Thursday, September 23, 2021

ಮತ್ತೊಂದು ಅಪಾಯಿಂಟ್ಮೆಂಟ್…

ಎರಡು ತಿಂಗಳಿಂದ ಹಬ್ಬಗಳ ಗಡಿಬಿಡಿಯಲ್ಲಿ ಡಾಕ್ಟರ ಅಪಾಯಿಂಟಮೆಂಟಿನ ಮಾತೇ ಮರೆತು ಹೋಗಿತ್ತು. ಅದಲ್ಲದೇ ಕೀಲುಗಳ ನೋವೂ ಅಷ್ಟೇನು ಇರದಿರುವುದೂ ಕಾರಣವೇ. ಡಾಕ್ಟರ ಸೆಕ್ರೇಟ್ರಿಯ ಮಿಸ್ಸ್ಡ ಕಾಲ್ಗಳನ್ನು ನೋಡಿ, ಫೋನಿನಲ್ಲಿನ ಸಂದೇಶಗಳನ್ನು ಜಾಲಿಸಿದರೆನನಗಂದೇ ಅಪಾಯಿಂಟ್ಮೆಂಟ್ ಇರುವುದು ಖಚಿತವಾಯ್ತು. ರಕ್ತ ಪರೀಕ್ಷೆಯ  ವರದಿಯಿಲ್ಲದೇ ವೈದ್ಯರ ಭೇಟಿ ಇಬ್ಬರಿಗೂ ಸಮಯ ಹಾಳುಸರಿ ದಿನಾಂಕ ಬದಲಾವಣೆಗೆಂದು ಮತ್ತೆ ವೈದ್ಯರ ಸೆಕ್ರೆಟರಿಗೆ ಫೋನಾಯಿಸಿದೆ. ಆಕಡೆಯಿಂದ ಆಕೆ  ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆಂದಿತು. ಇದೆಂಥ ಸೇವೆ!! ಬೇಕಾದಾಗಲೇ ಹೀಗೆ!! ತಕ್ಷಣ ನನ್ನ ಸಂದರ್ಶನವನ್ನು ನಾಳೆಗೆ ಬದಲಾಯಿದೆ ಎಂದು ಸಂದೇಶ ಬಂತು. ಮರುದಿನ ಬೆಳಿಗ್ಗೆಯೇ ಬೇಕಾದ ಪರೀಕ್ಷೆಗಳೆಲ್ಲಾ ಮಾಡಿಸಿ ಆಸ್ಪತ್ರೆಗೆ ಹೊರಟೆ. ಈಗ ಮೆಟ್ರೋ ರಾಜರಾಜೇಶ್ವರಿನಗರದ ಹೆಬ್ಬಾಗಿಲಿಗೇ ಬರುತ್ತೆ. ಮನೆ ಬಿಟ್ಟು ಬಸ್ಸ್ ಏರಿ ಮೆಟ್ರೋ ನಿಲ್ದಾಣಕ್ಕೆಂದು ಟಿಕ್ಕೆಟ್ ಪಡೆದೆ. ಬಸ್ಸಿನಲ್ಲಿ ನನ್ನನ್ನು ಬಿಟ್ಟರೆ ಡ್ರೈವರ್ ಕಂಡಕ್ಟರ್ ಮಾತ್ರ. ಸೀಟಿಗಾಗಿ ಪರದಾಡುತ್ತಾ ಕಾಲೇಜಿಗೆ ಹೋಗುತ್ತಿದ್ದ ದಿನಗಳೆಲ್ಲಿ? ಪ್ರತಿದಿನ ಒಂದೇ ಬಸ್ನಲ್ಲಿ ಹೋಗುತ್ತಿದ್ದಾಗ, ದೂರದಿಂದಲೇ ಬಸ್ಸ್ ಕಡೆಗೆ ದೌಡಾಯಿಸುವುದನ್ನು ನೋಡಿ ಡ್ರೈವರ್ ನಾನು ಬರುವವರೆಗೂ ಕಾಯುತ್ತಿದ್ದ. ನಾ ಬಸ್ಸ್ ಹತ್ತಿದ ಮೇಲೆ ಕಂಡಕ್ಟರ್ ರೈಟ್ ಹೇಳುತಿದ್ದ. ಡ್ರೈವರ್ ಕಂಡಕ್ಟರ್ ಇಬ್ಬರೂ ತಿಂಡಿ ಆಯ್ತ? ಊಟ ಆಯ್ತ? ಕಾಲೇಜ್ ಬಿಟ್ಟರಾ? ಪರೀಕ್ಷೆ ಆಯ್ತಾ? ರಿಸಲ್ಟ್ ಬಂತಾ? ಪಾಸಾ? ಹೀಗೆ ನಮ್ಮನ್ನು ವಿಚಾರಿಸಿಕೊಳ್ಳೋ ಬಂಧುಗಳೇ ಆಗಿದ್ದರು. ಪ್ರತಿದಿನ ಟಿಕೆಟ್ ಕೊಳ್ಳದೇಪಾಸ್ಎಂದರೆದಿನಾ ಪಾಸು ಮಾರ್ಚನಲ್ಲಿ ಮಾತ್ರ ಫೇಲ್ಎಂದು ಗೇಲಿ ಮಡ್ತಿದ್ದರು. ಒಂದು ದಿನ ಬಸ್ ತಪ್ಪಿಸಿದರೂ ಯಾಕೆ  ‘ಹುಷಾರಿರಲಿಲ್ಲವಾ? ‘ ಅಂತ ಕಾಳಜಿ ತೋರಿಸುತ್ತಿದ್ದರು

 ನನ್ನ ಬಸ್ಸ್ ದೇವಸ್ಥಾನ ಮಾರ್ಗವಾಗಿ  ಹೆಬ್ಬಾಗಿಲಿನ ಸಿಗ್ನಲ್ ಬಳಿ ನಿಂತಿತು. ನಾನಿನ್ನೂ ಸಿಗ್ನಲ್ ದಾಟಿದ ಮೇಲೆ ಮೆಟ್ರೋ ಬಳಿ ಇಳಿಯುವಳಿದ್ದೆ. ಕಂಡಕ್ಟರ್ ಸಿಗ್ನಲ್ ನಲ್ಲಿಯೇ ಇಳಿಯಲು ಆತುರ ಪಡಿಸಿದ. ನಾನು ನಡು ರಸ್ತೆಯಲ್ಲಿ ಯಾಕೆ ಇಳೀಬೇಕು? ಬಸ್ಸ್ ಸ್ಟಾಪ್ನಲ್ಲಿಯೇ ಇಳಿಯೋದು ಎಂದು ದಬಾಯಿಸಿದ್ದಕ್ಕೆ ಇಬ್ಬರೂ ಒಂದೇ ಉಸಿರಿಗೆನಿನಗೊಬ್ಬಳಿಗೋಸ್ಕರ ನಿಲ್ಲಸಲ್ಲ ಇಳಿ ಇಳಿಅಂದರು. ನಾನವರಿಗಿಂತ ಜೋರು ಮಾಡಿನಿಮಗೆ ಗಾಡಿ ಓಡಿಸೋದು ಗಿಟ್ಟಲಿಲ್ಲಂದರೆ ಡಿಪೋನಲ್ಲಿ ನಿಲ್ಲಿಸ್ಕಳ್ರಿ! ನಡು ರಸ್ತೆೇಲಿ ಇಳಿಯಲ್ಲಅಂತ ಮೆಟ್ರೋ ಬಳಿಯೇ ಇಳಿದು ರೈಲು ಹಿಡಿದು ಆಸ್ಪತ್ರೆಗೆ ಬಂದೆ. ಅಲ್ಲಿ ಗಂಟೆ ಗಟ್ಟಲೆ ಕಾಯುವುದೇನು ಅನಿರೀಕ್ಷಿತವಲ್ಲ. ಹತ್ತುಗಂಟೆಗೆ ಸಂದರ್ಶನ ಗೊತ್ತು ಮಾಡಿದ್ದರೂ ವೈದ್ಯರ ದರ್ಶನಕ್ಕೆ ಮೂರುಗಂಟೆಯಾಯಿತು. ಮನೆಗೆ ಹಿಂತಿರುಗಲು ಮತ್ತೆ ಮೆಟ್ರೋ ನಿಲ್ದಾಣಕ್ಕೆ ನಡೆದೆ ವಿಧಾನಸೌಧದ ಮೆಟ್ರೋ ನನಗೆ ಬಹಳ ಇಷ್ಟ . ತುಂಬ ವಿಶಾಲವಾದ ಸ್ವಚ್ಛವಾದ ಜಾಗ. ಪ್ಲಾಟಫಾರಂನಲ್ಲಿ ರೈಲಿಗಾಗಿ ಕಾಯುತ್ತಾ ಕುಳಿತೆ. ಒಬ್ಬ ಹೆಂಗಸು  ಮಗುವನ್ನು ಹಿಡಿದು ಒಬ್ಬಾತನ ಹಿಂದೆ ಬರುತ್ತಿದ್ದಳು. ಆತ ಐನೂರರ ನೋಟಿಗೆ ಎಲ್ಲರ ಬಳಿ ಚಿಲ್ಲರೆ ಕೇಳುತ್ತಿದ್ದ. ನನ್ನ ಬಳಿಗೂ ಬಂದು ಕೇಳಿದ. ತಕ್ಷಣಕ್ಕೆ ಪರ್ಸ ತೆಗೆದು ಎರಡು ಇನ್ನೂರರ ನೋಟಿನೊಂದಿಗೆ ಒಂದು ನೂರರ ನೋಟು ಸೇರಿಸಿ ಕೊಟ್ಟೆ. ಐನೂರರ ನೋಟನ್ನು ಪರ್ಸಗೆ ಇಳಿಸಿದೆ. ಆತ ಒಂದು ನೋಟನ್ನು ಹೆಂಗಸಿಗೆ ಕೊಟ್ಟು ಆತುರದಲ್ಲಿ ಎಸ್ಕಲೇಟರ್ ಏರಿ ಹೊರಟೇ ಹೋದ. ಹೆಂಗಸು ಕೂಡ ಮೆಟ್ರೋ ನಿರ್ಗಮನದ ಕಡೆ ಬರಬರನೆ ನಡೆದಳು

