Wednesday, May 8, 2019

ಈ ಅಮ್ಮಂದಿರ ದಿನ


ಅಮ್ಮಂದಿರ ದಿನ...
ಅಕ್ಟೋಬರ್ 24 2006 
ಬಲಿಪಾಡ್ಯಮಿಯ ಮರುದಿನ ಕಾರ್ತೀಕ ಶುದ್ಧ ಬಿದಿಗೆ ನಾ ತಾಯಿಯಾದ ಸುದಿನ. ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಶುರುವಾದ ಬೇನೆ ಮಧ್ಯಾನ್ಹ 12:30 ಕ್ಕೆ  ಮುದ್ದಾದ ಮಗಳನ್ನು ಕೊಟ್ಟು ಹೋಯಿತು. ನಂತರ ನನಗೆ ಒಂದೇ ಅಳು. ಮನೆಯವರನ್ನೆಲ್ಲ ನೋಡುವ ಕಾತರ. ಎಷ್ಟೇ ಸಮಾಧಾನ ತಂದು ಕೊಂಡರೂ ಅಳು ನಿಲ್ಲವೊಲ್ಲದು. ಅಮ್ಮ ನನ್ನನ್ನು ಇಷ್ಚು ನೋವುಂಡು ಹೆತ್ತಳಾ!! ಎನ್ನುವ ಸತ್ಯದ ಅನುಭವ!!  ಅಮ್ಮನ ಅಳು ನಿಲ್ಲಿಸಲು ಅಮ್ಮನೇ ಬರಬೇಕಾಯಿತು. ಅಮ್ಮ ಬಂದು ನನ್ನ ಮಗಳನ್ನು ನನ್ನ ಮಡಿಲಲ್ಲಿ ಮಲಗಿಸಿ ಅಪ್ಪಿ ಸಮಾಧಾನ ಮಾಡಿದಳು. ನಾ ಕೇಳಿದೆನಿನಗೂ ಇಷ್ಟೊಂದು ನೋವಾಗಿತ್ತಾಮ್ಮ ?’ ಆಗ  ಅಮ್ಮನನಗಾದ ನೋವು ಯಾಮಾತ್ರ? ನಮ್ಮಮ್ಮನಿಗೆ ಹನ್ನೆರಡು ಮಕ್ಕಳು ಆಗೇನು ಆಸ್ಪತ್ರೆಗಳಿತ್ತೆಅದೆಲ್ಲಾ ಈಗ್ಯಾಕೆಬಾಣಂತಿ ಅಳಬಾರದುಎಂದು ಮಾತು ಮರೆಸಿದಳು. ಮಡಿಲಲ್ಲಿದ್ದ ಮಗಳನ್ನು ನೋಡಿತ್ತಿದ್ದಂತೆಯೇ ನನ್ನ ಅಳು ತಂತಾನೆ ನಿಂತು ಹೋಯಿತು. ಅದು ನಾ ಅಮ್ಮನಾದ ಕ್ಷಣನಾನೀಗ ಅಮ್ಮ!! 
