ಭಕ್ತಿ, ಮುಕ್ತಿ, ನಿಗೂಢತೆ, ಇತಿಹಾಸ, ಸೌಂದರ್ಯ, ಅನನ್ಯತೆಗೆ, ಸಾಹಸ, ಪೌರಾಣಿಕತೆ.. ಹೀಗೆ ಎಲ್ಲಾ ಪ್ರಕಾರದ ಕುತೂಹಲವನ್ನು ತಣಿಸುವ ಈಶ್ವರನ ದೇವಾಲಯ ಒಂದಿದೆ. ಈ ದೇವಾಲಯ ಈಶ್ವರನಿಗಷ್ಟೇ ಅಲ್ಲ, ಪಾರ್ವತಿಗೂ ಕೂಡ. ಶಿವ ಪಾರ್ವತಿಯರಲ್ಲಿ ಏಕತೆಯನ್ನು ಬಿಂಬಿಸುವ ಉಮಾಮಹೇಶ್ವರ ದೇವಸ್ಥಾನ. ಕಾಳಿದಾಸನ ವಾಗರ್ಥವಿವ… ಶ್ಲೋಕದ ಸ್ಸಂಪೂರ್ಣ ಅನ್ವಯವಾಗುವಂಥ ಲಿಂಗ. ಸುಮಾರು ಒಂದೂವರೆ ಅಡಿ ಲಿಂಗದ ಮುಖದಲ್ಲಿ ಉಮಾ ಮಹೇಶ್ವರ ಇಬ್ಬರದೂ ಸುಂದರ ಕೆತ್ತನೆ ಇದೆ. ದೇವಸ್ಥಾನದ ಪ್ರವೇಶವೇ ವಿಶೇಷ ಅನುಭವ. ದೇವಸ್ಥಾನದ ಪಾರ್ಕಿಂಗ್ ದಾಟಿದರೆ ಮೊದಲು ಸಿಗುವುದೇ ವಿಶಾಲವಾದ ಪುಷ್ಕಣಿ, ಈ ಪುಷ್ಕರಣಿಗೆ ನಂದಿಯ ಬಾಯಿಂದ ಸದಾ ನೀರು ಬೀಳುತ್ತಿರುತ್ತದೆ. ಪುಷ್ಕರಣಿಯನ್ನು ನೋಡಿ ಹೊರಬಿದ್ದರೆ, ವಿಶಾಲವಾದ ಸುಮಾರು ಐವತ್ತಕ್ಕೂ ಮೀರಿ ಮೆಟ್ಟಿಲುಗಳು, ತಲೆಎತ್ತಿ ನೋಡಿದರೆ ಆ ತುದಿಯಲ್ಲಿ ಬೃಹತ್ ಗೋಪುರ. ಗೋಪುರದ ಹಿಂಭಾಗದಲ್ಲಿ ಕಾಣುವ ಬೆಟ್ಟಗಳು. ಮೆಟ್ಟಿಲು ಹತ್ತಿ ಗೋಪುರದ ಹೆಬ್ಬಾಗಿಲಿಂದ ಒಳ ಹೋಗಿ ನಂದಿ ಧ್ವಜವನ್ನು ಬಳಸಿ, ಸಾಲಿನಲ್ಲಿ ಹೋದರೆ ಉಮಾಮಹೇಶ್ವರನ ಗರ್ಭಗುಡಿ. ಮುಖಮಂಟಪವು ಪ್ರಶಾಂತ ಧ್ಯಾನ ಮಂದಿರ. ದೇವಾಲಯವನ್ನು ಪ್ರದಕ್ಷಿಣೆ ಮಾಡಿದರೆ ಕೈಲಾಸದ ಮರು ಸೃಷ್ಟಿಯೇನೂ ಎಂದೆನಿಸುವ ಗಿರಿ ಶ್ರೇಣಿಯ ದರ್ಶನವಾಗುತ್ತದೆ. ಮುಖಮಂಟಪದ ಮುಂಭಾಗದಲ್ಲಿ, ಬೃಹತ್ ನಂದಿ ಇದೆ . ಈ ನಂದಿ ಪ್ರತಿ ಇಪ್ಪತ್ತು ವರ್ಷಕ್ಕೊಮ್ಮೆ ಒಂದಿಂಚು ಬೆಳೆಯುವುದಂತೆ. ಪುರಾತತ್ವ ಇಲಾಖೆಯವರು ಅಳತೆಯನ್ನು ದಾಖಲಿಸುತ್ತಾರೆ. ಕಾಲಜ್ಞಾನಿ ವೀರಬ್ರಹ್ಮ ಅವರು ಹೇಳಿರುವ ಕಲಿಯುಗಾಂತ್ಯವನ್ನು ಸೂಚಿಸುವ ನಂದಿ ಇದೆ. ಅದಲ್ಲದೆ, ಅಲ್ಲೊಂದು ಬೆಟ್ಟದಮೇಲೆ ಆಕಾಶದೀಪ. ಪ್ರತಿಸಂಜೆ ದೀಪವನ್ನು ಹಚ್ಚುತ್ತಾರೆ. ಮುಖ್ಯದ್ವಾರದ ಬಲದಲ್ಲಿ ಒಂದು ವೆಂಕಟೇಶ್ವರನ ಗುಹೆ ಇದೆ. ಕಾಲಜ್ಞಾನಿ ವೀರಬ್ರಹ್ಮಂ ಅವರ ಗುಹೆಯೂ ಇದೆ. ಈ ಗುಹೆಗಳಿಗೆ ಹೋಗುವುದು ಸಾಹಸಕ್ಕೆ ಸವಾಲೆ. ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು.
