ಈ ಅಮ್ಮಂದಿರ ದಿನ....
ಅಮ್ಮಾ ನನ್ನ ಸಾಕ್ಸ್ ಎಲ್ಲಿ? ಅಮ್ಮಾ ನನ್ನ ಬುಕ್ ಎಲ್ಲಿ? ಅಯ್ಯೋ ಅಮ್ಮಾ ಇನ್ನೂ ತಿಂಡಿ ಆಗಿಲ್ವಾ? ಸರಿ ಲ್ಯಾಪ್ ಟಾಪ್ ಪಾಸ್ ವರ್ಡ ಹೇಳು ( ಬದಲಾಗಿರುವುದೇ ಇಲ್ಲ, ಆತುರದಲ್ಲಿ ತಪ್ಪು ಟೈಪ್ಮಾಡಿ..), ಹಂಗೆ ಲಂಚ್ ಬಾಕ್ಸ್ ಬ್ಯಾಗ್ ಗೆ ಹಾಕು. ತಿಂಡಿನೇ ಹಾಕ್ಬೇಡ. ಅನ್ನನೂ ಬೇಡ. ಚಪಾತಿಗೆ ಸಾಂಬಾರಾ? ಬೇಡ ಬೇಡ ಪಲ್ಯ ಹಾಕು. ಆ ಬದನೇ ಕಾಯಿ ಪಲ್ಯ ಮಾಡ ಬೇಡ, ಬೇರೆ ತರಕಾರಿ ಇಲ್ವಾ? ರಾತ್ರಿನೇ ತರಕೇನು..??. ನಂಗೇನು ಬೇಡ ಮಧ್ಯಹ್ನಕ್ಕೆ ನೀನೆ ತಿನ್ನು, ನಾ ಅಲ್ಲೆ ಏನಾದ್ರೂ ತಿನ್ಕೋತೀನಿ. ಸಂಜೆಗೆ ಇದೇ ಇಟ್ಟಿರಬೇಡ, ಬಿಸಿ ಬಿಸಿ ಮಾಡು. ಬಟ್ಟೆ ಇಸ್ತ್ರಿಗೆ ಕೊಡು.....ಇದು ಮಕ್ಕಳು ಪ್ರತಿದಿನ ಬೆಳಗ್ಗೆ ತಾಯಿಗೆ ಹೇಳೋ ಆಜ್ಞೆಗಳು. ಅವರಿಗೆ ತಮ್ಮ ಕೆಲಸ ಮಾಡಿ ಕೊಳ್ಳಲು ಬಿಡುವಿಲ್ಲವೆಂದಲ್ಲ. ರಾತ್ರಿ ಮನೆಗೆ ಬೇಗ ಹಿಂದಿರುಗಿದ್ದರೂ ತಂತಮ್ಮ ಪೋನ್ಗಳಲ್ಲೋ, ಕಂಪ್ಯೂಟರ್ನಲ್ಲೋ ಟಿವಿ ಶೋಗಳನ್ನು ನಡು ರಾತ್ರಿಯವರೆಗೆ ನೋಡಿ, ಬೆಳಗ್ಗೆ ಕಾಲೇಜು ಬಸ್ ( ಕಂಪನಿ ಬಸ್ ) ಬರುವ ಹತ್ತು ನಿಮಿಷ ಮುಂಚೆ ಎದ್ದು ಸಿದ್ಧವಾಗಿ ಹೋಗುವವರ ಪರಿ. ಅಲ್ಲಿ ಅಮ್ಮನಿಗೆ ಮರು ಉತ್ತರಿಸಲೂ ಅವಕಾಶ ಕೊಡದೆ ಒಂದೇಸಮ ಒಂದರ ಹಿಂದೊಂದು ಕೆಲಸ ಹೇಳುತ್ತಿರುವುದು. ಇಷ್ಟಾಗಿ ಬಸ್ ನಿಲುಗಡೆಗೆ ಹೊರಟ ಕೂಡಲೇ ಫೋನ್ “ ಅಮ್ಮಾ ಐಡಿ ಕಾರ್ಡ ತಂಕೊಡು ಬಸ್ ಇನ್ನೇನು ಬರುತ್ತೆ”.
