರೂ ಅವರವರ ಕೆಲಸ ಮಾಡಿಕೊಳ್ಳುವ ಕನಿಷ್ಠ ಜವಾಬ್ದಾರಿ ಮಕ್ಕಳಿಗಿರಬೇಕು. ಮನೆಕೆಲಸದಲ್ಲಿ ಸಣ್ಣ-ಪುಟ್ಟ ಸಹಾಯ ಮಾಡುವ ಸೌಜನ್ಯವಿರಬೇಕು. ಹೊರಗಡೆ ಹೋಗುವಾಗ ಅಗತ್ಯ ವಸ್ತುಗಳ ಪಟ್ಟಿ ಮಾಡಿ ಮರೆಯದೇ ಕೊಂಡು ತರಬೇಕು. ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಸುಲು ಅಮ್ಮ ಬಿಸಿಲಲ್ಲಿ ತಿರುಗುವುದು ಬೇಡ. ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಾಕೃತಿಕವಾಗಿ ಕ್ಷೀಣಿಸುತ್ತವೆ. ವಾರಾಂತ್ಯಗಳಲ್ಲಿ ಗೆಳೆಯರೊಂದಿಗೆ ಕಳೆಯದೇ ಅಮ್ಮನೊಂದಿಗೂ ಇದ್ದರೆ ಅವಳ ಕಷ್ಟವೂ ಅರ್ಥವಾದೀತು.

ಭೂಮಿಯ ಮೇಲಿನ ಪ್ರತಿ ಜೀವಿಗೂ ಅಮ್ಮನೇ ಮೊದಲ ಬಂಧು. ಅಪ್ಪ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಅಜ್ಜ-ಅಜ್ಜಿ.......ಮಿಕ್ಕವರೆಲ್ಲಾ ಅವಳ ಆನಂತರದ ಸಂಬಂಧ. ಸಂಬಂಧಗಳು ಅವಳ ನಂತರ ಮಕ್ಕಳನ್ನು ಕಾಪಾಡಲು ಅವಳೇ ಕಟ್ಟಿದ ಭದ್ರ ಕೋಟೆ. ಪುಣ್ಯ ಕೋಟಿ ಕಥೆಯಲ್ಲಿರುವಂತೆ. ತಾನಿಲ್ಲದಿದ್ದರೂ ವಾತ್ಸಲ್ಯಕ್ಕೆ ಧಕ್ಕೆಯಾಗದಂತೆ ವ್ಯವಸ್ಥೆ ಮಾಡುವ ಅಮ್ಮನ ಬದ್ಧತೆ ಬೇರ್ಯಾವ ಸಂಬಂಧಕ್ಕೂ ಇಲ್ಲ. ಅಮ್ಮನ  ಬೆಟ್ಟದಷ್ಟು  ವಾತ್ಸಲ್ಯವನ್ನು ಗುಡ್ಡದಷ್ಟಾದರು ಹಿಂದಿರುಗಿಸುವ ಸುಂದರ ಜವಾಬ್ದಾರಿ   ಪೀಳಿಗೆಯವರದಾಗಲಿ. ಅಮ್ಮಂದಿರ ದಿನ ತಾಯಿಯ ತೆಕ್ಕೆ ಎಲ್ಲ ಮಕ್ಕಳಿಗೆ ಲಭಿಸಲಿ. ಮಾತೃ ಹೃದಯ ಸಂತೃಪ್ತಿಯ ಕಡಲಲ್ಲಿ ಮೀಯಲಿ.
ಜಗತ್ತಿನ ಎಲ್ಲ ತಾಯಂದಿರಿಗೂ ಅಭಿನಂದನೆಗಳು