ಉಮಾ ಮಹೇಶ್ವರನ ಪ್ರತಿಷ್ಠಾಪನೆ ಮಾಡಿದವರು ಅಗಸ್ತ್ಯಮುನಿಗಳು. ಅವರಿಗೆ ವೆಂಕಟೇಶ್ವರನ ಪ್ರತಿಷ್ಠಾಪನೆ ಮಾಡಬೇಕೆಂಬ ಸಂಕಲ್ಪ ವಿತ್ತು. ವೆಂಕಟೇಶ್ವರನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ತರಿಸಿದರು. ಆದರೆ ವಿಗ್ರಹದ ಕಾಲಿನ ಹೆಬ್ಬೆರಳಿನ ತುದಿ ಭಿನ್ನವಾಗಿತ್ತು. ಭಿನ್ನವಾದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗದೆ, ಈಶ್ವರನನ್ನು ತಪಸ್ಸು ಮಾಡಿದರು. ಸ್ವಯಂ ಈಶ್ವರನೇ ಕೈಲಾಸಕ್ಕೆ ಸಮಾವಾದ ಈ ಜಾಗದಲ್ಲಿ ತಾನೇ ಸತಿ ಸಮೇತ ನೆಲೆಸುವೆನೆಂದು ವರವಿತ್ತನು. ಉಮಾ ಮಹೇಶ್ವರನಾಗಿ ನೆಲೆಸಿದನು. ಭಿನ್ನವಾದ ವೆಂಕಟರಮಣನನ್ ವಿಗ್ರಹವನ್ನು ಗುಹೆಯಲ್ಲಿಟ್ಟಿದ್ದಾರೆ. ಹಾಗಾಗಿ ಇದು ಅಪರೂಪದ ಶಿವ ಕೇಶವ ಕೇತ್ರವೂ ಹೌದು.
ಇನ್ನೊಂದು ಕಥೆ. ಚಿತ್ತಪ್ಪನೆಂಬ ಮಹಾ ಶಿವ ಭಕ್ತನಿದ್ದ. ಈ ಉಮಾಮಹೇಶ್ವರನನ್ನು ಸತತ ಪೂಜಿಸುತ್ತಿದ್ದ. ಇವನ ಭಕ್ತಿಗೆ ಮೆಚ್ಚಿ ಈಶ್ವರನು ಹುಲಿಯರೂಪದಲ್ಲಿ ಕಂಡನಂತೆ. ಅವನು ಖುಷಿಯಿಂದ.. ನೇ ಕಂಟಿ… ನೇ ಕಂಟಿ (ನಾ ಕಂಡೆ..ಈಶ್ವರನನ್ನು ನಾ ಕಂಡೆ) ಎಂದು ಕುಣಿದಾಡಿದನಂತೆ..ಆಗಿಂದ ಈ ಜಾಗ “ಯಾಗಂಟಿ” ಎಂದು ಪ್ರಸಿದ್ಧವಾಗಿದೆಯಂತೆ.
ಹೌದು .. ನಾ ಹೇಳ ಹೊರಟಿರುವ ಕ್ಷೇತ್ರ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ, ಮಾವಿನ ಹಣ್ಣಿಗೆ ಪ್ರಸಿದ್ಧಿಯಾದ ಬೇನಿಗಾನಪಳ್ಳಿ ಬಳಿಯಿರುವ “ಯಾಗಂಟಿ ಕ್ಷೇತ್ರ”. ಸೂರ್ಯಾಸ್ತದ ವೇಳೆ ದೇವಸ್ಥಾನದ ಅಪರೂಪದ ಸೌಂದರ್ಯಾ ನೋಡುವ ಸುಖ. ದೇವಾಲಯವನ್ನು ಪಲ್ಲವರು, ಚೋಳರು ಮತ್ತು ವಿಜಯನಗರದ ಅರಸುಗಳು ಅವರವರ ಕಾಲಕ್ಕೆ ಸೂಕ್ತವಾಗಿ ವಿಸ್ತರಿಸಿದ್ದಾರೆ. ಈಗಿರುವ ವಿಮಾನ ಗೋಪುರ ಮತ್ತು ಮಂಟಪಗಳನ್ನು ವಿಜಯನಗರ ಸಾಮ್ರಾಜ್ಯದ ಹರಿಹರ ರಾಯ ಮತ್ತು ಬುಕ್ಕ ರಾಯ ಕಟ್ಟಿಸಿದ್ದಾರೆ. ವಿಜಯನಗರದ ದೇವಳ ಶೈಲಿಯನ್ನು ನೋಡುತ್ತಲೇ ಗುರುತಿಸಬಹುದು. ಮಹಾಶಿವರಾತ್ರಿಗೆ ವಿಶೇಷ ಉತ್ಸವ ನಡೆಯುತ್ತದೆ. ಅಸಂಖ್ಯಾತ ಭಕ್ತರು ಆಗಮಿಸಿ ಧನ್ಯರಾಗುತ್ತಾರೆ. ಯಾಗಂತಿಯ ಉಮಾಮಹೇಶ್ವರ ದೇವಸ್ಥಾನವನ್ನು ಹಗಲಿನಲ್ಲೊಮ್ಮೆ, ಸಂಜೆಯಲ್ಲೊಮ್ಮೆ ದರ್ಶನ ಮಾಡಿದರೆ ಸಂಪೂರ್ಣ ಸೌಂದರ್ಯವನ್ನು ಸವಿಯಬಹುದು .
No comments:
Post a Comment