Tuesday, October 26, 2021

ನೀನೇ ಧನ್ವಂತರಿ

 ಬೆಳಗಿನ ಜಾವಕ್ಕೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ ಹಿಡಿದು ಮೈಸೂರು ಮಾರ್ಗವಾಗಿ ನಂಜನಗೂಡು ದೇವಸ್ಥಾನಕ್ಕೆ ಸೇರಲು ಗಂಟೆಯೇ ಆಗಿತ್ತು. ಸರತಿ ಸಾಲು ದೊಡ್ಡದೇನೂ ಇರಲಿಲ್ಲ. ಸಾಲಿನಲ್ಲಿ ಐದು ನಿಮಿಷದೊಳಗೆ ದರ್ಶನವಾಗಿ, ಮಂಗಳಾರತಿ ಕಣ್ಣಿಗೊತ್ತಿಕೊಂಡು ಹೊರ ಬಂದು ಅಮ್ಮನವರ ದರ್ಶನದ ಸಾಲು ಸೇರಿದೆಅಲ್ಲಿ ಇನ್ನೂ ಪೂಜೆ ನಡೆಯುತ್ತಿದ್ದರಿಂದ ಪರದೆ ಇಳಿ ಬಿಟ್ಟಿದ್ದರು. ಕ್ಷಣಕ್ಕೆ ಇನ್ನೊಮ್ಮೆ ಈಶ್ವರನ ದರ್ಶನ ಮಾಡೋಣೆನಿಸಿ ಮತ್ತೆ ಸರತಿ ಸಾಲು ಸೇರಿದೆ. ಆಗಅಯ್ಯೋ!! ನಾನು ದೇವರನ್ನು ಏನೂ ಕೇಳಿ ಕೊಳ್ಳಲಿಲ್ಲವಲ್ಲ! ಸುಮ್ನೆ ಶ್ಲೋಕ ಹೇಳ್ಕೊಂಡು ಬಂದೆ.. ಸಾರಿ ಹೋಗಿ ಕೇಳಿ ಕೊಳ್ಳೋಣ’ ಅನ್ನಿಸಿ ಸಾಲಿನಲ್ಲಿ ಮುಂದುವರಿದೆ. ಅಭ್ಯಾಸ ಬಲದಿಂದ ಶಿವ ಪಂಚಾಕ್ಷರಿ ಬಾಯಿ ಜಪಿಸುತ್ತಿತ್ತು. ಮನಸ್ಸು  ಬೇಡಿಕೆಗಳ ಪಟ್ಟಿ ಮಾಡ ತೊಡಗಿತು. ದೇವರೇನನಗೆ ಆರೋಗ್ಯ ಕೊಡಪ್ಪ, ನನ್ನ ಮಕ್ಕಳಿಗೆ ಆಯಸ್ಸು ಆರೋಗ್ಯ ವಿದ್ಯಾಬುದ್ಧಿ ಕೊಡು, ನನ್ನ ಗಂಡನಿಗೂ ಆರೋಗ್ಯ ಆಯಸ್ಸು ಕೊಡು. ಹಂಗೆ  ಅವರ ಪ್ರಮೋಷನ್ ನೋಡ್ಕೋ. ಇತ್ತೀಚೆಗೆ ಅಮ್ಮನಿಗೂ ಆರೋಗ್ಯ ಸರಿ ಇರಲ್ಲ..ಅಮ್ಮನಿಗೇನೂ ಆಗದಂಗೆ ನೋಡ್ಕೋ..ನನ್ನ ಮಗಳ ಹತ್ತನೇ ಕ್ಲಾಸ್ ಪಾರುಗಾಣಿಸು. ಹುಡುಗರಿಗೆ ಹೆಂಗಾದ್ರೂ ಜವಾಬ್ದಾರಿ ಬಂದರೆ ಸಾಕು. ಮಗನಿಗೊಂದು ಉಪನಯನ ಮಾಡ್ಬೇಕು. ಗುರುಬಲ ಬರೋಹಾಗೊ ಮಾಡು.ನನ್ನ ತಮ್ಮನಿಗೆಅವನ ಮಗುಗೇತಂಗಿಗೇಅವರಿಗೆ..ಇವರಿಗೆಯಾವುದು ಕೇಳೋದು. ಯಾವುದು ಬಿಡೋದುಮನಸ್ಸಂತೂ ತಡಬಡಿಸಿತು.. ಬಗೆಹರಿಯೋ ಹಾಗೆ ಕಾಣೆ . ನಾನು ವಾಸ್ತವಕ್ಕೆ ಬರುವ ಸಮಯಕ್ಕಾಗಲೇ ಗರ್ಭಗುಡಿ ದಾಟಿ ಸಾಲಿನಿಂದ ಹೊರಗಿದ್ದೇನೆ. ತುಟಿಯಂತೂತಸ್ಮೈ ನಕಾರವೇ ಒದರುತ್ತಿದೆ. ಅರೆ! ದರ್ಶನವಾಯ್ತಾ? ಅನ್ನಿಸಿತು. ಶಿವನಿಗೆ ಬೇರೆ ಅಲಂಕಾರ ಮಾಡಿದ್ದರೇನೋ ನೋಡ್ಲಿಲ್ಲವೇ

ನನಗಿದೆಂಥ ಅಲೋಚನೆ ಬಂತು? ಸಾಮಾನ್ಯವಾಗಿ ಚಿಕ್ಕವಳಿದ್ದಾಗಲೂ ಅಷ್ಟೆ, ದೇವರಿಗೆ ಬರೀ ಶ್ಲೋಕ ಹೇಳೋದು, ಮಂಗಳಾರತಿ ತಗೊಂಡು, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡೋದಷ್ಟೆ. ಮನೆಯಲ್ಲಿನ ಪೂಜೆಗಾದರೂ, ಗೊತ್ತಿರೋ ದೇವರನಾಮ ಗುನುಗುತ್ತಾ ಅದರ ಸಾಹಿತ್ಯವನ್ನು ಅನುಭವಿಸುತ್ತಾ..ಪೂಜೆ ಮುಗಿಸುತ್ತಿದ್ದೆ. ದೇವರಲ್ಲಿ ಬೇಡಿಕೊಂಡೇ ಇಲ್ಲ! ನನಗಿದೆಂಥ ಅಹಂಕಾರ ! ಅಹಂಕಾರವಲ್ಲಆದರೂ ಅಭ್ಯಾಸವಿಲ್ಲ. ದೇವರನ್ನ ಕೇಳ್ಕೋ ಬೇಕು.. ಕೇಳದಿದ್ದರೆ ಹೇಗೆ ಕೊಡ್ತಾನೆ? ಹೀಗೊಂದು ತರ್ಕ. ಆದರೂ ದೇವರನ್ನ ಮನಸಾರೆ ನೋಡ್ದೇ ಬರೀ ಏನು ಕೇಳ್ಕೋ ಬೇಕಂತ ಲೆಕ್ಕಚಾರ ಹಾಕಿದ್ರೆ? ಅದೆಲ್ಲಾ ಅವನಿಗೇ ಬಿಟ್ಟಿದ್ದು. ಅವನೇ ಕೊಡ್ತಾನೆಶಿವ ಕೊಡದಿದ್ದು ಸಿಂಗಲೀಕ ಕೊಡ್ತಾನ್ಯೇ?’  ಹೀಗೊಂದು ತರ್ಕ. ಸಾರಿ ಕೇಳಿ ತಗೊಳ್ಳೋ ಉಸಾಬರಿಯೇ ಬೇಡ, ತೆಪ್ಪಗೆ ದರ್ಶನ ಮಾಡಿ ಕೊಂಡು ಬರೋಣವೆಂದು ಮೂರನೇ ಬಾರಿಗೆ ಸಾಲಿನಲ್ಲಿ ನಿಂತು ಮುಂದುವರಿದೆ. ಆಗತಾನೆ ಅಭಿಷೇಕ ಮಾಡಿಸಿಕೊಂಡಿದ್ದ ಲಿಂಗ ಫಳಫಳ ಹೊಳೆಯುತ್ತಿತ್ತು. ಲಿಂಗದ ಮೇಲಿನ ಧಾರಪಾತ್ರೆಯಿಂದ ಸಣ್ಣಗೆ ನೀರಿನ ಧಾರೆಲಿಂಗದ ತಲೆ ಮೇಲಿನ ಮಂದಾರ ಪುಷ್ಪವನ್ನು ತೋಯಿಸುತ್ತಿತ್ತು. ಬೆಳ್ಳಿಯ ವಿಭೂತಿ ಪಟ್ಟಿ. ಸ್ವಲ್ಪ ಬಲಕ್ಕೆ ವಾಲಿದಂತಿರುವ ಪಾಣಿವಾಟಕ್ಕೆ  ಬಲ್ವಹಾರ..ಮತ್ತೊಂದು ಮಲ್ಲಿಗೆ ಹಾರಅವನು ಗಂಗಾಧರ ಶಂಕರ ಕರುಣಾಕರನೇ. ಬೇಕಾದ್ದು ಕೊಟ್ಟೇ ಕೊಡುತ್ತಾನೆಂಬ ಭರವಸೆ..ಆದರೂ ನಂದಿ ಧ್ವಜದ ಬಳಿ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವಾಗಯಾವುದ್ಹೆಂಗಾದರೂ ಸರಿ ಅಮ್ಮನ ಆರೋಗ್ಯವೊಂದಾದರೂ ನೋಡ್ಕೋ ..ನೀನೆೇ ಧನ್ವಂತ್ರಿ

ಉಪ್ಪಿಟ್ಟಿನ ಸ್ವಗತ(ಅಳಲು)


ನನ್ನನ್ನು ನೋಡಿದರೆ ಯಾಕೆ ಜನ ಮೂರು ಮಾರು ಹಾರ್ತಾರೆ? ಮನೇಲಿ ಉಪ್ಪಿಟ್ಟು ಮಾಡಿರೋ ಸುಳಿವು ಸಿಕ್ಕರೆ ಸಾಕು, ಒಂದು ಯುದ್ಧಕಾಂಡ! ಪರಿಪರಿಯ ಚಳುವಳಿ. ಗಂಡನೋ ಹೆಂಡತಿಗೆ ಎದುರು ಹೇಳಲಾರದೆ ಬ್ರೇಕ್ಫಾಸ್ಟ್ ಮೀಟಿಂಗ್ ಎಂದು ನೆಪ ಹೇಳಿ ಪರಾರಿ. ಮಗಳೋ ಉಪ್ಪಿಟ್ಟ್ ಬೇಡ್ವೇ ಬೇಡ ಅಂತ ಹೋರಾಟ. ಮಗ ಉಪ್ಪಿಟ್ಟಿನ ವಾಸನೆ ಬಂದದ್ದೇ ನನ್ನಿಂದ ಬಚಾವದರೆ ಸಾಕು ಅಂತ ಉಪವಾಸ ಓಟ. ಇನ್ನು ಮನೇಯಲ್ಲಿನ ವೃದ್ದರುಅಯ್ಯೋ! ಉಪ್ಪಿಟ್ಟ! ಇದೇನು? ಉಪ್ಪಿಲ್ಲದಿಟ್ಟಾ? ಉಪ್ಪಿನಿಟ್ಟ? ’ಅಂತ ಮೂದಲಿಸಿ ವಿಧಿ ಇಲ್ಲದೆೇ ಬಲವಂತದಿಂದ ನಾಕು ತುತ್ತು ತಿಂತಾರೆ (ಇವರಾದ್ರೂ..ಹೀಗಾದ್ರೂ ತಿಂತಾರಲ್ಲಾ..ನನ್ನ ಪುಣ್ಯ) . ಹೋಗ್ಲಿ ನನ್ನನ್ನು ತಯಾರು ಮಾಡ್ದವರಾದರೂ ಇಷ್ಟ ಪಟ್ಟು ತಿಂತಾಳಾ? ಇಲ್ಲ! ಆಕೆ ಎಲ್ಲರನ್ನು ಪುಸಲಾಯಿಸಿ, ತಾನು ತಿನ್ನುವಷ್ಟರಲ್ಲಿ ಆರಿ ಹೋಗಿರೋ ಉಪ್ಪಿಟ್ಟು ಗಂಟಲಲ್ಲಿ ಇಳಿಯುತ್ಯೇ?

 ಇಷ್ಟೆಲ್ಲಾ ಕಡೆಗಣಿಸಿದರೂ ಏಕಾದಶಿಗೆ, ಶಿವರಾತ್ರಿಗೆ ಮತ್ತಿತರ ಉಪವಾಸದ ದಿನಗಳಲ್ಲಿ ಪೂಜೆ ಮರೆತರೂ ನನ್ನನ್ನು ಮಾಡೋದು ಮರೆಯೋಲ್ಲ.

ಅಲ್ಲಾ! ನನ್ನನ್ನು ಸರಿಯಾಗಿ ಮಾಡಿಕೊಂಡು ತಿನ್ನೋದು ಬಿಟ್ಟು ಪದಾರ್ಥ ಹಾಳು ಮಾಡಿ, ನನ್ನನ್ನೇ ದೂಷಿಸ್ತಾರಲ್ಲಾ! 

 ಒಂದು ಚೂರು ತುಪ್ಪ ಹಾಕಿ ಸಣ್ಣ ಉರಿಯಲ್ಲಿ ರವೆ ಹುರಿಯದೇ, ಆತುರಕ್ಕೆ ದೊಡ್ಡ ಉರಿ ಮಾಡಿ ರವೆ ಕಪ್ಪಾದರೆ, ರುಚಿ ಹೇಗೆ ಬರುತ್ತೆ? ಹೋಗ್ಲಿ ನೀರಾದರೂ ಅಳತೆ ಇಡಬಾರದೇ? ಒಂದು ರವೆ ಅಳತೆಗೆ ಎರಡು ಅಳತೆ ನೀರಿಟ್ಟರೆ ಉಪ್ಪಿಟ್ ಮುದ್ದೆಯಾಕಾಗುತ್ತೆ? ಒಗ್ಗರಣೆ ಮಾತಿಗೆ ಬಂದರೆಕೈತುಂಬಾ ಉದ್ದು-ಕಡಲೆ ಬೇಳೆ ಹಾಕಬೇಕು, ಹಾಗೇ ಕರೀಬೇವು-ಶುಂಠಿ ಕೂಡ. ಜಿಡ್ಡು ಜಾಸ್ತಿ ಆದ್ರೇನು ತಪ್ಪಿಲ್ಲ(ಡಯಟ್ ಹೆಸರಲ್ಲಿ ನನಗೆ ಮಾತ್ರ ಎಣ್ಣೆನೇ ಹಾಕಲ್ಲ ಆದರೆ ಮನೆಯಿಂದ ಹೊರಗಡೆ ಹೋಗಿ ಸಿಕ್ಕಿದ ಹಾಳು ಮೂಳು ತಿನ್ನಲ್ವಾ? ). ಉಪ್ಪು-ಖಾರ ಸಿಕ್ಕಿದಷ್ಚು ಹಾಕೋದೇ? ಒಂದು ಪಾವಿಗಿಷ್ಟು ಅಂತ ಗುರುತು ಇಟ್ಕೋಬೇಕು. ಈರುಳ್ಳಿ ಟೊಮೋಟೋ ಪ್ರಮಾಣವಂತೂ ಅದರ ಬೆಲೆ ಮೇಲೆ ನಿರ್ಧರಿಸ್ತಾರೆ. ಇವುಗಳ ಜೊತೆಗೆ ಬೇರೆ ತರಕಾರಿನೂ ಸಣ್ಣಗೆ ಹೆಚ್ಚಿ ಒಗ್ಗರಣೇಲಿ ಬಾಡಿಸಬಾರದೇ? ಹಸಿ ಕಾಳುಗಳನ್ನೂ ಹಾಕಿ, ಹಸಿ ಕೊಬ್ಬರಿ ಸೇರಿಸಿದ್ರೆ ಎಷ್ಟು ರುಚಿ! ಒಗ್ಗರಣೆ ಹಾಕಿ, ನೀರು ಚೆನ್ನಾಗಿ ಕುದಿಯುವಾಗ ರವೆ ಸೇರಿಸಿ ಚೆನ್ನಾಗಿ ಕಲಕಬೇಡ್ವೇ? ಬೇಯಲು ಸಮಯ ಬೇಕು ತಾನೆ? ಕುದಿಯುವ ಉಪ್ಪಿಟ್ಟನ್ನೇ ಆತುರವಾಗಿ ತಿನ್ನಲು ಹೋದರೇನು ರುಚಿ? ಡಬರಿ ಮೇಲೆ ಮುಚ್ಚಳ ಮುಚ್ಚಿ ಒಂದೈದು ನಿಮಿಷ ಮುಚ್ಚಿಟ್ಟರೆ ಆವಿಯಲ್ಲಿ ಎಷ್ಟು ಮೃದುವಾಗುತ್ತೇನೆ! ಸ್ವಲ್ಪ ಕೊತ್ತಂಬರಿನೋ  (ತುಪ್ಪದಲ್ಲಿ) ಕರಿದ ಗೋಂಬಿಯಲ್ಲೋ  ಅಲಂಕರಿಸಿದರೆ..ನನಗಿಂತ ಸುಂದರಿ ಯಾರುಬಿಸಿಬಿಸಿಯಾಗಿ ತಿಂದರಲ್ಲವೇ ರುಚಿ? ಚಟ್ನಿ ಪುಡಿ, ಉಪ್ಪಿನಕಾಯಿಯ ಜೊತೆ ಗೂಡಿದರೆ ನನಗೆ ಸಮರಾರು