ಆಗ ಆಕೆ ಮಾಡುತ್ತಿದ್ದ ಕೆಲಸ ಬಿಟ್ಟು ಎಲ್ಲೋ ಹಾಸಿಗೆ ತುದಿಯಲ್ಲಿ ಬಿದ್ದಿರುವ ಐಡಿ ಕಾರ್ಡ ಹುಡುಕಿ..ಓಡಿಹೋಗಿ ಕೊಟ್ಟು ಬರುವಲ್ಲಿ..ಒಲೆ ಮೇಲಿನ ಹಾಲು ಉಕ್ಕಿ, ಪಾತ್ರೆ ಸೀದು ಕರಕಲಾಗಿ, ಕುಕ್ಕರು ಕೂಗಿಕೂಗಿ ಅನ್ನವೆಲ್ಲಾ ಅಂಬಲಿಯಾಗಿರುತ್ತೆ, ಅದನ್ನೆಲ್ಲಾ ಸ್ವಚ್ಛಮಾಡಿ ಬಂದು ಹಾಲಿನಲ್ಲಿ ಉಸ್ಸೆಂದು ಕುಳಿತರೆ, ಟೇಬಲ್ ಮೇಲೆ ಬೆಳಗ್ಗೆ ಕುಡಿಯಲೆಂದು ಬಿಸಿಮಾಡಿದ ಕಾಫಿ ಅಣಕಿಸುತ್ತದೆ. ಮಗ/ಮಗಳು ಖಾಲಿ ಹೊಟ್ಟೆಯಲ್ಲಿ ಹೊರಟಿದ್ದೊಂದು ಸಂಕಟ. ಇದು ಒಂದು ದಿನದ ಕಥೆಯಲ್ಲ. ಪ್ರತಿದಿನವೂ ಹೀಗೆಯೇ! ಮಾಡಿದ ಅಡಿಗೆ ತಿನ್ನದೇ, ಕಾಲೇಜಿಗಾಗಲೀ, ನೌಕರಿಗಾಗಲಿ ಹೊರಡಲು ಮುಂಚೆ ಎದ್ದು ತಯಾರಾಗದೇ ಮಕ್ಕಳು ಅಮ್ಮನನ್ನು ಕಾಡುವ ಪದ್ದತಿ. ಈ ಮಧ್ಯೆ ಅಮ್ಮ ವಾಕಿಂಗ್ ಮಾಡೋದು ಯಾವಾಗ? ಮಿಕ್ಕಿರುವ ಅಡಿಗೆ ತಿನ್ನುವವಳು ಡಯಟ್ ಮಾಡೋದು ಹೇಗೆ? ಸದಾ ಮಕ್ಕಳ, ಪತಿಯ ಅಥವಾ ಇತರ ಕುಟುಂಬ ಸದಸ್ಯರ ಬಗ್ಗೆಯೇ ಯೋಚನೆ ಮಾಡುವವಳಿಗೆ ಸ್ಟ್ರೆಸ್ ಕಮ್ಮಿಯಾಗುವುದು ಹೇಗೆ? ಶುಗರ್-ಬಿಪಿ ಮಟ್ಟವನ್ನು ನಿರ್ವಹಿಸುವುದು ಹೇಗೆ?