ನಾ ಅಮ್ಮನಾದೆ. ಬೇಗ ಏಳುವುದು, ನಿದ್ದೆ ಕಟ್ಟುವುದು, ಹಸಿವು ತಡೆಯುವುದು, ಹೀಗೆ ಬದಲಾವಣೆಗಳು ನನಗರಿವಿಲ್ಲದೆ ಅಭ್ಯಾಸವಾಯ್ತು. ನನಗೇ ನಂಬಲಸಾಧ್ಯವಾದ ಬದಲಾವಣೆ! ಹತ್ತುತಿಂಗಳ ಹಿಂದೆ ಕಾಲೇಜಿಗೆ ಹೊರಡಿಸಲು  ಹತ್ತು ಸಾರಿ ಕೂಗಿದರೂ ಏಳದ ನಾನು ಜೋಲಿಯಲ್ಲಿ ಮಗು ಮಿಸುಕಿದರೆ ಥಟ್ಅಂತ ಎದ್ದು ಅವಳನ್ನು ನೋಡುವೆ. ಬಿಸಿಬಸಿಯಾಗಿ ಎಲ್ಲರಿಗಿಂತ ಮೊದಲು ಊಟಮಾಡುತ್ತಿದ್ದವಳು ಈಗ ಮಗು ಬಿಡುವುಕೂಟ್ಟಾಗ ಎರಡು ತುತ್ತು ತಿನ್ನುವೆ. ಹಾಡು-ಸಂಗೀತದಲ್ಲಿ ಅಷ್ಚೇನೂ ಆಸಕ್ತಿ ಇರಲಿಲ್ಲವಾದರೂ ಲಾಲಿ ಹಾಡುಗಳ ಹಾಡಲು ಕಲಿತೆ. ನಾ ಮಾಡುವ ಶಾಪಿಂಗ್ನಲ್ಲಿ ಬಹು ಭಾಗ ಮಗುವಗಾಗಿಯೇ ಮೀಸಲು. ಮಗಳ ಕೆಲಸಗಳ ಮಾಡುವುದೇ ಒಂದು ಸಂಭ್ರಮ. ಅದರ ಕಾಳಜಿ ಬಿಟ್ಟರಿನ್ನೊಂದು ಕೆಲಸವಿಲ್ಲ. ಇಂದಿಗೂ ಎಂದಿಗೂ ದಿನದಳು ಅದ್ಬುತ. ನನ್ನ ವ್ಯಕ್ತಿತ್ವ ರೂಪಾಂತರದ ಮೊದಲ ದಿನಗಳವು. ನಾ ಅಮ್ಮನಾಗುವವರೆಗೆ ನನ್ನಮ್ಮ ಗುರುವಾದರೆ; ತಾಯ್ತತನಕ್ಕೆ ಮಗುವೇ ಗುರು. ಇದು ಎಲ್ಲ ಅಮ್ಮಂದಿರ ಸಾಮಾನ್ಯ ಅನುಭವ. ಅಮ್ಮಂದಿರು ತಂತಮ್ಮ ಮಕ್ಕಳಿಗಾಗಿ ಮಾಡುವ ಪ್ರತಿಯೊಂದು ಕೆಲಸವೂ ಕರ್ತವ್ಯವಾಗಿಹೋಗುತ್ತದೆ. ಕ್ರಮೇಣ ಪ್ರೀತಿಯ ಜವಾಬ್ದಾರಿಯಾಗುತ್ತದೆ. ಜವಾಬ್ದಾರಿ ಹೊರೆಯಾಗದಂತೆ ನಿಭಾಯಿಸುವ ಜಾಣ್ಮೆ ಸ್ವಾಭಾವಿಕವಾಗಿ ರೂಢಿಯಾಗುತ್ತದೆ. ಇದೇ ನಾ ಹೇಳಿದ ವ್ಯಕ್ತಿತ್ವ ರೂಪಾಂತರ. ಎಲ್ಲ ಬದಲಾವಣೆಗಳನ್ನೊ ಸ್ವಾಗತಿಸುವ ಮನಸ್ಥೈರ್ಯ ಮಗುವಿನ ಜೊತೆ ದೇವರು ಕೊಟ್ಟ ಬಳುವಳಿ. ಮಗು ಬೆಳದಂತೆ ಬದಲಾವಣೆಗಳು ನಿರಂತರ. ಅಮ್ಮನ ಕರ್ತವ್ಯ/ ಜವಾಬ್ದಾರಿಯ ಗುರಿ ಒಂದೇ.... ಮಕ್ಕಳ ಏಳಿಗೆ.
 ಇತ್ತೀಚೆಗೆ ಮನೆಯಬಳಿ ಒಬ್ಬ ತಾಯಿ ಪುಸ್ತಕದಿಂದ ನೋಡಿ-ನೋಡಿ ಸುಮಾರು ಎರಡು ವರ್ಷದ ಮಗುವಿಗೆ ಏನೋಹೇಳಿ ಕೊಡುತ್ತಿದ್ದಳು. ಕುತೂಹಲದಿಂದ ಆಕೆ ಬಳಿ ಹೋಗಿ ಗಮನಿಸಿದೆ. ಮಗುವಿಗೆ ಪದಗಳ ಪಾಠ! ಪುಸ್ತಕ ನೋಡಿ! ನನ್ನ ಮುಖ ಭಾವ ನೋಡಿ ಆಕೆಯೇ ವಿವರಿಸಿದಳು. ಮಗುವಿಗೆ ಸ್ಪೀಚ್ ಥೆರಪಿ ನಡೆಯುತ್ತಿದೆ... ಥೆರಪಿಸ್ಟ್ ಸೂಚಿಸಿದಂತೆ ಪದಗಳನ್ನು ಆಕೆ ಹೇಳಿ ಕೊಡುತ್ತಿದ್ದಾಳೆ. ವಿವರ ನನ್ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿ ಇನ್ನಷ್ಟು ವಿವರ ಪಡೆದೆ. ತಾಯಿ-ತಂದೆ ಇಬ್ಬರೂ ದುಡಿಯುತ್ತಿರುವುದರಿಂದ ದಿನದ ಭಾಗವೆಲ್ಲಾ ಮಗು ಡೇಕೇರ್ನಲ್ಲಿ ಕಳೆಯುತ್ತಿದೆ. ಅಲ್ಲಿನ ಕೇರ್ ಟೇಕರ್ ಮೆಕ್ಸಿಕನ್ ಆದ್ದರಿಂದ ಮಗುವಿನೊಡನೆ ಮಾತಿಲ್ಲ. ಮನೆಗೆ ಬರುವ ವೇಳೆಗೆ ಅದಕ್ಕೆ ನಿದ್ದೆ. ದಿನಚರಿಯಿಂದ ಮಗುವಿನೊಡನೆ ಒಡನಾಟ ತೀರ ಕಡಿಮೆ. ಅಪ್ಪಿ-ತಪ್ಪಿ ಸಮಯವಿದ್ದರೆ ಟಾಬ್ನಲ್ಲಿ ಆಡುತ್ತದೆ. ಹೀಗಾಗಿ ಮಗುವಿಗೆ ವಯಸ್ಸಿಗೆ ಸರಿಯಾದ ಮಾತಿಲ್ಲ. ಮಾತು ಕಲಿಸಲು ಥೆರಪಿಸ್ಟನ ಬಳಿ ಹೋಗಿದ್ದಾರೆ. ಮುದ್ದಿನ ಕಂದಂಗೆ ಕರ್ಮ ಯಾಕೆಂದು ಕಸಿವಿಸಿಯಾಯಿತು.   
ಹೌದು! ನಾವೀಗ ನಮ್ಮ ಮಕ್ಕಳಿಗಾಗಿ ಏನೆಲ್ಲಾ ಮಾಡುತ್ತಿದ್ದೇವೆ ಎಂಬ ಚಿಂತನೆ ನನ್ನ ಬಾಲ್ಯಕ್ಕೆ ಕರೆದೊಯ್ಯಿತು. ಏಳೆಂಟು ವರ್ಷ ತುಂಬುವವರೆಗೆ ಅಮ್ಮ ಹೇಗೆ ಸಾಕಿದಳೋ ಕಾಣೆ; ನಂತರದ ದಿನಗಳು ನೆನಪಿದೆ. ಸಣ್ಣ ಉರಿಯಲ್ಲಿ ಹಾಲು ಕಾಯಿಸಿ ಆರಿಸಿ ಕೊಡುತ್ತಿದ್ದಳು ಈಗಿನಂತೆ 30 ಸೆ ಮೈಕ್ರೋ ವೇವ್ ಮಾಡುತ್ತಿರಲಿಲ್ಲ. ಪ್ರತಿ ಬಾರಿಯೂ ಸೀಗೆಕಾಯಿ ನೆನಸಿ ಕಲ್ಲಲ್ಲಿ ರುಬ್ಬಿ ತಲೆ ತೊಳೆಯುತ್ತಿದ್ದಳು ಶಾಂಪುವಿನಿಂದಲ್ಲ. ಊಟಕ್ಕೆ ಎಂದಿಗೊ ಸ್ಯಾಂಡ್ ವಿಚ್ ಇಲ್ಲ. ಬಿಸಿ ಬಿಸೀ ಅನ್ನ ಸಾರು, ಕಡೆದ ಮಜ್ಜಿಗೆ. ಹೋಂ ವರ್ಕನ್ನು ತಾನೇ ಖುದ್ದಾಗಿ ಮಾಡಿಸುತ್ತಿದ್ದಳು. ಸ್ವತಂತ್ರ್ಯದಿನಾಚರಣೆಗೆ ಭಾಷಣ ಬರೆದು ಕೊಡುತಿದ್ದಳು, ಹಾಡು ಹೇಳಿಕೊಡುತಿದ್ದಳು. ಮಲಗುವ ಮುನ್ನ ಕಥೆ ಹೇಳುತ್ತಿದ್ದಳು. ತಪ್ಪು ಮಾಡಿದಾಗ ನಿಷ್ಠೂರವಾಗಿ ದಂಡಿಸುತ್ತಿದ್ದಳು. ಹುಷಾರು ತಪ್ಪಿದರೇ ಮನೆಯಲ್ಲೇ ಮದ್ದು: ಸಿರಪ್ಗಳಲ್ಲ. ಹುಶಾರು ತಪ್ಪಿದಾಗ ಶಾಲೆಗೆ ಕಳಿಸುತ್ತಲೇ ಇರಲಿಲ್ಲ; ಪರೀಕ್ಷೆ ಇದ್ದರೂ ಕಳಿಸುತ್ತಿರಲಿಲ್ಲ. ಹೋಂ ವರ್ಕ ಹೊರೆ ತಪ್ಪಿಸಲು ಮೈಹುಷಾರಿಲ್ಲದಿದ್ದರೂ, ಬಸ್ ನಿಲುಗಡೆಯ ಬಳಿಯೇ ಔಷಧಿ ಹಾಕಿ ಶಾಲೆಗೆ ಕಳಿಸುವುದು ಈಗ ಸರ್ವೇ ಸಾಮಾನ್ಯವಾಗಿದೆ.ಆಗ ಹೊರಗಡೆಯ ತಿಂಡಿಗಳಿಗೆ ಪ್ರೋತ್ಸಾಹವೇ ಇಲ್ಲ. ತನ್ನ ಸಂಬಳದ ದಿನ ಬೇಕರಿಯಿಂದ ಕೆಲ ತಿನಿಸುಗಳು ಮಾತ್ರತಪ್ಪದೇ ತರುತಿದ್ದಳುನಾ ಅಮ್ಮನಾದಗಲಂತೂ ಅವಳ ಆರೈಕೆಗೆ ಸರಿಸಾಟಿ ಇಲ್ಲ. ಅಮ್ಮ ಮಾಡಿದಷ್ಟು ಕಾಳಜಿ ನಾವೇಕೆ ಅನುಸರಿಸಲಾಗುತ್ತಿಲ್ಲ
ತಾಯಿ-ಮಗು ಇಬ್ಬರೂ ಅನುಭವದಿಂದ ದೂರವಾಗುತ್ತಿರುವುದು ನಿಜ. ಎಳೆ ಮಗುವಿನ ಪಾಲನೆಯ ಸುಖ ಅಮ್ಮನಿಗಿಲ್ಲ; ಅಮ್ಮನ ಸನಿಹದ ಹಿತ ಕಂದನಿಗಿಲ್ಲ. ಹದವಾದ ನೀರಿನ ಸ್ನಾನ ಮಾಡಿಸಿ ಸೆರಗಿನಲ್ಲಿ ಎದಿಗವಚಿಕೊಂಡು ಬಂದು, ತಲೆ ಆರಿಸಿ, ಅಲಂಕರಿಸಿ, ಹೊಟ್ಟೆ ತುಂಬಿಸಿದ ನಂತರ, ಜೋಲಿಯಲ್ಲಿ ದೇವರಂತೆ ನಿದ್ರಿಸುವ ಕಂದನ ನೋಡುವ ಸುಖಕ್ಕೆ ಎಷ್ಟು ಪ್ರಶಸ್ತಿಗಳು ಸಮ? ಎಷ್ಟು ಸಂಬಳದ ಹೆಚ್ಚಳಕ್ಕೆ ಸಮ? ಎಷ್ಟು ಬಡ್ತಿಗಳಿಗೆ ಸಮ