ಆರಿದ ಮೇಲೆ ಕಾಂಕ್ರೀಟ್ ಅಂತ ದೂರೋದು ಯಾಕೆ? ನಿಂದನೆಗಳು ಕೇಳಿ ಕೇಳಿ ಸಾಕಾಗೋಗಿದೆ ನನಗೆ. ‘ಕುಣೀಲಾರದವಳು ನೆಲ ಡೊಂಕುಅಂತಾರಲ್ಲ ಹಾಗೆ..ಉಪ್ಪಿಟ್ಟ್ ಮಾಡೋಕೆ ಬರದವರು ಉಪ್ಪಿಟ್ಟ್ನ ಸ್ಟುಪ್ಪಿಟ್ ಅಂದರಂತೆ. ಕಡಿಮೆ ಸಮಯದಲ್ಲಿ ಕಡಿಮೇ ಪದಾರ್ಥಗಳಲ್ಲಿ  ಮಾಡಬಹುದಾದ ರುಚಿಕರವಾದ, ಆರೋಗ್ಯಕರವಾದ ತಿಂಡಿ ನನ್ನ ಬಿಟ್ಟರೇ ಇನ್ಯಾವುದಿದೆ? ಹಾನಿಕಾರಕ ಮ್ಯಾಗಿಗಿಂತ ನಾನು ಕಡೇನಾ

Friday, October 8, 2021

ನೆನಪಿನ ತಾಣ

ಜವಾಹರ್ ನವೋದಯ ವಿದ್ಯಾಲಯ, ಗೊಲ್ಲಹಳ್ಳಿ, ತುಮಕೂರು. ಇದು ನನ್ನ ಬಾಲ್ಯದ ನೆನಪಿನ ಅರಮನೆನವೋದಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣವೆಂದು ಕಾಗದ ಬಂದ ದಿನ ಮನೆಯಲ್ಲೊಂದು ಹಬ್ಬ. ಎಸ್ ಪಾಸಾದಂತೆ. ಅಮ್ಮನಂತೂ ಊರಿಗೆಲ್ಲಾ ಹೇಳಿಕೊಂಡು ಬಂದಿದ್ದಳು. ನನ್ನ ಶಾಲಾ ಮಾಸ್ತರರೊಬ್ಬರು ಎತ್ತಿಕೊಂಡು ಮೈದಾನವೆಲ್ಲ ಮೆರೆಸಿದ್ದರು. ನನಗೇನೋ ಸಾಧಿಸಿದ ಹೆಮ್ಮೆ. ಮನೆಯವರೆಲ್ಲಾ ಚರ್ಚೆ ಮಾಡಿ ಕೊನೆಗೆ ನನ್ನನ್ನು ವಿದ್ಯಾಲಯಕ್ಕೆ ಕಳಿಸಲು ನಿರ್ಧಾರಕ್ಕೆ ಬಂದರು . ಅಮ್ಮ ಮನೆಯಲ್ಲೇ ಇದ್ದ ಟ್ರಂಕ್ ನಲ್ಲಿ ಸ್ವಲ್ಪ ಬಟ್ಟೆ-ಬರೆ ಚಟ್ನಪುಡಿ, ತುಪ್ಪ, ತುರುಕಲು ತಿನಿಸುಗಳು ಮತ್ತಿತರ ಅಗತ್ಯ ವಸ್ತುಗಳನ್ನು ಹಾಕಿ ಸಿದ್ದಮಾಡಿದಳು. ಬೆಳಗಿನ ಆರು ಗಂಟೆಯ  ತುಮಕೂರ್ ಬಸ್ಸೇರಿ ಉರ್ಡಿಗೆರೆಯಲ್ಲಿಳಿದು ನವೋದಯ ಶಾಲೆಗೆಂದು ಇನ್ನೊಂದು ಬಸ್ ಏರಿ ಸುಮಾರು ೧೧ ಗಂಟೆಗೆ ಸೇರಿದೆವು. ನಮ್ಮೊಡನೆ ನನ್ನಂತೆಯೇ ಪ್ರವೇಶ ಪರೀಕ್ಷೆಯಲ್ಲಿ ಪಾಸಾದ ಸಿಂಧು ಮತ್ತವಳ ತಂದೆ-ತಾಯಿ ಜೊತೆಗಿದ್ದರು. ಅವಳ ತಂದೆ ಹೈಸ್ಕೂಲ್ ಮಾಸ್ತರು. ಅಮ್ಮನಿಗೆ ಅಡ್ಮೀಶನ್ ಬಗ್ಗೆ  ವಿವರಿಸಿದಳು. ನನಗೂ  ಪ್ರಿನ್ಸಿರಾಲರಿಗೆ ಹೇಗೆ  ನಮಸ್ಕಾರ ಮಾಡಬೇಕೆಂದು ಹೇಳಿಕೊಟ್ಟರು. ಅಲ್ಲಿಗೆ ಸೇರಿದ ಮೇಲೆ ಅಡ್ಮೀಶನ್ ಮಾಡಲಿಕ್ಕೆ ಅಮ್ಮನಿಗೆ ಸಹಾಯ ಮಾಡಿದರು. ನಮಗೆ ಡಾರ್ಮೇಟರಿಯಲ್ಲಿ ಒಂದು ಮಂಚ ತೋರಿಸಿ ಇದೇ ನಿನ್ನ ಜಾಗವೆಂದರು. ಮಧ್ಯಾನ್ಹದ ಊಟವೂ ಆಯ್ತು. ನನಗೆ ಸಾಲಿನಲ್ಲಿನಿಂತು ಊಟ ತಿನ್ನುವ ಮೊದಲ ಅನುಭವ. ತುಂಬಾ ಹಸಿದಿದ್ದರಿಂದ ರುಚಿಯದೇನೂ ತಕರಾರಿಲ್ಲ. ಎಲ್ಲ ಮುಗಿದ ಮೇಲೆ ಅಮ್ಮ ಊರಿಗೆ ಹಿಂದಿರುಗುವ ಸಮಯ. ಡೈನಿಂಗ್ ಹಾಲ್ ಎದುರಿನ ಬೆಂಚಿನಮೇಲೆ ಕುಳಿತಿದ್ದೆವು. ನಾನು ಅಮ್ಮನ ತೂಡೆಯ ಮೇಲೆ ತಲೆ ಇಟ್ಟು ಮಲಗಿದ್ದೆ. ಕಣ್ಣಿನಂಚಿನಲ್ಲೇ ನೀರು ಹೊರಗೆ ಬರಒಲ್ಲದು, ಒಳಗೆ ನಿಲ್ಲಒಲ್ಲದು. ತಲೆ ನೇವರಿಸುತ್ತಿದ್ದ ಅಮ್ಮನಾ ಇನ್ನು ಬರಲೇಎಂದಾಗ ಧಾರಾಕಾರವಾಗಿ ಕಣ್ಣೀರು ಹರಿದು ಅಮ್ಮನ ತೊಡೆ ತೋಯಿಸಿತು. ಇನ್ನೈದು ನಿಮಿಷ ತಲೆ ಸವರಿಬರುವಾಗ ಎಷ್ಟು ಖುಷಿಯಿಂದ ಬಂದೆ ಈಗ್ಯಾಕೆ ಅಳು, ಅಳಬಾರದು ಚೆನ್ನಾಗೆ ಓದು, ಯಾರಹತ್ರನೂ ಜಗಳಾಡ ಬೇಡ, ಕಾಗದ ಬರಿ, ಮುಂದಿನ ಸಲ ಬಂದಾಗ ಏನಾದರು ಬೇಕಾದರೆ ಕಾಗದದಲ್ಲಿ ಬರಿ, ಈಗ ಬಸ್ಗೆ ತಡ ಆಗುತ್ತೆ. ನಾ ಹೊರಡ್ತೀನಿ. ನೀನ್ ಒಳಗ್ಹೋಗುಎಂದು ಕಳಿಸಿ , ತನ್ನ ಕಣ್ಣೀರನ್ನು ಕಣ್ಣಂಚಿನಲ್ಲೇ ತಡೆದು, ತಾನು ಗೇಟ್ ಕಡೆ ಹೆಜ್ಜೆ ಹಾಕಿದಳು. ನಾನು ಕಣ್ಣು ಹರಿಯುವವರೆಗೂ ಕಿಟಿಯಾಚೆ ಅಮ್ಮನನ್ನು ನೋಡುತ್ತಾ ನಿಂತೆ.


