Thursday, September 26, 2019

ನನ್ನ ಮಗ ಮುಂದೆ ಏನಾಗ ಬೇಕು?

ನನ್ನ ಮಗ ಮುಂದೆ ಏನಾಗ ಬೇಕು? 
ಏಕೋ ಅಂದು ನನ್ನ ಮಗ ದೊಡ್ಡವನಾದ ಮೇಲೆ ಏನಾಗ ಬೇಕೆಂಬ ಜಿಜ್ಞಾಸೆ ನನ್ನನ್ನು ಕಾಡಿತು. ಅವನು ಸಾಫ್ಟವೇರ್ ಇಂಜಿನೀರ್ ಆದರೆ ಚೆನ್ನ,...ಆದರೆ ಖಾಸಗಿ ಕಂಪನಿ ಕೆಲಸ...ಅದೊಂಥರ ಜೀತ.....ಬಿಡುವಿಲ್ಲದ ಕೆಲಸ....ಅಯ್ಯೋ ಐಟಿ ಸಹವಾಸವೇ ಬೇಡ; ವೈದ್ಯ ನಾದರೆ ಜನರ ಜೀವವಾದರೂ ಉಳಿಸುತ್ತಾನೆ, ಸಂಪಾದನೆಗೂ ಧಕ್ಕೆ ಇಲ್ಲ...ಆದರೆ ...ಬೇಡ .. ಕಾಲದಲ್ಲಿ ಖಾಯಿಲೆಗಳಿಗೇನು ಕಮ್ಮಿ ಇಲ್ಲ.....ದಿನ ಬೆಳಗಾದರೆ ರೋಗಿಷ್ಠರ ಕಥೆಗಳ ಕೇಳಿ-ಕೇಳಿ ಜೀವನವೇ ಜಿಗುಪ್ಸೆ ಬರುತ್ತದೆ. ಸೈನಿಕನಾದರೇನೆ ಒಳಿತು....ದೇಶ ಕಾಯುವ ಕೆಲಸವೇ ಸರಿ!! ಅವನಿಗೂ ಅದೇ ಇಷ್ಠ.....ಆದರೆ ಜೀವ  ಭಯ! ಅದನ್ನು ಊಹಿಸಲೂ ಅಸಾಧ್ಯ ...ಸೈನಿಕ ನಾಗುವುದೇನು ಬೇಡಪ್ಪ...ನನ್ನ ಮಗ ನನ್ನ ಕಣ್ಣ ಮುಂದೇ ಇರಲಿ. ಬೇಕಾದರೆ  ಯಾವುದಾದರೂ ಸರ್ಕಾರಿ ನೌಕರಿ ಹಿಡಿಯಲಿ ಅದೂ ದೇಶ ಸೇವೆಯೇ! ಸರ್ಕಾರಿ ಕೆಲಸ ಮಾಡೋದೇನೂ  ಸುಲಭ ಅಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಸರಿ ಇಲ್ಲಾಂದ್ರೆ ಅದೆಂಥ ದೇಶ ಸೇವೆ? ಅದಿಕ್ಕೆ ಬೇಡ ಬಿಡು ಅವನೆಲ್ಲಾದರೂ ನಾಲ್ಕು ಮಕ್ಕಳಿಗೆ ಪಾಠ ಹೇಳೋ ಮೇಷ್ಟ್ರಾಗಲಿ. ವರ್ಷಕ್ಕೆ ಎರಡು ತಿಂಗಳು ರಜಾನೂ ಸಿಗುತ್ತೆ.....ಹಾಗೆ ಸಂಜೆ ಹೊತ್ತಿಗೆ ಮನೇನೂ ಸೇರ್ತಾನೆ. ಆದರೆ ಸಂಪಾದನೆ ಕಮ್ಮೀ ಅಲ್ವಾ? ನಾಳೆ ಬೆಳಿಗ್ಗೆ ಹೆಂಡ್ತಿ ಮಕ್ಕಳನ್ನ ಹೇಗೆ  ನಿಭಾಯಿಸ್ತಾನೆ? ಮೇಷ್ಟ್ರ ಆಗೋಕಿಂತ ಪೌರೋಹಿತ್ಯನೇ ವಾಸಿ... ಸಂಪಾದನೆ ತೆಗದಾಕೋ ಹಾಗೇನಿಲ್ಲ....ಟಾಕ್ಸ್ ಕೂಡ ಕಟ್ಟೋ ಅಷ್ಟಿಲ್ಲ. ಆದರೆ ಮದುವೆಗೆ  ಹುಡುಗಿ ಸಿಗೋದು ಕಷ್ಟ.... ಕಾಲದಲ್ಲೇ ಹೀಗೆ...ಇನ್ನು ಅವನ ಕಾಲಕ್ಕೆ! ಅಯ್ಯೋ ಬೇಡ ಬಿಡು ಮನೆ ಮಟ್ಟಕ್ಕೆ ಪೂಜೆ ಮಾಡೋದು ಕಲಿತರೆ ಸಾಕು
