Friday, May 6, 2022

ಈ ಅಮ್ಮಂದಿರ ದಿನ

ಕೌಸಲ್ಯೆ

ಜಗದಭಿರಾಮನ ತಾಯಿಯಾದರೇನು? ವಿಧಿಯಿಚ್ಛೆಗೆೇ ಜಯವಾಯಿತು. ಸುಖ ಸೋಪಾನಗಳು ನನ್ನ ಪಾಲಿಗೆ ಮರೀಚಿಕೆಯಾಯಿತು. ಪಟ್ಟದ ರಾಣಿಯಾದರೂ ರಾಜನೊಲುಮೆಯೆಲ್ಲಾ ಇಷ್ಟದ ರಾಣಿಗೇ. ಬವಣೆಯನ್ನು ಸಲೀಸಾಗಿ ಮರೆಸಿದ್ದು ರಾಮನ ಜನನ. ಅವನಭ್ಯುದಯ. ಬಾನಿನಂಥ ಕಣ್ಣು, ಕಡಲ ಮೊರೆತದಂಥ ತೊದಲು ಮಾತುಹಾಲುಗಲ್ಲದ ಕೂಸು ಅರಮನೆಯಲ್ಲೆಲ್ಲಾ ನಡೆದಾಡುತ್ತಿದ್ದ. ಅವನ ಕಾಲ್ಗೆಜ್ಜೆಯದನಿಯೇ ನನ್ನ ಹೃದಯ ಮಿಡಿತ. ಅವನ ಮುದ್ದು ಮಾತಿಗೆ ಮರುಳಾಗಿ, ನೆತ್ತಿಯ ಮೂಸಿ ಮುದ್ದು ಮಾಡುತ್ತಾ ಕೆನ್ನೆಗೆ ಕೆನ್ನೆಯನೊತ್ತಿ ಸುಖಿಸುವುದೊಂದು ಸಂಭ್ರಮ. ಅಲ್ಲಿ ಕ್ಲೇಶಕ್ಕೆ ಅವಕಾಶವೆಲ್ಲಿ? ಅಂದೆಂದೋ ಚಂದ್ರನಿಗಾಗಿ ಹಟ ಮಾಡಿದ್ದು ಬಿಟ್ಟರೆ ಅವನೆಂದೂ ನನ್ನ ಕಾಡಿದುದಿಲ್ಲ. ನನ್ನಲ್ಲಿ ತೋರಿದ ಆದರ ಅಭಿಮಾನಗಳನ್ನೇ ಇಬ್ಬರು ತಾಯಂದಿರಲ್ಲೂ ತೋರುತ್ತಿದ್ದ. ನನ್ನ ರಾಮನೊಂದಿಗೆ ಮೂರು ಜನ ತಮ್ಮಂದಿರೂ ಅನುರೂಪವಾಗಿ ಬೆಳದದ್ದು ಅಚ್ಚರಿ.

ನನ್ನ ಮಗನ ಗುಣಗಾನ ನಾನೇನು ಮಾಡಬೇಕಾಗೇ ಇಲ್ಲ. ಅದು ಜಗತ್ಪ್ರಸಿದ್ಧ. ಅವನಂಥ ಸತ್ಯಸಂಧ, ಇಂಗಿತಜ್ಞ, ಧರ್ಮಿಷ್ಠ, ಪರಾಕ್ರಮಿ ಮೂರೂಲೋಕಗಳಲ್ಲಿಯೂ ಇಲ್ಲ. ರಾವಣನ ಸಾವೇ ಅವನನ್ನು ಕಾಡು ಪಾಲು ಮಾಡಿತೋ? ಕೈಕೇಯಿಯ ಕುಟಿಲ ಕಾಡಿಗಟ್ಟಿತೋ? ಅಂತೂ ನನಗೂ  ನನ್ನ ಕಂದನಿಗೂ ಹದಿನಾಲ್ಕು ವರ್ಷಗಳ ಶಿಕ್ಷೆ.  