  ಸಂಜೆಯಾಯಿತು. ಸುಮಾರು ನಾಲ್ಕೂವರೆಗೆ ಢಣಢಣ ಗಂಟೆ ಬಾರಿಸಿತು.ಮತ್ತೆ ಡೈನಿಂಗ್ ಹಾಲ್ ಮುಂದೆ ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಸಾಲು.ಅದು ಟೀ ಸಮಯ. ಜೊತೆಗೆ ಮಾರಿ ಬಿಸ್ಕೇಟ್. ಟೀ ನನಗೆ ಸೇರತ್ತಿರಲಿಲ್ಲ ಬರೀ ಬಿಸ್ಕೇಟ್ ಪಡೆದೆ. ಹತ್ತು ನಿನಿಷದ ಬಳಿಕ ಮತ್ತೊಂದು ಬೆಲ್ ಅಸೆಂಬ್ಲಿಗೆ. ಆಗ ಪಿಟಿ ಸರ್ ಅನಿಲ್ ಕುಮಾರ್ ರವರ ದರ್ಶನವಾಯ್ತು. ನೋಡಲು ಸಣ್ಣಗಿದ್ದರೂ ಎತ್ತರದ ಶಿಸ್ತಿನ ಮನುಷ್ಯ. ಅಸೆಂಬ್ಲಿಯಲ್ಲಿ ಮೊದಲು ಪ್ರಾರ್ಥನೆ, “ಓಂ ....” ಹೊಸ ಮಕ್ಕಳನ್ನೆಲ್ಲಾ ಪ್ರತ್ಯೇಕ ಸಾಲುಗಳಲ್ಲಿ ನಿಲ್ಲಿಸಿದ್ದರು. ಪ್ರಾರ್ಥನೆಯ ನಂತರ ಮಾಸ್ ಪಿ ಟಿ ಮಾಡಿಸಿ ಡಿಸ್ಮಿಸ್ ಮಾಡಿದರು. ನಾನು ಸುಮ್ಮನೆ ಪಿಳಿಪಿಳಿ ಕಣ್ಬಿಟ್ಟು ನೋಡುತ್ತಿದ್ದೆನೇ ಹೊರತು ಮಾಡಲೇನೂ ಬರುತ್ತಿರಲಿಲ್ಲ. ಸಿಂಧು ನನಗೆ ಹೋಲಿಸಿದರೆ ಕುಳ್ಳಕ್ಕೆ ಮತ್ತು ಸಣ್ಣಕ್ಕೆ ಇದ್ದ ಕಾರಣ ನನಗಿಂತ ಸಾಲಿನಲ್ಲಿ  ಮುಂದೆ ನಿಲ್ಲಿಸಿದ್ದರು. ಅವಳನ್ನು ನೋಡಿ ಅನುಕರಿಸಲು ಪ್ರಯತ್ನಿಸುತ್ತಿದ್ದೆ. ಅಸೆಂಬ್ಲಿ ನಂತರ ಮತ್ತೆ ಡಾರ್ಮೆಟ್ರಿಗೆ ಬಂದು ಟ್ರಂಕ ತೆಗೆದು ನಾನು ಸಿಂಧು ತಿಂಡಿಗಳನ್ನು ಹಂಚಿ ತಿಂದೆವು. ನಂತರ ಸ್ಟಡಿ ಟೈಮ್. ಓದಲೇನು ಪುಸ್ತಕಗಳಿರದ ಕಾರಣ ಹಾಗೆೇ ಹೊತ್ತು ಕಳೆದು ಮತ್ತೆ ರಾತ್ರಿ ಊಟಕ್ಕೆ ಹೋದೆ, ಆದರೆ ಹುಡುಗಿಯಾರಾರು ಆಚೆ ಬರಲಿಲ್ಲ. ನನ್ನ ನೋಡಿ ಇದು ಬಾಯ್ಸ ಬ್ಯಾಚ್ ಗರ್ಲ್ಸ ಬ್ಯಾಚ್ ಗೆ ಮತ್ತೆ ಬೆಲ್ ಮಾಡ್ತಾರೆ ಅಂತ ನನ್ನ ಹಾಗೆ ಬಂದ ಒಬ್ಬ ಹೊಸ ಹುಡುಗಿ ಹೇಳಿದಳು. ಹಾಗೆಯೇ ನಿನ್ನ ಹೆಸರೇನು? ಯಾವೂರು? ಎಂದು ವಿಚಾರಿಸಿ ಕೊಂಡಳು. ನಾನೂ ಕೇಳಿದೆನಾನು ಬಿಂದು, ಇವಳು ರಾಜೇಶ್ವರಿ ನಾವಿಬ್ಬರದೂ ಮಧುಗಿರಿಎಂದಳು. ಮತ್ತೆ ಊಟದ ಬೆಲ್ ಆಗುವವರೆಗೂ ಅವರ ಮಂಚದ ಬಳಿ ಕೂತು ವಿವರಗಳನ್ನು ಹಂಚಿಕೊಂಡೆ

ರಾತ್ರಿ ಊಟದಲ್ಲಿ ಚಪಾತಿ ಇತ್ತು. ಊಟದ ನಂತರ ಬಾಳೆ ಹಣ್ಣು ಕೂಡ ಕೊಟ್ಟರು. ಕೆಲವರಿಗೆ ಆಯ್ಕೆ ಮೇರೆಗೆ ಮೊಟ್ಟೆ ಕೊಟ್ಟಿದ್ದು ಗಮನಿಸಿದೆ. ರಾತ್ರಿ ಮಲಗುವ ಮುಂಚೆ ಮತ್ತೆ ಅಸೆಂಬ್ಲಿ ಕರೆದರು. ಆರನೆೇ ಕ್ಲಾಸಿನ ಮಕ್ಕಳಿಗೆ ಮಾತ್ರ ಪ್ರತ್ಯೇಕ ಗುಂಪು ಮಾಡಿ ಅದಕ್ಕೆರಾಜೀವ್ ಹೌಸ್ಎಂದು ನಾಮಕರಣ ಮಾಡಿದರು. ನಮ್ಮ ಗುಂಪಿನ ನಾಯಕಿ ಅನಿತಕ್ಕ. ಹೌಸ್ ಮಿಸ್ಟ್ರಸ್ ಜಯಮ್ಮ ಮಿಸ್. ಆದಿನವೇ ಸೋಪು, ಟೂತ್ ಪೇಸ್ಟ, ಪೆನ್ ಮತ್ತಿತರ ಅಗತ್ಯ ಸ್ಟೇಶನರಿ ವಿತರಿಸಿದರು. ಹೀಗೆ ಮೊದಲ ದಿನ ಕೊಂಚ ಧೀರ್ಘವಾಗಿ ಕಳೆಯಿತು.

