ಪದ-ಬಂಧ
ಸಂಜೆ ಕಾಫಿ ಸವಿಯುತ್ತಾ ಸುಧಾ ವಾರಪತ್ರಿಕೆಯ ಪುಟಗಳನ್ನು ತಿರುವಿ ಹಾಕುತ್ತಿರುವಾಗ, ಶಬ್ದಶಿಲ್ಪದ ಪುಟ ಕಣ್ಣಿಗೆ ಬಿತ್ತು. ಅಲ್ಲಿ ಕೊಟ್ಟಿರುವ ವಾಕ್ಯಗಳಿಗೆ ಪದಗಳನ್ನು ಹೊಂದಿಸುವ ಪ್ರಯತ್ನ ಮಾಡತೊಡಗಿದೆ. ಆದರೆ ಒಂದು ವಾಕ್ಯಕ್ಕೂ ಶಬ್ದ ಗೊತ್ತಿಲ್ಲ!! ಈ ತರಹದ ಪದಬಂಧ ಬಿಡಿಸುವುದು ನನ್ನ ಬಾಲ್ಯದ ಹವ್ಯಾಸ. ನನಗೀಗಲೂ ನೆನಪಿದೆ: ತರಂಗ ವಾರಪತ್ರಿಕೆಯ ಕೆಣಕು-ತಿಣುಕು ಪದಬಂಧವನ್ನು ಎಲ್ಲರಿಗಿಂತ ಮೊದಲು ತುಂಬಿಸುತ್ತಿದ್ದದ್ದು ನಾನೇ! ಈಗೇಕೆ ಈ ಶಬ್ದ ದಾರಿದ್ರ್ಯ? ಈ ಪ್ರಶ್ನೆ ನನ್ನನ್ನು ಕಾಡತೊಡಗಿತು.
ಆಲೋಚಿಸಿದರೆ, ಹೌದು! ನನ್ನ ನಾಲ್ಕು ವರ್ಷದ ಅಮೆರಿಕಾ ವಾಸ ಕನ್ನಡದ ಬಳಕೆಯನ್ನು, ನನ್ನ ಕನ್ನಡ ಭಾಷಾ ಸಾಮರ್ಥ್ಯವನ್ನು ಕ್ಷೀಣಿಸಿದೆ. ಮಕ್ಕಳೊಂದಿಗೆ, ಪತಿಯೊಡನೆ, ನೆರೆಹೊರೆಯವರೊಂದಿಗೆ, ಅಂಗಡಿಗಳಲ್ಲಿ , ಎಲ್ಲೆಲ್ಲೂ ಇಂಗ್ಲೀಷ್ ಬಳಕೆ ನನ್ನ ಕನ್ನಡವನ್ನು ನುಂಗಿ ಹಾಕಿದೆ ಎನ್ನುವ ಕಟು ಸತ್ಯ ಮನವರಿಕೆಯಾಯಿತು.
ವಿಪರ್ಯಾಸವೆಂದರೆ ಈ ಸಮಸ್ಯೆ ನನ್ನೊಬ್ಬಳದೇ ಅಲ್ಲ. ನಮ್ಮ ಬೆಂಗಳೂರಿನ ಬಹುತೇಕ ಕನ್ನಡಿಗರದೂ ಹೌದು. ಹತ್ತು ಪದವಿರುವ ಒಂದು ವಾಕ್ಯದಲ್ಲಿ ಒಂದೆರಡೇ ಕನ್ನಡ ಪದಗಳನ್ನು ಕಾಣಬಹುದು. ಪ್ರತಿವಾಕ್ಯದಲ್ಲೂ ಇಂಗ್ಲೀಷ್ ಕಲಬೆರಕೆ. ನಮ್ಮ ಬೆಳಗಿನ ಉಪಹಾರಗಳ ಹೆಸರುಗಳೇ ಬದಲಾಗಿವೆ ! ಉಪ್ಪಿಟ್ಟಿಗೆ ಉಪ್ಮಾ, ದೋಸೆಗೆ ದೋಸಾ, ಹೆಸರು ಬೇಳೆ ಉಗ್ಗಿಗೆ ಪೊಂಗಲ್, ತರಾವರಿ ಚಿತ್ರಾನ್ನಗಳೆಲ್ಲಾ ಬಾತುಗಳಾಗಿವೆ. ಇನ್ನು ತಿಳಿಸಾರು ರಸಂ, ಹುಳಿ-ಕೂಟು ಸಾಂಬಾರ್! ಇಂದು ಬಹುತೇಕ ಬೆಂಗಳೂರಿಗರಿಗೆ ಕನ್ನಡ ಸಂಖ್ಯೆಗಳಾಗಲೀ, ಹೂ-ಹಣ್ಣುಗಳ ಹೆಸರುಗಳಾಗಲೀ ತಿಳಿದಿಲ್ಲವೆಂಬುದು ವಿಷಾದಕರ ಸಂಗತಿ.