ನಂತರ ರಾಜನ ದುರ್ಮರಣದ ನೋವು, ಗಾಯದ ಮೇಲೆ ಬರೆ ಎಳೆದಂತೆ.

ನಾಳೆ ಸೂರ್ಯೋದಯಕ್ಕೆ ಪಟ್ಟಾಭಿಷಕ್ತನಾಗಿ  ಅಯೋಧ್ಯೆಯನ್ನಾಳ ಬೇಕಾದವನು ನಾರುಮಡಿಯುಟ್ಟು ಕಾಡಿಗೆ ಹೋಗುವುದೆಂದರೇನು? ಅಯ್ಯೋ! ಅಯೋಧ್ಯೆಯ ಪಾಡೇನು? ದಶರಥನ ಜೇಷ್ಠ ಪತ್ನಿಯಾದರೂ, ಯಾವುದೇ ಆನಂದವನ್ನು ಅನುಭವಿಸಲಿಲ್ಲ. ಕೈಕೆಯ ವಶನಾದ ರಾಜನು ನನ್ನನ್ನು ಒಬ್ಬ ದಾಸಿಯಂತೆ ನಡೆಸಿಕೊಂಡು ಬಂದ. ರಾಮನಿಗೆ ಯುಕ್ತ ವಯಸ್ಸಿನಲ್ಲಿ ಪಟ್ಟಾಭಿಷೇಕವಾಗುತ್ತಿದೆಯೆಂಬ ಸುದ್ದಿ ಹೊಸ ಆಶಯಗಳಿಗೆ ಆಸ್ಪದವಾಯ್ತು. ಆದರೆ ರಾಜಮಾತೆಯಾಗುವೆನೆಂಬ ನನ್ನ ಆಸೆ, ಅದೇ ಕೈಕೆ ದೆಸೆಯಿಂದ ನುಚ್ಚುನೂರಾಯ್ತು

 ‘ಕೌಸಲ್ಯಾ ಸುಪ್ರಜಾ ರಾಮಎಂದು ನನ್ನ ರಾಮನನ್ನು ವಿಶ್ವಾಮಿತ್ರರು ಕರೆದರೆಂದಾಗ ನನಗಾದ ಅಭಿಮಾನಕ್ಕೆ ಪಾರವಿಲ್ಲ. ರಾಮ ನನ್ನವನೆಂಬ ಹೆಮ್ಮೆ ನನಗೂ ಮೀರಿದ್ದು. ಆದರೆ ಅವನಿಗೆ ವನವಾಸ ಪ್ರಾಪ್ತಿಯ ವಿಷಯ ಕೇಳಿ ನನಗೆ ಮಗನೇ ಹುಟ್ಟಬಾರದಗಿತ್ತೆನಿಸಿತು, ನಾ ಮಾಡಿದ ವ್ರತ ಪೂಜೆಗಳೆಲ್ಲಾ ಬಂಜರು ಭೂಮಿಯಲ್ಲಿ ಬಿತ್ತಿದ ಬೀಜದಂತೆ  ವ್ಯರ್ಥವಾಯಿತು, ಅವನಿಲ್ಲದಿದ್ದರೆ ಬಂಜೆಯೆಂಬ ನೋವು ಮಾತ್ರ! ಅವನಗಲಿಕೆಯಿಂದಾದ ವ್ಯಥೆ ಅಸಮಾನ್ಯ. ರಾಜನೇನೋ ಕೈಕೆಗೆ ವರನೀಡಿದ್ದ ಸರಿ. ಅದೆಂಥಾ ವ್ಯಮೋಹ ಅವಳ ಮೇಲೆ! ಕ್ಷಣಕ್ಕೆ ಅವಳೆಂಥ ಕ್ರೂರಿಯಾದಳುರಾಜನಿಗೇನೋ ಪುತ್ರಶೋಕದಿಂದ ಸಾಯುವ ಶಾಪವಂತೆನನಗ್ಯಾರ ಶಾಪ? ಮಗನಿಂದಲೂ ದೂರ, ಜೊತೆಗೆ ವೈಧವ್ಯಧನುರ್ಭಂಗ ಮಾಡಿ ಸೀತೆಯನ್ನು ವರಿಸಿದಾಗ ಸೀತೆಯ ಪುಣ್ಯವನ್ನು ಕೊಂಡಾಡಿದ್ದೆ. ಎಳೆಪ್ರಾಯದ ರಾಮ ಸೀತೆಯರ ಜೋಡಿ ನೋಡಿ ಅಭಿಮಾನ ಉಕ್ಕಿತ್ತು. ಅಯೋಧ್ಯ ಪ್ರಜೆಗಳ ಮನದಲ್ಲಿ ವಿರಾಜಮಾನನಾಗಿದ್ದ ರಾಮನಿಗೆ ಅಧಿಕೃತ ಪಟ್ಟಾಭಿಷೇಕ ಒಂದೇ ಉಳಿದಿತ್ತು