   ಮಾರನೇ ದಿವ ಬೆಳಿಗ್ಗೆ ನಾಲ್ಕು ವರೆ ಸುಮಾರಿಗೆ ಮತ್ತೆ ಬೆಲ್ ಮೊಳಗಿತು. ಅನಿತಕ್ಕ ಬಂದು ಹೊದಿಕೆ ಎಳೆದು ಎಬ್ಬಿಸಿದರು. ಎಲ್ಲರಂತೆ ನಾನೂ ಜಗ್ನಲ್ಲಿ ನೀರು ತುಂಬಿಕೊಂಡು ಹಲ್ಲು ಉಜ್ಞಲು ಹೋದೆ . ನಂತರ ಎಲ್ಲರೂ ಗಡಿಬಿಡಿಯಲ್ಲಿ ಯೂನಿಫಾರ್ಮ ಧರಿಸಿ ಶೂ ಸಿಕ್ಕಿಸಿ ಮೈದಾನಕ್ಕೆ ಓಡಿದರು. ಅವರವರ ತಂಡದೊಂದಿಗೆ ನಿಂತು ಪ್ರಾರ್ಥನೆ ಮಾಡಿ , ತಂಡದ ನಾಯಕರು ಹೇಳಿದಂತೆ ವ್ಯಾಯಮ ಮಾಡ ತೊಡಗಿದರು . ನಮ್ಮನ್ನು ಅನಿತಕ್ಕ ಜಾಗಿಂಗ್ ಮಾಡಿಸಿದರು. ಮಾರ್ಚಪಾಸ್ಟ ಹೇಳಿಕೊಟ್ಟರು. ನಾನಂತು ತಪ್ಪು ಮಾಡಿ ಮುಂದಿರುವವರ ಕೈಗೆ ಹೊಡೆದದ್ದೇ ಜಾಸ್ತಿ. ಮತ್ತೆ ಏಳೂವರೆಗೆ ಮತ್ತೊಂದು ಬೆಲ್....ತಿಂಡಿಗೆ...ಮತ್ತೊಂದು .. ಪ್ರಾರ್ಥನೆ ಹೇಳಿ ಕ್ಲಾಸಿಗೆ ಹೋಗಲು. ಆರನೇ ಕ್ಲಾಸಿನಲ್ಲಿ ಎರಡು ವಿಭಾಗಗಳಿದ್ದವು ಮತ್ತು ಬಿ. ವಿಭಾಗ ಇಂಗ್ಲೀಷ್ ಮೀಡಿಯಂದು, ಬಿ ಕನ್ನಡ ಮೀಡಿಯಂದು. ನಾನು ಬಿ ಯಲ್ಲಿ ಇದ್ದೆ. ಕ್ರಮೇಣ ಕೆಲ ವಿದ್ಯಾರ್ಥಿಗಳು ಬಿಟ್ಟು ಹೋದ ಮೇಲೆ ಎರಡೂ ವಿಭಾಗಗಳನ್ನೂ ಸೇರಿಸಿ ಒಂದೇ ತರಗತಿ ಮಾಡಿದರು

  ನಮ್ಮದು ಶಾಲೆಯಲ್ಲಿ ಐದನೇ ಬ್ಯಾಚ್. ಬ್ಯಾಚ್ನಲ್ಲಿ ನನ್ನ ತಾಲೂಕಾದ ಪಾವಗಡದಿಂದ ನಾನು, ಸಿಂಧು, ರಾಧಮ್ಮ, ಚಿಕ್ಕನಾಯಕನ ಹಳ್ಳಿಯ ಜಿಸಿ ಲತಾ, ವಿದ್ಯಾ, ಲತಾ, ಶೈಲಶ್ರೀ, ತುರುವೇಕೆರೆಯಿಂದ ಕೆಪಿ ಲತಾ, ನೇತ್ರ, ಶಿಲ್ಪ, ತುಮಕೂರಿನ ಸ್ವಪ್ನ, ತಿಪಟೂರಿನ ಅಪರ್ಣ, ಚೈತ್ರ, ಮಮತ, ಮಧುಗಿರಿಯ ಬಿಂದು, ರಾಜೇಶ್ವರಿ. ಶಿರಾದ ಭಾನು ಹೀಗೆ ಹದಿನಾರು ಜನರ ರಾಜೀವ್ ಹೌಸ್ ಅಸ್ತಿತ್ವಕ್ಕೆ ಬಂತು. ಹದಿನೇಳು ಜನರನ್ನೂ ಮರು ವಿಂಗಡಣೆ ಮಾಡಿ ಶಾಲೆಯ ಮುಖ್ಯ ತಂಡಗಳಾದ ಅಜಾದ್ ಹೌಸ್, ನೆಹರು ಹೌಸ್, ಶಿವಾಜಿ ಹೌಸ್, ಟಾಗೂರ್ ಹೌಸ್ ಹಾಗೂ ಸುಭಾಷ್ ಹೌಸಗಳಿಗೆ ಹಂಚಿದರು . ಪಠ್ಯೇತರ ಚಟುವಟಿಕೆಗಳಿಗಾಗಿ ತಂಡಗಳ ರಚನೆ ಮಾಡಿದ್ದರುಪಾಠವೆಷ್ಟೋ ಆಟವೂ ಅಷ್ಟು. ಪ್ರತಿದಿನ ಏನೋವೊಂದು ಸ್ಪರ್ಧೆಯೋ, ಚಟುವಟಿಕೆಯೋ ಖಂಡಿತವಾಗಿರುತ್ತಿತ್ತು. ಇದಕ್ಕಾಗಿಯೇ ಎಂಪಿ ಹಾಲ್  ಎಂಬ ಬೃಹತ್ ಕಟ್ಟಡವಿತ್ತು

  ಹೀಗೆ ದಿನ ಕಳೆದಂತೆ ಎಲ್ಲ ಚಟುವಟಿಕೆಗಳೂ ಅಭ್ಯಾಸವಾಯಿತು. ಭಾನುವಾರಗಳ ಸಡಗರವನ್ನು ಹೇಳಲೇ ಬೇಕು. ಡಾರ್ಮೆಟರಿ ಮದುವೆ ಮನೆಯಂತಿರುತ್ತಿತ್ತು. ಒಂದು ಕಡೆ ಬೇಗ ಎದ್ದು ಸ್ನಾನ, ಬಟ್ಟೆ, ಶೂ ಒಗೆಯುವುದನ್ನೆಲ್ಲಾ ಮುಗಿಸಿ ಬೀಗುತ್ತಿರುವವರು, ಮತ್ತೊಂದೆಡೆ ಏನೋ ಹಾಸ್ಯಮಾಡಿಕೊಂಡು  ಮಾಡು ಹಾರುವಂತೆ  ನಗುವವರು. ಅಪ್ಪ-ಅಮ್ಮ ಬರುವರೆಂದು ಎದುರು ನೋಡುತ್ತಿರುವವರು, ಹೊರಗಡೆ ಬಟ್ಟೆ ಒಗೆಯಲು ಸರತಿ ಸಿಗದೇ ಪರದಾಡುವವರುಪ್ರತಿಯೊಬ್ಬರೂ ಭಾನುವಾರವನ್ನು ಆನಂದದಿಂದ ಕಳೆಯುತ್ತಿದ್ದರು. ಭಾನುವಾರದಂದು ಬೆಳಗಿನ ಅಸೆಂಬ್ಲಿ ಇರುತ್ತಿರಲಿಲ್ಲ. ಆದರೆ ಬೇಗ ಎದ್ದು ನಮ್ಮನಮ್ಮ ಬಟ್ಟೆಗಳ ಒಗೆಯಲು ಟ್ಯಾಂಕಿನ ಬಳಿ ಹೋಗಬೇಕಾಗಿತ್ತುಓಡಿ ಹೋಗಿ ಬಂಡೆ ಹಿಡಿದು ಒಗೆದುಕೊಂಡು ಬರಬೇಕು. ನಾನೂ ಮೊದಮೊದಲು ಓಡುತ್ತಿದ್ದೆ,ಆನಂತರದ ದಿನಗಳಲ್ಲಿ ಮೊದಲು ಓಡಿದವರಿಗೇನಿಮ್ಮ ನೆಕ್ಸಟ್ ನಾನುಎಂದು ಸರತಿ ಹೇಳಿ ಬಿಡುತ್ತಿದ್ದೆ. ಸ್ನಾನದ ಕೋಣೆಗೂ ಸಾಲು ಇರುತ್ತಿತ್ತು. ತಲೆ ಸ್ನಾನ ಮಾಡಿದಾಗಲೆಲ್ಲಾ ಸೀಗೆಪುಡಿ ಕಣ್ಣಿಗೆ ಬಿದ್ದು, ಕೆಂಗಣ್ಣಾಗಿರುತ್ತಿತ್ತು. ಅದನ್ನು ಗಮನಿಸಿದ ನಮ್ಮ ಸೋಶಿಯಲ್  ಮಿಸ್ ನಿರ್ಮಲಾ ಮಿಸ್, ಮುಂದಿನ ಸಲ ಊರಿಂದ ಶಾಂಪು ತರಿಸಿ ಕೊಳ್ಳಲು ಸೂಚಿಸಿದರು