ಇಂದಿನ ಚಿಣ್ಣಾರಿಗಳಿಗೆ ಆಧುನಿಕ ಅನುಕೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಪೋಷಕರು ಅವರಿಂದ ದೂರವಾಗುತ್ತಿರುವುದನ್ನು  ನಿರ್ಲಕ್ಷಿಸುತ್ತಿದ್ದಾರೆ. ತಾಯಿಯ ಸನಿಹವೇ ಮಕ್ಕಳಿಗೆ ಸಿಗುವ ಅತ್ಯುನ್ನತ ಥೆರಪಿ. ತಾಯಿಯ ವೃತ್ತಿ ಜೀವನಕ್ಕೆ ಅವಕಾಶವೇ ಇಲ್ಲವೆನ್ನುವುದು ನನ್ನ ವಾದವಲ್ಲ. ಮಕ್ಕಳಿಗೆ ಸಣ್ಣವಯಸ್ಸಿನಲ್ಲಿ ಅಮ್ಮ ಅನಿವಾರ್ಯ. ಎದೆ ಹಾಲು ಕೂಡ ತಂಗಳಾದರೆ? ಅದು ದುರಂತ. ಹಾಲೂಡಿಸುವವರೆಗಾದರೂ ಅಮ್ಮ ಮಗುವಿನ ಕಾಳಜಿ ವಹಿಸುವುದು ಕನಿಷ್ಟ ನಿರೀಕ್ಷೆ. ಮಕ್ಕಳು ಬೆಳದಂತೆ ಒಂದಲ್ಲ ಒಂದು ರೀತಿಯಲ್ಲಿ ಅಮ್ಮನ ಮೇಲೆ ಅವಲಂಬಿಸುತ್ತಾರೆ . ಅವರ ಅವಶ್ಯಕತೆಗೆ ತಕ್ಕಂತೆ ಅಮ್ಮ ಸಮಯ ಕೊಟ್ಟರಷ್ಟೇ ತಾಯ್ತನಕ್ಕೆ ಯಶಸ್ಸು. ಪಾಲನೆಯ ಕರ್ತವ್ಯವನ್ನು ಹಸ್ತಾಂತರಿಸಿದರೆ ಬಾಂಧವ್ಯದ ಅನುಭೂತಿಯೂ ಹಸ್ತಾಂತರವಾಗುತ್ತದೆ. ಅಮ್ಮನ ಸ್ಪರ್ಶ ಮಗುವಿನ ಅಧಿಕಾರ. ಆಧುನಿಕತೆಯ ಅಮಲಿನಲ್ಲಿ ಮಕ್ಕಳ ಬಾಲ್ಯ ಬಲಿಯಾಗುತ್ತಿರುವುದು ಸತ್ಯ. ಆಧುನಿಕ ಸೌಕರ್ಯಗಳಿಗೆ ಮೀರೀದ ಸುಖಕ್ಕೆ ತಾಯಿ-ಮಗು ಇಬ್ಬರೂ ಯೋಗ್ಯರೆಂಬುದೇ ನನ್ನ  ಅಭಿಪ್ರಾಯ.

ಅಮ್ಮಂದಿರ ದಿನ ತಾಯಿ-ಮಕ್ಕಳ  ಬಾಂಧವ್ಯ ಇಮ್ಮಡಿಸಲಿ. ಮಾತೃತ್ವ ವಿಜೃಂಭಿಸಲಿ. ತಾಯ್ತನ ಸಂಭ್ರಮಿಸಲಿ. ಜಗತ್ತಿನ ಎಲ್ಲ ತಾಯಂದಿರಿಗೆ ನನ್ನ ಅಭಿನಂದನೆಗಳು

No comments:

Post a Comment