ನನ್ನನ್ನು ನೋಡಿದರೆ ಯಾಕೆ ಜನ ಮೂರು ಮಾರು ಹಾರ್ತಾರೆ? ಮನೇಲಿ ಉಪ್ಪಿಟ್ಟು ಮಾಡಿರೋ ಸುಳಿವು ಸಿಕ್ಕರೆ ಸಾಕು, ಒಂದು ಯುದ್ಧಕಾಂಡ! ಪರಿಪರಿಯ ಚಳುವಳಿ. ಗಂಡನೋ ಹೆಂಡತಿಗೆ ಎದುರು ಹೇಳಲಾರದೆ ಬ್ರೇಕ್ಫಾಸ್ಟ್ ಮೀಟಿಂಗ್ ಎಂದು ನೆಪ ಹೇಳಿ ಪರಾರಿ. ಮಗಳೋ ಉಪ್ಪಿಟ್ಟ್ ಬೇಡ್ವೇ ಬೇಡ ಅಂತ ಹೋರಾಟ. ಮಗ ಉಪ್ಪಿಟ್ಟಿನ ವಾಸನೆ ಬಂದದ್ದೇ ನನ್ನಿಂದ ಬಚಾವದರೆ ಸಾಕು ಅಂತ ಉಪವಾಸ ಓಟ. ಇನ್ನು ಮನೇಯಲ್ಲಿನ ವೃದ್ದರು ‘ಅಯ್ಯೋ! ಉಪ್ಪಿಟ್ಟ! ಇದೇನು? ಉಪ್ಪಿಲ್ಲದಿಟ್ಟಾ? ಉಪ್ಪಿನಿಟ್ಟ? ’ಅಂತ ಮೂದಲಿಸಿ ವಿಧಿ ಇಲ್ಲದೆೇ ಬಲವಂತದಿಂದ ನಾಕು ತುತ್ತು ತಿಂತಾರೆ (ಇವರಾದ್ರೂ..ಹೀಗಾದ್ರೂ ತಿಂತಾರಲ್ಲಾ..ನನ್ನ ಪುಣ್ಯ) . ಹೋಗ್ಲಿ ನನ್ನನ್ನು ತಯಾರು ಮಾಡ್ದವರಾದರೂ ಇಷ್ಟ ಪಟ್ಟು ತಿಂತಾಳಾ? ಇಲ್ಲ! ಆಕೆ ಎಲ್ಲರನ್ನು ಪುಸಲಾಯಿಸಿ, ತಾನು ತಿನ್ನುವಷ್ಟರಲ್ಲಿ ಆರಿ ಹೋಗಿರೋ ಉಪ್ಪಿಟ್ಟು ಗಂಟಲಲ್ಲಿ ಇಳಿಯುತ್ಯೇ?
ಇಷ್ಟೆಲ್ಲಾ ಕಡೆಗಣಿಸಿದರೂ ಏಕಾದಶಿಗೆ, ಶಿವರಾತ್ರಿಗೆ ಮತ್ತಿತರ ಉಪವಾಸದ ದಿನಗಳಲ್ಲಿ ಪೂಜೆ ಮರೆತರೂ ನನ್ನನ್ನು ಮಾಡೋದು ಮರೆಯೋಲ್ಲ.
ಅಲ್ಲಾ! ನನ್ನನ್ನು ಸರಿಯಾಗಿ ಮಾಡಿಕೊಂಡು ತಿನ್ನೋದು ಬಿಟ್ಟು ಪದಾರ್ಥ ಹಾಳು ಮಾಡಿ, ನನ್ನನ್ನೇ ದೂಷಿಸ್ತಾರಲ್ಲಾ!