ಅವರಿಬ್ಬರ ಆತುರದ ನಡತೆ ನನಗೆ ಅನುಮಾನ ಹುಟ್ಟಿಸಿತು. ಆತ ನನಗಿತ್ತ ಐನೂರರ ನೋಟು ಖೋಟವಿರಬೇಕು ಎಂಬ ಅನುಮಾವ. ಅಷ್ಚರಲ್ಲೇ ಕೆಂಗೇರಿ ರೈಲು ಬಂತು, ಖಾಲಿ ಕಂಪಾರ್ಟಮೆಂಟನಲ್ಲಿ ಕುಳಿತು ಐನೂರರ ನೋಟನ್ನು ಪದೇ ಪದೇ ಪರೀಕ್ಷಿಸಿದೆ. ಅಸಲಿಗೂ ನಕಲಿಗೂ ಇರುವ ವ್ಯತ್ಯಾಸವನ್ನು ಯೂಟ್ಯಬ್ನಲ್ಲೂ ನೋಡಿದೆ. ಆದರೆ ಐನೂರರ ನೋಟಿಗೆ ಮೋಸಹೋದ ಮನಸ್ಥಿತಿಯಲ್ಲಿ ಏನೂ ಖಚಿತವಾಗಲಿಲ್ಲ. ರೈಲು ಇಳಿದ ಮೇಲೆ ಟಿ ಎಂ ನಿಂದ ಇನ್ನೊಂದು ನೋಟ್ ಬಿಡಿಸಿ ಹೋಲಿಸಿದೆ. ಆದರೂ ಗೊತ್ತಾಗಲಿಲ್ಲ.

 ನನ್ನ ಮನಸಲ್ಲಿ ಎಲ್ಲಿಲ್ಲದ ಗೊಂದಲ. ಮೋಸ ಹೋದ ಅವಮಾನ. ನನಗ್ಯಾಕೆ ಬೇಕಿತ್ತು ಉಸಾಬರಿ? ಅಲ್ಲಿದ್ದವರರೂ ಚಿಲ್ಲರೆ ಕೊಡಲಿಲ್ಲ ! ನಾನ್ಯಾಕೆ ಕೊಟ್ಟೆ ? ಇಪ್ಪತ್ತು ವರ್ಷದಿಂದ ಬೆಂಗಳೂರಲ್ಲಿದ್ದರೂ ಬುದ್ದಿ ಬರಲಿಲ್ಲ. ಯಾರ ಕೈಲಿ ಹೇಳಿದರೂ ನನ್ನ ದಡ್ಡತನವೇ ಹೇಳಿಕೊಂಡಂತೆ.ಅಂತ ನನಗೆ ನಾನೇ ಬೈದು ಕೊಂಡೆ. ಅವನಿಗೇನು ಅವಶ್ಯಕತೆ ಇತ್ತೋ? ಹೋಗ್ಲಿ ಬಿಡು. ಅವನಿಗಾದರೂ ಉಪಯೋಗವಾಗಲಿ. ಎನ್ನೋ ಸಮಾಧಾನ ಹೇಳಿಕೊಂಡೆ. ಬ್ಯಾಂಕ ಗೇ ಹೋಗಿ ವಿಚಾರಿಸೋಣ್ವಾ? ಪೊಲೀಸ್ ಠಾಣೆಗಾ? ಯೋಚಿಸುತ್ತಾ ಒಬ್ಬ ಪೇದೆನ ಕೇಳಿಯೇ ಬಿಟ್ಟೆ..ಅವ ಹಾಗೆ ಹೀಗೆ ನೋಡಿ, ಇದು ನಕಲಿ ಮೇಡಮೋರೆ,ನೋಡಿ ಅಸಲೀದು ಹೀಗಿರತ್ತೆ ಅಂತ ಆತನ ಬಳಿ ಇದ್ದ ನೋಟು ತೋರಿಸಿದಹೌದೇ!! ನೋಟೊಳಗಿನ ಕಡ್ಡಿ ಹೊಂದಿಕೆಯಾಗುತ್ತಿಲ್ಲ. ಸರಿ ವಾಪಸ್ ಕೊಡಿ ಅಂದರೆ, ನಾಳೆ ಸ್ಟೇಷನ್ಗೆ ಬನ್ನಿ ಅಂದ. ಇದೊಳ್ಳೆ ಕತೆ ಆಯ್ತಲ್ಲ ಅಂದು ಕೊಂಡುನಾಳೆಯಾಕೆ ಈಗಲೇ ನಡೀರಿಅಂದೆ.

ಆತ ನೋಟು ವಾಪಸ್ ಕೊಟ್ಟುಪರವಾಗಿಲ್ಲ ನಾಳೆ ಕಬ್ಬನ್ ಪಾರ್ಕ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ’ ಅಂದು ಗಾಡಿಯಲ್ಲಿ ಹೊರಟು ಹೋದ

ಮರುದಿನ ಪೋಸ್ಟ ಆಫೀಸಿಗೆ ಹೋಗಿ ನನಗೆ ಪರಿಚಯವಿದ್ದ ಟೆಲ್ಲರ್ಗೆ ನಕಲಿ ಐನೂರರ ನೋಟಿನ ವೃತ್ತಾಂತವೆಲ್ಲಾ ಹೇಳಿದೆ. ಆಕೆ ನೋಟನ್ನು ಪರಾಂಬರಿಸಿ, ಯಾರ್ಹೇಳಿದ್ದು ಇದು ನಕಲಿ ಅಂತ

ನಾನು ಮುಂದುವರೆದ ಕಥೆಯನ್ನೂ ಒಪ್ಪಿಸಿದೆ. ಅವರು ರಿಸರ್ವ ಬ್ಯಾಂಕನ ನೋಟೀಸ್ ತೋರಿಸಿದರು. ‘ಇದು ನಕಲಿ ಅಲ್ಲ  ಈ ಸರಣಿಯ ನೋಟುಗಳು ಅಳತೆಯಲ್ಲಿ ಹಳೆ ನೋಟುಗಳಿಗೆ ಹೊಂದುವುದಿಲ್ಲ, ಈ ನೋಟೀಸ್ ಓದಿ’ ಎಂದರು. ನನಗೆ ಆಗ ಐನೂರರ ನೋಟಿಗೆ ಮೋಸ ಹೋಗಿಲ್ಲವೆಂದು ನಿರಾಳವಾದರೂ ಅಮಾಯಕರನ್ನು ಅನುಮಾನಿಸಿದ್ದಕ್ಕೆ ಭಾರೀ ಪಶ್ಚಾತ್ತಾಪವಾಯಿತು.