ಹೀಗೆ ನನ್ನ ನವೋದಯದ ದಿನದಳು ವಾರಗಳಾದವು. ಒಂದು ತಿಂಗಳವರೆಗೆ ಅಮ್ಮ ಬರಲಿಲ್ಲ. ಊರಿಂದ ಬರುವವರ ಕೈಲಿ ಏನದರೂ ತಿನಿಸು ಕಳಿಸುತ್ತಿದ್ದರು. ಪತ್ರವಂತೂ ಪ್ರತಿವಾರ ಬರುತ್ತಿತ್ತು. ಪತ್ರದಲ್ಲಿ ಕೇಳಿದ ವಸ್ತುಗಳೂ ಬರುತ್ತಿತ್ತು. ಪ್ರತಿ ಭಾನುವಾರವೂ ಬೆಂಚಿನ ಮೇಲೆ ಕೂತು ಕಾಯುತ್ತಿದ್ದೆ. ಒಂದು ಭಾನುವಾರ ದೀಪಾ ಪೇರೆಂಟ್ಸ ಎಂದು ಕೂಗಿದ ದನಿ ಕೇಳಿ ಡಾರ್ಮೆಟರಿ ಸುತ್ತಾ ಓಡಿದೆ. ಅಮ್ಮ ಕಾಣಿಸಲಿಲ್ಲ. ಒಳಗೆ ವಾಪಾಸು ಹೋಗಿ ನನ್ನ ಹೆಸರು ಕರೆದವರ ಹುಡುಕುತ್ತಿದ್ದೆ, ಆದರೆ ಕಿಟಕಿಯಲ್ಲಿ ಅಮ್ಮ!! ನನ್ನ ನೋಡುವ ಕಾತರದಿಂದ ಕಿಟಕಿ ಏರಿದ್ದಳು. ನಾನೇ ಹಿಂದಿನಿಂದ ಹೋಗಿ ತಬ್ಬಿದೆ. ಅವಳೂ ಕಣ್ಣಂಚಿನ ಆನಂದದ ಕಣ್ಣೀರ ಒರಸಿಕೊಂಡು ಕೈ ಹಿಡಿದು  ನಡೆದಳು. ಒಂದು ಮರದ ಕೆಳಗೆ ತನ್ನ ಬುಟ್ಟಿಯನ್ನು ತೆಗೆದು ಚಿತ್ರಾನ್ನ ತಿನ್ನಿಸಿ ತಾನೂ ತಿಂದಳು. ತಲೆ ಬಾಚಿ ತಾ ತಂದಿದ್ದ ಹೂ ಮುಡಿಸಿ ಮುದ್ದಿಸಿದಳು. ಕುರುಕಲು ತಿಂಡಿಗಳನ್ನು ಟ್ರಂಕಿನಲ್ಲಿ ಜೋಪಾನ ಮಾಡಿ ಬಂದು ಮತ್ತೆ ಅಮ್ಮನೊಂದಿಗೆ ಸಮಯ ಕಳೆದೆ. ಊರಿನ ಸಮಾಚರ ಎಷ್ಟು ಕೇಳಿದರೂ ಸಾಲದು. ಸಾರಿ ಅಮ್ಮನನ್ನು ಕಳಿಸಿಕೊಡಲು ಅಳಲಿಲ್ಲ. ನನಗಾಗಲೇ  ಸ್ವಾತಂತ್ರ್ಯದ ರುಚಿ ಹತ್ತಿತ್ತು. ಅಮ್ಮನಿಗೂ ನನ್ನ ಬಗ್ಗೆ ಭರವಸೆ ಬಂತು. ಮುಂದಿನ ಸಲ ಬರುವಾಗ ತಮ್ಮ ಮತ್ತು ತಂಗಿಯರನ್ನು ಕರೆತರಲು ಒಪ್ಪಿದಳು ಬಾರಿ ಗೇಟಿನವರೆಗೂ ಹೋಗಿ ಬಸ್ಸು ಹತ್ತಿಸಿದೆ

  ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಯಿತು. ಒಂದೆರಡು ತಿಂಗಳ ಬಳಿಕ ಎಡನೇ ಸುತ್ತಿನ ಪ್ರವೇಶಗಳಾದವು. ನವಿತ, ವೀಣಾ, ಮಮತ ಎಂಬ ಮೂರು ಹುಡುಗಿಯರು ರಾಜೀವ್ ಹೌಸ್ಗೆ ಸೇರಿದರುಪಿಟಿ ಸರ್ ಸೊಸೆ ಜ್ಯೋತಿಕೂಡ ಸಮಯಕ್ಕೆ ಬಂದ ನೆನಪು. ಜ್ಯೋತಿಯೊಂದಿಗೆ ಬಹಳ ಸಲ ಸ್ಪೋರ್ಟ್ಸ ರೂಂಗೆ ಹೋಗಿ ಕೇರಂ ಆಡಿದ್ದೆ.. ನನಗಾ ವೇಳೆಗಾಗಲೇ ಶಾಲೆಯ ಎಲ್ಲಾ ಪದ್ದತಿಗಳು ಒಗ್ಗಿ ಹೋಗಿತ್ತು. ಎಲ್ಲರೊಂದಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದೆ ಕ್ಲಾಸಿನವರಲ್ಲದೆ ಕೆಲ ಸೀನಿಯರ್ ಹುಡುಗಿಯರೂ ಪರಿಚಯವಾದರು.ಅವರಲ್ಲಿ ತುಮತೂರು ಬಳಿಯ ಸಂಪಿಗೆ  ಊರಿನ ಸುಷ್ಮಕ್ಕ ಎನ್ನುವವರು ವಿಷೇಶ. ನನ್ನ ಸುತ್ತ ಮುತ್ತಲಿನ ಮಂಚದವರೊಂದಿಗೂ ಸಲಿಗೆ ಬೆಳೆಯಿತು. ಯೂನಿಫಾರ್ಮಗಳನ್ನು, ಕೆಲ ಉಡುಪುಗಳನ್ನು ಒಬ್ಬರಿಗೊಬ್ಬರು ಬದಲಾಯಿಸಿ ಕೊಳ್ಳುವಷ್ಟು. ನಾನೊಮ್ಮೆ ಲತಾಳ ಹಸಿರು ಸ್ವೆಟರ್ ವಾರಗಳ ಗಟ್ಟಲೆ ಹಿಂದಿರುಗಿಸಿರಲಿಲ್ಲ. ಖಡಕ್ ಸ್ವಭಾವದ ಅವಳುನೋಡ್ತೀನಿ ಇನ್ನು ಎಷ್ಟದಿವಸ  ಕೊಡಲ್ಲಾಂತ!’ ಎಂದು ಮುನಿಸಿಕೊಂಡ ಮೇಲೆ ಒಗೆದು  ಹಿಂದಿರುಗಿಸಿದ್ದೆ. ಕ್ಲಾಸಿನಲ್ಲಿ ಮಂದಿನ ಬೆಂಚಿನ ಕೊನೆಯಲ್ಲಿ ಕೂರುತ್ತಿದ್ದಳು. ಮಿತ ಭಾಷಿ. ಮೊದಲ ದಿನ SUPW ಶಿಕ್ಷಕಿ ಉಮಾ ಮುಂದೆ ನೀವೇನಾಗ ಬೇಕೆಂದು ಪ್ರತಿಯೊಬ್ಬರನ್ನು ಪ್ರಶ್ನಿಸಿದಾಗ ಲತಾ ನಾನು ಟೀಚರ್ ಆಗುತ್ತೀನೆಂದು ಹೇಳಿದ್ದಳು. ಅದರಂತೆಯೇ ಈಗ ಶಾಲಾ ಶಿಕ್ಷಕಿಯಾಗಿರುವುದು ಅವಳ ಬದ್ಧತೆಗೆ ಸಾಕ್ಷಿ. ಮತ್ತೊಬ್ಬ ಲತಾ ಬಿಂದಾಸ್ ಹುಡುಗಿ. ಹುಡುಗರ ಥರ ತಲೆ ಕೂದಲು. ಆಟಗಳಲ್ಲಿ ಮುಂದು. ನಗುತ್ತಾ ನಗಿಸುವ ಸ್ವಭಾವ. ನಡಿಗೆಯಲ್ಲಿ ಪಕ್ಕಾ ‘Tom boy’.  ನಾನು ಶಾಲೆ ಬಿಟ್ಟ ಬಹಳ ದಿನಗಳ ನಂತರ ಒಮ್ಮೆ ನಮ್ಮ ಕಾಲೇಜಿಗೆ ಆಟದ ಗುಂಪಿನೊಂದಿಗೆ ಬಂದಿದ್ದಳು. ನಾ ಗಮನಿಸಿ ನೀವು ಜಿಸಿ ಅಲ್ಲವೇ ಎಂದು ಕೇಳಿದ ಕೂಡಲೇ ಆಶ್ಚರ್ಯದ ನೋಟ ನೋಡಿಅರೆ ದೀಪಾ, ನೀವಾಎಂದು  ಆಲಂಗಿಸಿದಳು. ನಾನೂ ಒಂದು ಪೀರಿಯಡ್ ಬಂಕ್ ಹೂಡೆದು ಹರಟೆ ಹೊಡೆದಿದ್ದೆ. ಅವಳೂ ಈಗ ಶಿಕ್ಷಕಿಯಾಗಿ  ನಿರಂತರ ನಗು ಹಂಚುತ್ತಿದ್ದಾಳೆ