ಆದರೆ ಅಂದು ಸೀತಾ ರಾಮರು ಅವರ ದ್ರವ್ಯವನ್ನೂ, ವಸ್ತ್ರಾಭರಣಗಳನ್ನೂ, ಗೋವುಗಳನ್ನೆಲ್ಲಾ ದಾನಮಾಡಿ ಅರಣ್ಯಕ್ಕೆ ಹೊರಟಾಗ ನನಗಾದ ಸಂಕಟವೆಷ್ಟು? ನಾನು ನತದೃಷ್ಟೆ

ಇರಲಿ, ರಾಜನ ಅತಿ ಪ್ರೀತಿ ಪಾತ್ರಳಾಗಿದ್ದ ಕೈಕೆಗೂ ಮಗನ ಮೇಲಿನ ಮಮಕಾರದಿಂದ ಭರತನೇ ರಾಜನಾಗಬೇಕೆಂದು ಹಟ ಮಾಡುವುದು ಸಹಜವಾದರೂ  ರಾಮನನ್ನು ಕಾಡಿಗಟ್ಟುವ ದುರ್ಭೋದನೆಗೆ ಅನುಮೋದಿಸಿದ್ದು ಘೋರಅವಳು ಕೇಳಿದೆರಡು ವರಗಳಲ್ಲಿ ರಾಮನ ವನವಾಸವೊಂದೇ ಫಲಿಸಿದ್ದು. ಕಾಡಲ್ಲಿ ನನ್ನ ಮಗನನ್ನು ಕಾಪಿಡುವಂತೆ ಎಲ್ಲ ದೇವತೆಗಳಿಗೆ ಮೊರೆ ಇಟ್ಟು ಕಳಿಸಿದೆ. ಭರತ ಮತ್ತೆ ರಾಮನನ್ನು ಕರೆತರುವನೆಂಬ ಭರವಸೆಯೂ ಬರಿದಾಯ್ತು. ಹದಿನಾಲ್ಕು ವರುಷ ಹದಿನಾಲ್ಕು ಯುಗದಂತೆ ಕಳೆದೆ. ತಾಳ್ಮೆಯೇ ನನಗೆ ಮತ್ತೆ ರಾಮನ ಮಿಲನದ ಸೇತುವಾಯ್ತು.  

ಅಗಲಿಕೆಯ ನೋವು ಯಾವ ತಾಯಿಗೂ ಬಾರದಿರಲಿ. ನನ್ನ ರಾಮನ ಅನುಗ್ರಹದಿಂದ  ತಾಯಿ ಮಕ್ಕಳು ಸದಾ ಜೊತೆಯಾಗಿರಲಿ. ತಾಳ್ಮೆ ತಾಯಂದಿರಿಗೆ ವರವಾಗಲಿ. ತಾಯೊಲ್ಮೆಯ ಪ್ರಾರ್ಥನೆಗೆ  ಸದಾ ಜಯವಾಗಲಿ