ಹೀಗೆ ನನ್ನ  ಮನಸ್ಸು ಮಾಧ್ಯಮ, ಸಂಗೀತ, ರಾಜಕೀಯ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಾಮರ್ಷಿಸಿದರೂ ಯಾವ ಉದ್ಯೋಗವೂ ಸೂಕ್ತವೆನಿಸಲಿಲ್ಲಅವನನ್ನೇ  ಕೇಳಿದೆ. ಆಗ ಅವನ ಗಮನವೆಲ್ಲಾ ಕೈಲಿದ್ದ ಐಪ್ಯಾಡ್ ಮೇಲಿತ್ತು, ಅವನು ಉತ್ತರಿಸಲಿಲ್ಲ. ಎರಡನೇ ಕ್ಲಾಸಿನಲ್ಲಿ ಓದುತ್ತಿರುವ ಅವನಿಗೇನು ಗೊತ್ತು ಎಂದು ನನಗೆ ನಾನೇ ಹೇಳಿಕೊಂಡು ರಾತ್ರಿ ಊಟದ ತಯಾರಿಗೆ ಹೊರಟೆ. ಮಕ್ಕಳಿಂದ ಐಪ್ಯಾಡ್ ಕಸಿದು ಓದಲು ಹೇಳಿದೆ. ಸಾಮಾನ್ಯವಾಗಿ ಆಗ ಶಾಲೆಯಲ್ಲಿ ಏನೇನು  ನಡೆಯಿತೆಂದು ವರದಿ ಮಾಡುವ ಸಮಯ.
 ನನ್ನ ಮಗಳ ಸರದಿ ಮೊದಲು. “ ಅಮ್ಮಾ ಅಭಿ ಮೂರು ದಿನದಿಂದ ಯಾರೊಂದಿಗೂ ಆಡುತ್ತಿಲ್ಲ. ಸುಮ್ಮನೆ ಮೈದಾನದ ಮರದ ಕೆಳಗೆ ಕೂತಿರುತ್ತಾನೆಎಂದು (ಇಂಗ್ಲೀಷ್ ನಲ್ಲಿ) ಚಾಡಿ ಹೇಳಿದಳು
ಇನ್ನು ವಿಚಾರಿಸುವುದು ನನ್ನ ಸರದಿ. “ಯಾಕೋ ಏನಾಯ್ತು?” ಗೆಳೆಯರೊಂದಿಗೆ ಜಗಳವಿರಬಹುದೆಂಬ ಊಹೆಯಿಂದ ಕೇಳಿದೆ
 ಅದಕ್ಕವನುಏನಿಲ್ಲಮ್ಮ I was thinking about something” ಎಂದ
ಮತ್ತೆ ನಾನು ಉದಾಸೀನತೆಯಿಂದ “ಹೋ ಭಾರಿ! ಏನದು?” 
ಅವನು “ I want to become something that honours my country”, ಅದನ್ನೇ ಮೂರು ದಿನದಿಂದ ಯೋಚನೆ ಮಾಡ್ತಿರೋದು.  
ಕ್ಷಣ ನನಗೆ ರೋಮಾಂಚನವಾಯ್ತು. ಅಭಿಮಾನದ ಕಣ್ಣೀರು ನನಗರಿವಿಲ್ಲದಂತೆಯೇ ಉಕ್ಕಿತು.ಅವನ ಬಾಚಿ ತಬ್ಬಿ ಮುದ್ದಿಸಿದೆ. ಅಮ್ಮನಿಗೂ ಫೋನಾಯಿಸಿ ಅಭಿಮಾನ ಹಂಚಿಕೊಂಡೆ. ಬೆಳಗಿನ ನನ್ನ ಆಲೋಚನೆಯನ್ನೂ ಚರ್ಚಿಸಿದೆ. ಅಮ್ಮನೂ ಹೆಮ್ಮೆಯಿಂದ ದೇಶಕ್ಕೆ ಹೆಸರು ತರೋನು ಮನೆಗೆ ಹೆಸರು ತರಲ್ವೇಈಗಲಿಂದ ನಿನಗ್ಯಾಕೆ ಚಿಂತೆ? ಎಳಗರಂ ಎತ್ತಾಗದೆ? ಎಂದಳು. ಬೆಳಿಗ್ಗೆಯಿಂದ  ನನ್ನ ಕಾಡಿದ ಜಿಜ್ಞಾಸೆಗೆ ಉತ್ತರ ಸಿಕ್ಕಿತ್ತು. ನನ್ನ ಸಂಕುಚಿತ ಯೋಚನೆಗಳ ಬಗ್ಗೆ ಬಹಳ ಬೇಸರವಾಯಿತು. ಅವನು ಹೇಳಿದ್ದೇ ಸರಿ. ದೇಶಕ್ಕೆ ಗೌರವ ತರುವ ಯಾವ ಕೆಲಸವಾದರೇನು? ಕಗ್ಗದಲ್ಲಿ ಹೇಳಿರುವಂತೆ..
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು -ಮಂಕು ತಿಮ್ಮ।।




No comments:

Post a Comment