  ಆರನೇ ಕ್ಲಾಸ್ ಆಟದಂತೆ ಕಳೆದು ಹೋಗುತ್ತಿತ್ತು. ಓದಿಗೇನೂ ಲೋಪವಿಲ್ಲ. ತಿಂಗಳ ಪರೀಕ್ಷೆಗಳೂ, ರಸಪ್ರಶ್ನೆಗಳು, ತಪ್ಪದೇ ನಡೆಯುತ್ತಿದ್ದವು. ಹಿಂದಿ ಉಳಿದಂತೆ ಬೇರೇ ವಿಷಯಗಳೇನೂ ನನಗೆ ಕಷ್ಟವಿರಲಿಲ್ಲ. ಮಧ್ಯೆ ಪ್ರತಿ ತಿಂಗಳ ಎರಡನೇ ಭಾನುವಾರ ನನ್ನ ನೋಡಲು ಮನೆಯಿಂದ ಯಾರಾದರೊಬ್ಬರು ಬರುತ್ತಿದ್ದರು. ಗಣೇಶನ ಹಬ್ಬಕ್ಕೆ ಊರಿಗೂ ಕಳಿಸಿದ ನೆನಪು. ಸ್ವಾತಂತ್ರ್ಯ ದಿನಾಚಕಣೆಯನ್ನು ವಿಷೇಶವಾಗಿ ಆಚರಿಸುತ್ತಿದ್ದರು. ವೇಳೆಗಾಗಲೇ ಶಾಲೆಯ ಎಲ್ಲಾ ಹಾಡುಗಳು ಚೆನ್ನಾಗಿ ಬರುತ್ತಿದ್ದವು. ತಕ್ಕಮಟ್ಟಿಗೆ ಮಾರ್ಚಫಾಸ್ಟ್ ಕೂಡ. ಆಟಗಳಲ್ಲಾಗಲೀ, ಹಾಡು ಡ್ಯಾನ್ಸಗಳಲ್ಲಾಗಲೀ ನನಗೆ ಆಸಕ್ತಿ ಇರಲಿಲ್ಲ. ಕಳ್ಳ ನೆಪ ಮಾಡಿ ಬಹಳಸಲ ಭಾಗವಹಿಸುವುದನ್ನು ತಪ್ಪಿಸಿದ್ದೇನೆ. ಭಾಷಣ ಮಾಡುವುದು, ಪ್ರಬಂಧ ಬರೆಯುವುದುಇಂಥವುಗಳಲ್ಲಿ ಆಸಕ್ತಿ. ಸ್ವಲ್ಪ ದೊಡ್ಡಸ್ತಿಕೆಯ ಹುಚ್ಚು ಇತ್ತು. ಮಧ್ಯ ವಾರ್ಷಿಕ ಪರೀಕ್ಷೆಯಾದ ಮೇಲೆ  ಡಿಸೆಂಬರ್ ೧೫ರಿಂದ ಜವನರಿ ೧೫ರವರೆಗೆ ಊರಿಗೆ ಕಳಿಸಿದ್ದರು

    ಸಂಕ್ರಾಂತಿ ಮುಗಿಸಿ ವಾಪಾಸ್ ವಿದ್ಯಾಲಯಕ್ಕೆ ಬಂದಾಗ ನನ್ನ ಮಂಚದ ಜಾಗ ಬದಲಾಗಿತ್ತು. ಡಾರ್ಮೆಟರಿ ಕೊನೆಯಲ್ಲೊಂದು ಕಟ್ಟಿಗೆ ಮಂಚ. ಅಕ್ಕ ಪಕ್ಕ ಸೀನಿಯರ್ ಹುಡುಗಿಯರೇ ಇದ್ದರು. ನನ್ನ ಮಂಚಕ್ಕೆ ಓರೆಯಾಗಿ ಅಪರ್ಣಾಳದು. ತನ್ನದೇ ಆದ ಅಲೋಚನೆಗಳಲ್ಲಿ ಸದಾ ಮುಳುಗಿಲುತ್ತಿದ್ದಳು. ಅಂತರ್ಮುಖಿ. ಇಷ್ಟಕ್ಕೆ ಮುಂಚೆ ಅವಳ ಜೊತೆ ನನಗಷ್ಟೇನೂ ಒಡನಾಟವಿರಲಿಲ್ಲ. ಕ್ಲಾಸಿನಲ್ಲೂ ಕೆಪಿ ಲತಾಳೊಂದಿಗೆ ಹಿಂದಿನ ಬೆಂಚ್ನಲ್ಲಿ ಕೂರುತ್ತಿದ್ದಳು. ಇಬ್ಬರೂ ಎತ್ತರದ ಆಳುಗಳು. ಓದಿನಲ್ಲಿ ಇಬ್ಬರೂ ಎಲ್ಲರಿಗಿಂತ ಮುಂದು. ಆಗಾಗ ಲೈಬ್ರರಿಯ ಪುಸ್ತಕ ಮತ್ತು  ವಾರ ಪತ್ರಿಕೆಗಳನ್ನು ಹಂಚಿಕೊಳ್ಳುತ್ತಿದ್ದೆವಷ್ಟೆ. ನಮ್ಮಿಬ್ಬರ ಪುಸ್ತಕಗಳ ಆಸಕ್ತಿಯೇ ಸ್ನೇಹಕ್ಕೆ ನಾಂದಿಯಾಯಿತು. ಪದಬಂಧಗಳನ್ನು, ಧಾರವಾಹಿಗಳನ್ನು ಒಟ್ಟಿಗೆ ಓದಿ ಚರ್ಚಿಸುತ್ತಿದ್ದೆವು. ನಂಟು ಇಂದಿಗೂ ನನಗೆ ಬಲು ವಿಶೇಷ. ನನ್ನ ಬಾಲ್ಯದ ಸ್ನೇಹಿತೆಯರ ಪಟ್ಟಿಯಲ್ಲಿ ಅವಳದೇ ಮೊದಲ ಹೆಸರು. ನಾ ಶಾಲೆ  ಬಿಟ್ಟ ನಂತರ  ಒಬ್ಬರಿಗೊಬ್ಬರು ಪತ್ರಗಳು ಬರೆಯುತ್ತಿದ್ದೆವು. ಅವಳ ಬರವಣಿಗೆಯಲ್ಲಿ ಅಕ್ಕರೆ ಸೂಸುತ್ತಿದ್ದಳು. ಅವಳ ಮದುವೆಗೂ ಹೋಗಿದ್ದೆ. ಆಗ ಅವರ ಮನೆ ಅಂಗಳದಲ್ಲಿ ಕುಳಿತು ನಡು ರಾತ್ರಿಯವರೆಗೆ ಮಾತನಾಡಿದ್ದೆವು. ಹಿಂದಿನ ವರ್ಷ ನನ್ನ ತಂಗಿಯೊಂದಿಗೆ ಅವರೂರಿಗೆ  ಹೋಗಿ ಅದ್ದೂರಿ ಆಥಿತ್ಯ ಪಡೆದಿದ್ದೇನೆಕೆಪಿ ಲತಾ ಸದಾ ಅಭ್ಯಾಸನಿರತ ಹುಡುಗಿ. ಸೂಕ್ಷ್ಮ ಸ್ವಭಾವ. ನನ್ನ ಮೇಲೆ ಅವಳೂ ಕೆಲಬಾರಿ ಮುನಿಸಿಕೊಂಡಿದ್ದಾಳೆ. ನಾನೇ ದುಡುಕಿ ಒಮ್ಮೆ  ಸುಳ್ಳು ದೂರು ನೀಡಿದ್ದೆ. ಮತ್ತೊಮ್ಮೆ ಹಾಡಿನ ಸ್ಪರ್ಧೆಯಲ್ಲಿ ಅವಳು ಅಭ್ಯಾಸ ಮಾಡಿದ್ದು ನಾನು ಹಾಡಿದ್ದೆ. ಇದೇನು ಉದ್ದೇಶ ಪೂರ್ವಕವಾಗಿಯಲ್ಲ, ಕಾಕತಾಳೀಯ. ಕೆಪಿ ಓದಿನಲ್ಲಿ  ಮಾತ್ರ ರಾಜಿಯಾಗದೆ ಸದಾ ಮೊದಲು ಬರುತ್ತಿದ್ದಳು. ಅದರ ಫಲವೇ ಈಗ ವೈದ್ಯಳಾಗಿದ್ದಾಳೆ.  