ಇತ್ತೀಚೆಗೆ ನಾ ಕಂಡಂತೆ ಬಹಳ ಮಂದಿ ತಮ್ಮ ಮಕ್ಕಳನ್ನು ಇಂಜಿನೀರ್-ಡಾಕ್ಟರ್ ಮಾಡುವ ಓಟದಲ್ಲಿ ಭಾಷೆಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಕನ್ನಡದಲ್ಲಿ ಬರೀ ಉತ್ತೀರ್ಣರಾದರೆ ಸಾಕು ಬೇರೆ ವಿಷಯಗಳಲ್ಲಿ ನೂರಕ್ಕೆ ನೂರೇಬೇಕೆಂಬ ಧೋರಣೆ ಎಲ್ಲರಲ್ಲಿದೆ. ವಿದ್ಯಾರ್ಥಿಗಳಿಗೆ ಕನ್ನಡ ಓದಲು ಮತ್ತು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಪಠ್ಯ ಪುಸ್ತಕದಲ್ಲಿನ ಕಥೆ, ಕವನ, ನಾಟಕಗಳು ವ್ಯಕ್ತಿತ್ವ ವಿಕಾಸಕ್ಕೆ ಮೆಟ್ಟಿಲುಗಳು. ಮಾತೃಭಾಷೆಯ ಮೇಲಿನ ಹಿಡಿತ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ.
ಕರ್ನಾಟಕದ ಶಾಸ್ತ್ರೀಯ ಸಂಗೀತ, ಬೇಲೂರು-ಹಳೇಬೀಡಿನ ಶಿಲ್ಪಕಲೆ, ಯಕ್ಷಗಾನ, ಮೈಸೂರಿನ ದಸರಾ ಜಗತ್ಪ್ರಸಿದ್ಧ. ಅಷ್ಟೇ ಅಲ್ಲ ನಮ್ಮ ಮೈಸೂರ್ ಪಾಕು, ಬಿಸಿಬೇಳೆ ಹುಳಿಯನ್ನ, ಮದ್ದೂರು ವಡೆ ಮುಂತಾದ ರುಚಿಕರ ಖಾದ್ಯಗಳು ಕನ್ನಡಿಗರ ಸ್ವತ್ತು. ಈ ಸಂಸ್ಕೃತಿ ಮತ್ತು ಪರಂಪರೆಗೆ ಕನ್ನಡವೇ ವಜ್ರ ಕವಚ. ಭಾಷೆಯ ಅಳಿವು ಉಳಿವು ಅದರ ಬಳಕೆಯಲ್ಲಿದೆ. ಬೇರೆ ಭಾಷೆಗಳನ್ನು ಗೌರವಿಸುತ್ತಾ, ಶುದ್ಧ ಕನ್ನಡವನ್ನು ಮಾತಾಡುತ್ತಾ ನಮ್ಮ ಭವ್ಯ ಸಂಸ್ಕೃತಿಯನ್ನು ಕಾಪಾಡುವ ಕರ್ತವ್ಯ ನಮ್ಮದಾಗಿದೆ. ಕನ್ನಡದ ತತ್ವ, ಸಾಹಿತ್ಯ, ಇತಿಹಾಸಗಳ ಅಲಕ್ಷ್ಯವೇ ಕನ್ನಡಕ್ಕಿರುವ ಬಹು ದೂಡ್ಡ ತೊಂದರೆ. ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆಗಳು, ಚಿಂತನೆಗಳು ಇವು ಒಂದು ಭಾಷೆಗೆ ಅದರ ಭಾಷಿಕರಷ್ಟೇ ಮುಖ್ಯ. ಕನ್ನಡ ಬಳಕೆ ಮನೆಯಿಂದಲೇ ಪ್ರಾರಂಭವಾಗಬೇಕು.