ಒಂದು ಚೂರು ತುಪ್ಪ ಹಾಕಿ ಸಣ್ಣ ಉರಿಯಲ್ಲಿ ರವೆ ಹುರಿಯದೇ, ಆತುರಕ್ಕೆ ದೊಡ್ಡ ಉರಿ ಮಾಡಿ ರವೆ ಕಪ್ಪಾದರೆ, ರುಚಿ ಹೇಗೆ ಬರುತ್ತೆ? ಹೋಗ್ಲಿ ನೀರಾದರೂ ಅಳತೆ ಇಡಬಾರದೇ? ಒಂದು ರವೆ ಅಳತೆಗೆ ಎರಡು ಅಳತೆ ನೀರಿಟ್ಟರೆ ಉಪ್ಪಿಟ್ ಮುದ್ದೆಯಾಕಾಗುತ್ತೆ? ಒಗ್ಗರಣೆ ಮಾತಿಗೆ ಬಂದರೆ, ಕೈತುಂಬಾ ಉದ್ದು-ಕಡಲೆ ಬೇಳೆ ಹಾಕಬೇಕು, ಹಾಗೇ ಕರೀಬೇವು-ಶುಂಠಿ ಕೂಡ. ಜಿಡ್ಡು ಜಾಸ್ತಿ ಆದ್ರೇನು ತಪ್ಪಿಲ್ಲ(ಡಯಟ್ ಹೆಸರಲ್ಲಿ ನನಗೆ ಮಾತ್ರ ಎಣ್ಣೆನೇ ಹಾಕಲ್ಲ ಆದರೆ ಮನೆಯಿಂದ ಹೊರಗಡೆ ಹೋಗಿ ಸಿಕ್ಕಿದ ಹಾಳು ಮೂಳು ತಿನ್ನಲ್ವಾ? ). ಉಪ್ಪು-ಖಾರ ಸಿಕ್ಕಿದಷ್ಚು ಹಾಕೋದೇ? ಒಂದು ಪಾವಿಗಿಷ್ಟು ಅಂತ ಗುರುತು ಇಟ್ಕೋಬೇಕು. ಈರುಳ್ಳಿ ಟೊಮೋಟೋ ಪ್ರಮಾಣವಂತೂ ಅದರ ಬೆಲೆ ಮೇಲೆ ನಿರ್ಧರಿಸ್ತಾರೆ. ಇವುಗಳ ಜೊತೆಗೆ ಬೇರೆ ತರಕಾರಿನೂ ಸಣ್ಣಗೆ ಹೆಚ್ಚಿ ಒಗ್ಗರಣೇಲಿ ಬಾಡಿಸಬಾರದೇ? ಹಸಿ ಕಾಳುಗಳನ್ನೂ ಹಾಕಿ, ಹಸಿ ಕೊಬ್ಬರಿ ಸೇರಿಸಿದ್ರೆ ಎಷ್ಟು ರುಚಿ! ಒಗ್ಗರಣೆ ಹಾಕಿ, ನೀರು ಚೆನ್ನಾಗಿ ಕುದಿಯುವಾಗ ರವೆ ಸೇರಿಸಿ ಚೆನ್ನಾಗಿ ಕಲಕಬೇಡ್ವೇ? ಬೇಯಲು ಸಮಯ ಬೇಕು ತಾನೆ? ಕುದಿಯುವ ಉಪ್ಪಿಟ್ಟನ್ನೇ ಆತುರವಾಗಿ ತಿನ್ನಲು ಹೋದರೇನು ರುಚಿ? ಡಬರಿ ಮೇಲೆ ಮುಚ್ಚಳ ಮುಚ್ಚಿ ಒಂದೈದು ನಿಮಿಷ ಮುಚ್ಚಿಟ್ಟರೆ ಆವಿಯಲ್ಲಿ ಎಷ್ಟು ಮೃದುವಾಗುತ್ತೇನೆ! ಸ್ವಲ್ಪ ಕೊತ್ತಂಬರಿನೋ (ತುಪ್ಪದಲ್ಲಿ) ಕರಿದ ಗೋಂಬಿಯಲ್ಲೋ ಅಲಂಕರಿಸಿದರೆ..ನನಗಿಂತ ಸುಂದರಿ ಯಾರು? ಬಿಸಿಬಿಸಿಯಾಗಿ ತಿಂದರಲ್ಲವೇ ರುಚಿ? ಚಟ್ನಿ ಪುಡಿ, ಉಪ್ಪಿನಕಾಯಿಯ ಜೊತೆ ಗೂಡಿದರೆ ನನಗೆ ಸಮರಾರು?
ಆರಿದ ಮೇಲೆ ಕಾಂಕ್ರೀಟ್ ಅಂತ ದೂರೋದು ಯಾಕೆ? ಈ ನಿಂದನೆಗಳು ಕೇಳಿ ಕೇಳಿ ಸಾಕಾಗೋಗಿದೆ ನನಗೆ. ‘ಕುಣೀಲಾರದವಳು ನೆಲ ಡೊಂಕು’ ಅಂತಾರಲ್ಲ ಹಾಗೆ..ಉಪ್ಪಿಟ್ಟ್ ಮಾಡೋಕೆ ಬರದವರು ಉಪ್ಪಿಟ್ಟ್ನ ಸ್ಟುಪ್ಪಿಟ್ ಅಂದರಂತೆ. ಕಡಿಮೆ ಸಮಯದಲ್ಲಿ ಕಡಿಮೇ ಪದಾರ್ಥಗಳಲ್ಲಿ ಮಾಡಬಹುದಾದ ರುಚಿಕರವಾದ, ಆರೋಗ್ಯಕರವಾದ ತಿಂಡಿ ನನ್ನ ಬಿಟ್ಟರೇ ಇನ್ಯಾವುದಿದೆ? ಹಾನಿಕಾರಕ ಮ್ಯಾಗಿಗಿಂತ ನಾನು ಕಡೇನಾ!
ಉಪ್ಪಿಟ್ಟು ಚೆನ್ನಾಗಿದೆ ಚನ್ನಾಗಿದೆ nice
ReplyDelete