ಸಿಂಧು ನನಗೆ ಆಪತ್ಭಂಧು. ಎಷ್ಟಾದರೂ ನಮ್ಮೂರಿನವಳು. ಪ್ರಾರಂಭದ ದಿನಗಳಲ್ಲಿ ರಾತ್ರಿಹೂತ್ತು ನಿದ್ದೆಬರದೆ ಒದ್ದಾಡುತ್ತಿದ್ದಾಗ ಕರೆದು ತನ್ನ ಪಕ್ಕ ಮಲಗಿಸಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಊಟದ ಸಮಯದಲ್ಲಿ ನಾ ಮಲಗಿದ್ದರೆ ತಟ್ಟೆಯಲ್ಲಿ ಊಟ ಹಾಕಿಸಿಕೊಂಡು ಬರುತ್ತಿದ್ದಳು. ಬಕೆಟ್ನಲ್ಲಿ ನೀರು ತುಂಬಿಸಿ ಕೊಂಡು ತರುವಾಗ ಕೈ ಹಾಕಿ ಭಾರ ಹಂಚಿ ಕೊಳ್ಳುತ್ತಿದ್ದಳು. ಒಂದು ವೇಳೆ ಅವಳೇನಾದರೂ ಬಟ್ಟೆ ತೊಳೆಯಲು ಮೊದಲು ಬಂಡೆ ಹಿಡಿದರೆ ಅವಳ ನಂತರದ ಸರದಿ ಖಾಯಂ ಆಗಿ ನಂದೇ. ಆಗಾಗ ಜಗಳವಾಡಿದರೂ ಅಕ್ಕ-ತಂಗಿಯರಂತೆ ಬಹು ಬೇಗ ಒಂದಾಗುತ್ತಿದ್ದೆವು. ದಿನಗಳ ಗಟ್ಟಲೆ ಎಂದೂ ಮುನಿಸಿ ಕೊಂಡಿಲ್ಲ. ನಾವೀಗ ಒಂದೇ ಬಡಾವಣೆಯಲ್ಲಿ ನೆಲಸಿರುವುದು ಖುಷಿಯ ಸಂಗತಿ

  ನಾವಿನ್ನೂ ಆರನೇ ಕ್ಲಾಸ್ನಲ್ಲಿರುವಂತೆಯೇ ಎಲ್ಲಾ ರಾಜೀವ್ ಹೌಸ್ ವಿಧ್ಯಾರ್ಥಿನಿಯರನ್ನು ಬೇರೆ ಹೊಸ ಕೊಠಡಿಗೆ ವರ್ಗಾಂತರಿಸಿದರು. ನಮ್ಮ ನಿರ್ವಹಣೆಗೆಂದು ಪ್ರಶಾಂತ ಕುಮಾರಿ ಎಂಬ ಇಂಗ್ಲೀಷ್ ಶಿಕ್ಷಕಿಯನ್ನು ನೇಮಿಸಿದ್ದರು. ಅವರೂ ನಮ್ಮೊಂದಿಗೆ ಕೊಠಡಿಯಲ್ಲೇ ಇದ್ದರು. ರೂಂನ ಎದುರಲ್ಲೇ ನೀರಿನ ಟ್ಯಾಂಕ್. ಒಮ್ಮೆ ನನ್ನ ಮಾವ ದೊಡ್ಡ ಕಲ್ಲಂಗಡಿ ಹಣ್ಣು ತಂದಿದ್ದರು. ಟ್ಯಾಂಕ್ನ ಬಳಿ ಕತ್ತರಿಸಿ ನಮ್ಮೆಲ್ಲರಿಗೂ ಹಂಚಿದ್ದರು. ಕೊಠಡಿಯಲ್ಲಿ ನಾವಿದ್ದದ್ದು ಕೆಲವೇ ಯತಿಂಗಳುಗಳಾದರೂ ನಮ್ಮನಮ್ಮಲ್ಲಿ ಒಬ್ಬರಿಗೊಬ್ಬರಿಗೆ ಭಾಂಧವ್ಯ ಬೆಳೆದಿದ್ದು ವಿಷೇಶ. ಒಂದೇ ಕುಟುಂಬದವರಂತೆ. ಹೋಂವರ್ಕ ಮಾಡಲು, ಡಾನ್ಸ್ ಅಭ್ಯಾಸ ಮಾಡಲು, ಪುಸ್ತಕಗಳನ್ನು ಬದಲ್ಸಿ ಕೊಳ್ಳಲು, ಸಿನಿಮಾ ಕಥೆಗಳನ್ನು ಹೇಳಿ ಕೊಳ್ಳಲು ...ಸ್ವಾತಂತ್ರ್ಯ ಹೆಚ್ಚಿತು. ನಮ್ಮ ನಾಯಕಿ ಅನಿತಕ್ಕ ಮುಖ್ಯ ಡಾರ್ಮೆಟರಿಯಲ್ಲೇ ಉಳಿದಿದ್ದರು. ಹಾಗಾಗಿ ನಿರ್ಭಯವಾಗಿ ತರ್ಲೆ ಮಾಡುತ್ತಿದ್ದವು. ಒಮ್ಮೆ ಪ್ರಸನ್ನ ಕುಮಾರಿ ಟೀಚರ್ ರನ್ನು ಅಣಕಿಸಿ, ತಪ್ಪಿಸಿ ಕೊಳ್ಳಲು ಎಲ್ಲರೂ ರಗ್ ಹೊದ್ದು ಮಲಗಿದ್ದೆವು. ಆಕೆ ಆದರೂ ಬಿಡದೆ ರಗ್ ಮೇಲೇ ಕೋಲು ಬೀಸಿದ್ದರು. ದಿನ ಕಳೆದಂತೆ ಆರನೇ ಕ್ಲಾಸ್ ಮುಗಿಯುವ ಹಂತಕ್ಕೆ ಬಂತು. ವೇಳೆಗಾಗಲೇ ಮತ್ತು ಬಿ ವಿಭಾಗಳನ್ನು ಸೇರಿಸಿ ಒಂದೇ ತರಗತಿ ಮಾಡಿದ್ದರುಪರೀಕ್ಷೆಗಳೆಲ್ಲಾ ಮಾರ್ಚ ತಿಂಗಳಿಗೆ ಮುಗಿದರೂ ಏಪ್ರಿಲ್ ಕೊನೆಯವರೆಗೂ ಶಾಲೆ ನಡೆಯುತ್ತಿತ್ತು. ಮೇ ಮತ್ತು ಜೂನ್ ನಲ್ಲಿ ಬೇಸಿಗೆ ರಜೆ. ರಜೆಗೆಲ್ಲರೂ ತಮ್ಮತಮ್ಮ ಊರಿಗೆ ಖುಷಿಯಿಂದ ಹೊರಟರು. ಮೊದಲ ಬೇಸಿಗೆ ರಜೆಯಂತೂ ಅವಿಸ್ಮರಣೀಯ.