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅಮ್ಮನ ಸಹಾಯ ಅತ್ಯಗತ್ಯ. ಆದರೆ ಮಕ್ಕಳಿಗೆ ಮಕ್ಕಳಾದರೂ ಅಮ್ಮನ ಆಶ್ರಯಸಿರುವುದು ಅನುಚಿತ. ಚಿಕ್ಕಂದಿನಲ್ಲಿ ಅತ್ಯಂತ ಖುಷಿಕೊಟ್ಟ ಮಕ್ಕಳು ದೊಡ್ಡವರಾದಂತೆ ತಂದೆ-ತಾಯಿಗೆ ಹೊಣೆಯಾಗುತ್ತಿರುವುದು ಸ್ವಾಗತಾರ್ಹವಲ್ಲ. ಸಾವಿರಗಟ್ಟಲೆ ಸಂಬಳ ತಂದರೂ ಅವರವರ ಕೆಲಸ ಮಾಡಿಕೊಳ್ಳುವ ಕನಿಷ್ಠ ಜವಾಬ್ದಾರಿ ಮಕ್ಕಳಿಗಿರಬೇಕು. ಮನೆಕೆಲಸದಲ್ಲಿ ಸಣ್ಣ-ಪುಟ್ಟ ಸಹಾಯ ಮಾಡುವ ಸೌಜನ್ಯವಿರಬೇಕು. ಹೊರಗಡೆ ಹೋಗುವಾಗ ಅಗತ್ಯ ವಸ್ತುಗಳ ಪಟ್ಟಿ ಮಾಡಿ ಮರೆಯದೇ ಕೊಂಡು ತರಬೇಕು. ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಸುಲು ಅಮ್ಮ ಬಿಸಿಲಲ್ಲಿ ತಿರುಗುವುದು ಬೇಡ. ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಾಕೃತಿಕವಾಗಿ ಕ್ಷೀಣಿಸುತ್ತವೆ. ವಾರಾಂತ್ಯಗಳಲ್ಲಿ ಗೆಳೆಯರೊಂದಿಗೆ ಕಳೆಯದೇ ಅಮ್ಮನೊಂದಿಗೂ ಇದ್ದರೆ ಅವಳ ಕಷ್ಟವೂ ಅರ್ಥವಾದೀತು.
ಭೂಮಿಯ ಮೇಲಿನ ಪ್ರತಿ ಜೀವಿಗೂ ಅಮ್ಮನೇ ಮೊದಲ ಬಂಧು. ಅಪ್ಪ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಅಜ್ಜ-ಅಜ್ಜಿ.......ಮಿಕ್ಕವರೆಲ್ಲಾ ಅವಳ ಆನಂತರದ ಸಂಬಂಧ. ಈ ಸಂಬಂಧಗಳು ಅವಳ ನಂತರ ಮಕ್ಕಳನ್ನು ಕಾಪಾಡಲು ಅವಳೇ ಕಟ್ಟಿದ ಭದ್ರ ಕೋಟೆ. ಪುಣ್ಯ ಕೋಟಿ ಕಥೆಯಲ್ಲಿರುವಂತೆ. ತಾನಿಲ್ಲದಿದ್ದರೂ ವಾತ್ಸಲ್ಯಕ್ಕೆ ಧಕ್ಕೆಯಾಗದಂತೆ ವ್ಯವಸ್ಥೆ ಮಾಡುವ ಅಮ್ಮನ ಬದ್ಧತೆ ಬೇರ್ಯಾವ ಸಂಬಂಧಕ್ಕೂ ಇಲ್ಲ. ಅಮ್ಮನ ಬೆಟ್ಟದಷ್ಟು ವಾತ್ಸಲ್ಯವನ್ನು ಗುಡ್ಡದಷ್ಟಾದರು ಹಿಂದಿರುಗಿಸುವ ಸುಂದರ ಜವಾಬ್ದಾರಿ ಈ ಪೀಳಿಗೆಯವರದಾಗಲಿ. ಈ ಅಮ್ಮಂದಿರ ದಿನ ತಾಯಿಯ ತೆಕ್ಕೆ ಎಲ್ಲ ಮಕ್ಕಳಿಗೆ ಲಭಿಸಲಿ. ಮಾತೃ ಹೃದಯ ಸಂತೃಪ್ತಿಯ ಕಡಲಲ್ಲಿ ಮೀಯಲಿ.
ಜಗತ್ತಿನ ಎಲ್ಲ ತಾಯಂದಿರಿಗೂ ಅಭಿನಂದನೆಗಳು.
Super all mothers life truth
ReplyDeleteWish you happy mothers day