೨ ಭಾರತರತ್ನ ಪ್ರಶಸ್ತಿಗಳು, ೮ ಜ್ಞಾನಪೀಠ ಪ್ರಶಸ್ತಿಗಳು ಸಂದಿರುವ ಘನತೆ ಕನ್ನಡಕ್ಕಿದೆ. ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಲಾಗಿದೆ.. ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಬೆನಗಲ್ ನರಸಿಂಗ ರಾವ್ (ಇವರು ಭಾರತ ಸಂವಿಧಾನ ಸಭೆಯ ಮುಖ್ಯ ಕಾರ್ಯದರ್ಶಿಗಳು. ಭಾರತದ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ), ಬಿ.ಡಿ. ಜತ್ತಿ, ಸಿ.ಎನ್.್ ರಾವ್ ರಂಥಹ ಮಹನೀಯರ ಕೊಡುಗೆ ನಮಗೆ ಆದರ್ಶ. ಹೀಗೆ ಭಾರತದ ರಾಜಕೀಯ, ಆರ್ಥಿಕತೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿರುವ ಮಹನೀಯರ ಘನತೆಯನ್ನು ಮುಂದುವರೆಸುವ ಹೊಣೆ ನಮ್ಮ ಪೀಳಿಗೆಯದು.
ಅರವಿಂದ ಮಾಲಗತ್ತಿಯವರು ಹೇಳಿದಂತೆ,
ಜನ್ಮ ಭೂಮಿಗೆ ಮೀರಿದ ಸ್ವರ್ಗವೆ ಇಲ್ಲ
ಮಾತೃಭಾಷೆಗೆ ಮೀರಿದ ಅಮೃತವಿಲ್ಲ
ಕರುಳ ಬಳ್ಳಿಯ ಬಂಧವೆ ಎಲ್ಲ
ರಕ್ತ ಮೀರೀದ ಸಂಬಂಧವೇ ಎಲ್ಲ.
ಹೀಗೆ ನನ್ನ ಮನದಲ್ಲಿ ಮೂಡಿದ ವಿಚಾರಗಳಿಂದ, ನಾನು ಶಬ್ದಶಿಲ್ಪ ಪೂರ್ಣ ಮಾಡಲಾಗಲಿಲ್ಲವೆಂಬುದನ್ನು ಅರಗಿಸಿ ಕೊಳ್ಳಲಾಗಲಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ನಾನೇ ಹೀಗಾದರೇ ಕನ್ನಡದ ಗಂಧವಿಲ್ಲದ ನನ್ನ ಮಕ್ಕಳ ಪರಿಸ್ಥಿತಿ ? ಪ್ರತಿವರ್ಷ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಾಗಿ, ಫ್ರೆಂಚ್, ಜರ್ಮನ್, ಡಚ್, ಲಾಟೀನ್ ಸೇರಿದಂತೆ ಹದಿನೈದು ಭಾಷಾಮೂಲ ಪದಗಳನ್ನು ನನ್ನ ಮಕ್ಕಳಿಗೆ ಕಲಿಸುವ ನಾನು, ಕನ್ನಡ ಕಲಿಸದಿರಲು ಅಪರಾಧಿ ಪ್ರಜ್ಞೆ ಕಾಡಿತು. ಅಂದೇ ನನ್ನ ಇಬ್ಬರು ಮಕ್ಕಳಿಗೂ ಕನ್ನಡ ಪಾಠ ಪ್ರಾರಂಭಿಸಿದೆ ಮತ್ತು ಆದಷ್ಟೂ ಕನ್ನಡದಲ್ಲಿಯೇ ಪ್ರತಿಕ್ರಿಯಿಸಲು ಮೊದಲು ಮಾಡಿದೆ. 25 ಕಿಲೋ ತೂಕದ 6 ಚೀಲಗಳನ್ನು ಒಯ್ಯುವ ನಾನೇಕೆ ಕನ್ನಡ ಪುಸ್ತಕಗಳನ್ನು ಕೊಂಡೊಯ್ಯಲಿಲ್ಲವೆಂಬ ಪಶ್ಚಾತ್ತಾಪವಾಯಿತು. ಮರುದಿನವೇ ಬಸವನಗುಡಿಯ ಗೋಖಲೆ ವಿಚಾರ ಸಂಸ್ಥೆಯಿಂದ ಹಲವು ಪುಸ್ತಕಗಳು ನನ್ನ ಚೀಲ ಸೇರಿದವು. ಆ ಪುಸ್ತಕಗಳನ್ನು ಪ್ರತಿದಿನ ಓದಿ ಸವಿಯುವ ಸುಖ ಈಗ ನನ್ನದಾಗಿದೆ. ಕನ್ನಡ ಎಲ್ಲರ ಮನೆ ಮನ ತುಂಬಲಿ. ಸಿರಿ ಗನ್ನಡಂ ಗೆಲ್ಗೆ.
ದೀಪಾ ಶಂಕರ
5 ನೇ ತಂಡ( ಬ್ಯಾಚ್)
ಬಿ ಇ
ಗೃಹಿಣಿ
ಬೆಂಟಾನ್ವಿಲ್
ಆರ್ಕ್ಯಾನ್ಸಸ್
ಯು.ಎಸ್.ಎ
No comments:
Post a Comment