ಹೀಗೊಂದು ಅನುಭವ
ಕನ್ನಡವನ್ನು ಕನ್ನಡದಲ್ಲಿ ಮಾತ್ರ ಹೇಳಿಕೊಡಲು ಸಾಧ್ಯವೆಂಬ ಭ್ರಮೆ ನನ್ನಲ್ಲಿತ್ತು ಯಾಕೆಂದರೆ ನನ್ನ ಮಗಳಿಗೆ ಕನ್ನಡವನ್ನುಕನ್ನಡದಲ್ಲೇ ಕಲಿಸಿದ್ದೆ!! ಆದರೆ ನನ್ನ ಮಗನಿಗೆ ಕನ್ನಡವನ್ನು ಇಂಗ್ಲೀಷ್ನಲ್ಲಿ ಕಲಿಸಬೇಕಾದ ಪರಿಸ್ಥಿತಿ(ದುಃಸ್ಥಿತಿ) ಬರುವುದೆಂದು ಕನಸು-ಮನಸಿನಲ್ಲೆಣಿಸಿರಲಿಲ್ಲ.
ನಾವು ಅಮೆರಿಕಾಗೆ ಹೋದಾಗ ಅವನಿಗಾಗ ಮೂರುವರಷ ತುಂಬಿತ್ತು. ಅದಕ್ಕೂ ಮುನ್ನ ಅವನನ್ನು ಶಾಲೆಗೆ ಕಳಿಸಿರಲಿಲ್ಲವಾದ್ದರಿಂದ ಇನ್ನೂ ಇಂಗ್ಲೀಷ್ ಗಾಳಿ ಅವನಿಗೆ ಸೋಕಿರಲಿಲ್ಲ. ಈ ಭಾಷೆ ಸಮಸ್ಯೆ ಶುರುವಾಗಿದ್ದು ಅವನನ್ನು ಅಮೆರಿಕದಲ್ಲಿ ಶಾಲೆಗೆ ಸೇರಿಸಿದಾಗ. ಅವರಾಡುವ ಇಂಗ್ಲೀಷ್ ಭಾಷೆ ಅರ್ಥವಾಗದೆ, ಒಂದೆರಡು ತಿಂಗಳು ಬರೀ ಮೂಗ ಭಾಷೆಯಲ್ಲೇ ಸಂಭಾಷಣೆ ನಡೆಯುತ್ತಿತ್ತು. ನನ್ನ ಮಗಳಂತೂ ಇವನಿಗೆ ಸಂಪೂರ್ಣ ವಿರುದ್ದ. ಎರಡು ತಿಂಗಳಲ್ಲಿ ಅರಳು ಹುರಿದಂತೆ ಇಂಗ್ಲೀಷ್ ಮಾತಾಡಲು ಶುರುಮಾಡಿದ್ದಳು. ಅಲ್ಲಿನ ಶಾಲೆಯಲ್ಲೊಂದು ನಿಯಮವಿದೆ, ಬೇರೆಭಾಷೆಯ ವಿದ್ಯಾರ್ಥಿಗಳು ಅವರ ಇಂಗ್ಲೀಷ್ ಭಾಷಾ ಜ್ಞಾನದ ಮಾಪನ ಮಾಡಿಸಿಕೊಳ್ಳಬೇಕು. ನನ್ನ ಮಕ್ಕಳಿಗೆ ಪರೀಕ್ಷೆ ಮಾಡಿಸಿದಾಗ, ಮಗಳಿಗೆ ಅವರ ನಿರೀಕ್ಷೆಗೆ ತಕ್ಕ ಜ್ಞಾನವಿತ್ತು, ಮಗನಿಗೆ ಇನ್ನೂ ಸುಧಾರಿಸಿಕೊಳ್ಳಲು ಸಲಹೆ ನೀಡಿದ್ದರು. ಆಗಿನಿಂದ ಮನೆಯಲ್ಲೆಲ್ಲ ಇಂಗ್ಲೀಷ್ ಸಾಮ್ರಾಜ್ಯ ಮೊದಲಾಯಿತು. ಕಮ್-ಗೋ ,ಯೆಸ್-ನೋ ಗಳಿಂದ ಶುರುವಾದ ಇಂಗ್ಲೀಷ್, ಕನ್ನಡವನ್ನೇ ಮಕ್ಕಳ ಪಾಲಿಗೆ ಅಪರಿಚಿತವಾಗಿಸುವಷ್ಟು ಆಕ್ರಮಿಸಿತು. ಅಪ್ಪ-ಅಮ್ಮಾ ಕರೆಗಳು ಮಾಮ್ ಡ್ಯಾಡ್ ಆದವು. ಕನ್ನಡದವರೆಲ್ಲಾ ಸೇರಿದಾಗ ಕೂಡ ದೊಡ್ಡವರಷ್ಟೆ ಕನ್ನಡದಲ್ಲಿ ಮಾತಾಡುತ್ತಿದ್ದದ್ದು. ಮಕ್ಕಳೆಲ್ಲಾ ಇಂಗ್ಲೀಷ್ನಲ್ಲೇ. ಇಂಗ್ಲೀಷ್ ಕಲಿಕೆ ಅಲ್ಲಿನ ಜೀವನವನ್ನು ಸುಲಭವಾಗಿಸಿದ್ದು ನಿಜ, ಮಕ್ಕಳು ಇಂಗ್ಲೀಷ್ ಪುಸ್ತಕಗಳನ್ನು ಓದುವುದು, ತಪ್ಪಿಲ್ಲದೆ ಬರೆಯುವುದು ನನಗೂ ಹೆಮ್ಮೆ ತರಿಸಿತ್ತು. ಆಗವರು ಕನ್ನಡವನ್ನು ನಿಧಾನವಾಗಿ ಮರೆತದ್ದು ಗಮನಕ್ಕೆ ಬರಲಿಲ್ಲ.
ನಾಲ್ಕು ವರ್ಷದ ಕೆಳಗೆ ಮತ್ತೆ ನಾವು ಬೆಂಗಳೂರಿಗೆ ಸ್ಥಳಾಂತರಿಸಲು ತೀರ್ಮಾನಿಸಿದಾಗ ಕನ್ನಡವನ್ನು ಕಲಿಸುವ ಸವಾಲು ನನಗೆ ಅರಿವಾಗಿದ್ದು. ಇನ್ನೂ ಬೆಂಗಳೂರಿಗೆ ಬರಲು ಆರು ತಿಂಗಳಿರುವಾಗಲೇ ಕನ್ನಡ ಪಾಠ ಆರಂಭವಾಯ್ತ. ಅ-ಆಗಳನ್ನು ಬರೆಯಲು ಕಲಿಸುವ ನನ್ನ ಪ್ರಯತ್ನವೇನೂ ಬಹು ಬೇಗ ಸಫಲವಾಗಲಿಲ್ಲ. ಮಗಳಿಗೆ ಹೇಗೂ ಓದಲು ಬರೆಯಲು ಬರುತ್ತಿತ್ತು. ಅಭ್ಯಾಸ ಮಾಡಿಸುವುದೊಂದೆ. ಮಗನಿಗೆ ಅ-ಆಗಳಿಂದ ಕಲಿಸಬೇಕಿತ್ತು. ಅ-ಳವರೆಗೆ ಹೇಗೋ ರಂಗೋಲಿ ಬರೆದಂತೆ ನಕಲು ಮಾಡಲು ಕಲಿತನಷ್ಟೆ. ಕಾಗುಣಿತಗಳ ಹೇಗೆ ಹೇಳಿಕೊಡುವುದು? ನಾನು ಕೊಂಬು, ದೀರ್ಘ, ಗುಡಿಸಿ ಅಂತ ಹೇಳ್ತಿದ್ದರೆ ಅಕ್ಕ-ತಮ್ಮ ಇಬ್ಬರೂ ಪಕಪಕನೆ ನಗುತ್ತಿದ್ದರು. ಆಗಿಂದ ಇಂಗ್ಲೀಷ್ನಲ್ಲಿ ಹೇಳುವ ಪ್ರಯತ್ನ ಮಾಡಿದೆ. ಅ-ಔ vowels ಅಂ ಅಃ special charecters. ಅಲ್ಪಪ್ರಾಣಾಕ್ಷರಗಳೆಲ್ಲಾ short syllable, ಮಹಾ ಪ್ರಾಣಗಳು stress syllable, vowels ನಲ್ಲಿ ಮೊದಲದ್ದೆಲ್ಲಾ short vowel sound , ಎರಡನೆಯದ್ದು long vowel sound ಹೀಗೆ, ಎಲ್ಲಾ consonantsge vowel sound ಸೇರ್ಸಿದ್ರೆ ಕಾಗುಣಿತವಾಗುತ್ತೆ. ಮತ್ತೂ ಎಲ್ಲ consonantsಗೆ ಅದರದ್ದೇ ಚಿಕ್ಕ ಅಕ್ಷರ ಬರೆದರೆ ಒತ್ತಕ್ಷರವಾಗುತ್ತೆ (‘ರ’ ಗೆ crescent shaped ‘ಲ’ ಗೆ horizontal inverted three, ‘ನ’ ಗೆ ಮತ್ತು‘ಯ’ಗೆ ಏನೋ ಹೇಳಿದ್ದೆ ನೆನಪಿಲ್ಲ!! ) …ಒತ್ತಕ್ಷರಗಳು mix ಆಗಬಹುದು, ಆಗ ಒತ್ತಕ್ಷರವನ್ನು full pronounce ಮಾಡಬೇಕು, full letter ಅನ್ನು half pronounce ಮಾಡಬೇಕು. ಹೀಗೆ ಒಂದೊಂದೆ ಅವರ ತಲೆಗೆ ತುಂಬಿದ್ದಾಯ್ತು. ಇಷ್ಟಾಗಿ ಅರ್ಕಾವತ್ತು ಮಾಡಿದ ತಕರಾರು ಮರೆಯಲಾದೀತೆ. ಕೊನೆಗೆ “ರ cannot take any other’s stress except it’s own so we need to write ಅರ್ಕಾವತ್ತು beside the full spelled consonant ” ಅಂತ ಅವನೇ ತೀರ್ಮಾನಕ್ಕೆ ಬಂದ. ಆಗ ಬಿದ್ದು ಬಿದ್ದು ನಗುವ ಸರದಿ ನನ್ನದಾಗಿತ್ತು!!
ಅಂತೂ ನಾ ಕಲಿತ ಬುದ್ದಿಯೆಲ್ಲಾ ಖರ್ಚು ಮಾಡಿ ನನ್ನ ಮಗನಿಗೆ ಕನ್ನಡ ಕಲಿಸಿದೆ. ನನ್ನ ಮಗಳಿಗೆ ಓದಲು ಬರೆಯಲು ಬಂದರೂ ವ್ಯಾಕರಣ ತಲೆಗೆ ಹೋಗಲಿಲ್ಲ. ಕೊನೆಗೆ ಶಾಲೆಯಲ್ಲಿ ಕನ್ನಡವನ್ನು ಮೂರನೆಭಾಷೆಯಾಗಿಯೇ ಅವಳು ಕಲಿಯಬೇಕಾಯ್ತು. ಈ ಮೂರ್ನಾಲ್ಕುವರ್ಷಗಳ ಸತತ ಪ್ರಯತ್ನ ನನ್ನ ಮಗ ತಕ್ಕಮಟ್ಟಿಗೆ ತಪ್ಪಿಲ್ಲದೆ ಕನ್ನಡ ಓದಿ ಬರೆಯಲು ಕಲಿತಿದ್ದಾನೆ. ಇಂದಿಗೂ ಮಾತಾಡುವಾಗ, ಬರೆಯುವಾಗ ನಿರಂತರ ತಪ್ಪು ತಿದ್ದುವ ಕೆಲಸ ನಡೆಯುತ್ತಲೇಯಿದೆ. ಕನ್ನಡ ಬರುವುದಿಲ್ಲವೆಂದು ಹೇಳಿಕೊಳ್ಳುವುದು ನನ್ನ ಮಟ್ಟಿಗೆ ಪರಮ ಅವಮಾನ. ಕನ್ನಡ ಕಲಿಸುವುದೇನು ಬಹಳ ಕಷ್ಟದ ಕೆಲಸವಲ್ಲ. ನನಗೆ ಸುಮಾರು ಸಮಯ ತೆಗೆದುಕೊಂಡರೂ ಅಪಾರ ತೃಪ್ತಿ ಕೊಟ್ಟಿದೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು