ಡಿಸೆಂಬರಿನ ಮೊದಲ ವಾರ. ಬೆಳಿಗ್ಗೆ ಏಳೂವರೆ ಸುಮಾರಿಗೆ ರಕ್ತ ಪರೀಕ್ಷೆಗಾಗಿ ಮಲ್ಲೇಶ್ವರಂನ ಹತ್ತನೇ ಕ್ರಾಸ್ ನಲ್ಲಿರುವ ಲ್ಯಾಬಿನಲ್ಲಿ ರಕ್ತ ಕೊಟ್ಟು, ಕಾಫಿ ಕುಡಿಯೋಣವೆಂದು ಪಕ್ಕದ ರಸ್ತೆಯಲ್ಲಿರುವ ಮೈಯಾಸ್ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ಸಾಮಾನ್ಯವಾಗಿ ಕಾಫಿ ಕುಡಿಯಲು ಹಿರಿಯರ ದಂಡು ಸೇರಿರುತ್ತದೆ. ಅಷ್ಟಲ್ಲದೇ ವಾಕಿಂಗ್ ಮುಗಿಸಿ ಬಂದು ಕಾಫೀ ಕುಡಿಯುವವರೂ ಇರತ್ತಾರೆ. ನಾನೂ ನನ್ನ ಕಾಫೀ ಕೊಂಡು ಗುಟುಕರಿಸುತ್ತಾ ಎದುರುಗಡೆಯ ವೇಣು ಗೋಪಾಲ ಸ್ವಾಮಿ ಗುಡಿಯ ಕಡೆ ಕಣ್ಣಾಯಿಸಿದೆ. ಅದರ ಬಳಿ ಮಾರುತ್ತಿದ್ದ ಮಲ್ಲಿಗೆ ಹೂ ನನ್ನ ಸೆಳೆಯಿತು. ಕೊನೆಯ ಗುಟುಕು ಹೀರಿ ಕಪ್ ಟ್ರೇೆಗೆ ಹಾಕಿ ದಾಪುಗಾಲಿಡುತ್ತಾ ರಸ್ತೆದಾಟಿ ಮಲ್ಲಿಗೆ ಹೂ ಕೊಳ್ಳಲು ಹೋದೆ. ಚೌಕಾಸಿ ಮಾಡಿ ಹೂ ಕೊಂಡಮೇಲೆ ಗುಡಿಗೆ ಹೋಗಿ ಮನೆಗೆ ಹೋಗೋಣವೆನಿಸಿತು. ನಾ ಕೊಂಡ ಹೂ ಕೃಷ್ಣನಿಗೇ ಅರ್ಪಿಸಿ, ಇನ್ನೂ ಅಲಂಕಾರವಿಲ್ಲದ ಕೊಳಲ ಕೃಷ್ಣನ ದರ್ಶನಮಾಡಿ, ಹೊರಬಂದು, ಮುದ್ದು ಬೆಣ್ಣೆ ಕೃಷ್ಣನನ್ನೂ ಕಣ್ತುಂಬಿ ಕೊಂಡು, ‘ವಸುದೇವ ಸುತಂ ದೇವಂ...ಕೃಷ್ಣಂ ವಂದೇ ಜಗದ್ಗುರುಂ’ ಪಠಿಸುತ್ತಾ ಕಣ್ಣುಮಚ್ಚಿದ್ದೆ. ಹಿಂದೆಯಿಂದ ಬೆನ್ನು ತಟ್ಟಿ “ಚೆನ್ನಾಗಿದ್ದೀರಾ? ಎಷ್ಟು ದಿನವಾಯ್ತು ನಿಮ್ಮನ್ನ ನೋಡಿ...ಅಮ್ಮ ಚೆನಾಗಿದರಾ? ಈಗಲೂ ಅಲ್ಲೇ ಇದೀರಾ?” ಎಂದು ಸುಮಾರು ೮೦ ವಯಸ್ಸಿನ ಹೆಂಗಸು ಕೇಳಿದರು.
ಪರಿಚಯವೇ ಇಲ್ಲತ ಆಕೆಗೆ ಉತ್ತರಿಸಲು ತಡವರಿಸಿದೆ. ಅವರೇ ಮುಂದುವರಿಸುತ್ತಾ “ಯಾಕೆ ಮರ್ತೋದರಾ ಪೈಪ್ ಲೈನಿನಲ್ಲಿ ನಿಮ್ಮನೆ ಪಕ್ಕನೇ ಇದ್ವಲ್ಲಾ?” ಅಂದರು.
ನಾನು “ಇಲ್ಲ ನೀವು ತಪ್ಪು ತಿಳಿಕೊಂಡಿದೀರಿ.ನನ್ನದು ಆರ್ ಆರ್ ನಗರ ಮಲ್ಲೇಶ್ವರಂ ಅಲ್ಲ”
ಆಕೆ “ಹೌದಾ! ಏನಂದುಕೋಬೇಡ್ರಿ..” ಎಂದು ಮುಂದೆ ಹೋದ್ರು. ನಾನು ಮತ್ತೆ ಕೃಷ್ಣನ ಶ್ಲೋಕ ಮುಂದುವರಿಸುತ್ತಾ ಕಂಬದ ಬಳಿ ಕುಳಿತೆ. ಆಕೆನೂ ಬಂದು ಪಕ್ಕದಲ್ಲಿ ಕುಳಿತರು. ವಯಸ್ಸಾಗಿದ್ದರೂ ಸ್ವಲ್ಪವೂ ಕಷ್ಟ ಪಡದೆ ನೆಲದಲ್ಲಿ ಕುಳಿತು ಮತ್ತೆ ಎದ್ದು ಮೂರು ಪ್ರದಕ್ಷೆಣೆ ಹಾಕಿ ಸ್ವಲ್ಪವೂ ಆಯಸವಿಲ್ಲದೆ ಬಗ್ಗಿ ನಮಸ್ಕಾರ ಮಾಡಿದರು.
“ನಿಮಗೇ ವೈಯಾಲಿ ಕಾವಲ್ ಗೊತ್ತಾ?”
ನಾನು “ಇಲ್ಲಮ್ಮ .ಇಲ್ಲೇ ಸ್ವಲ್ಪ ಕೆಲಸಾ ಇತ್ತು ಬಂದಿದ್ದೆ”
ಆಕೆ “ನನಗೇ ಕುಕ್ಕರ್ ನ ಗ್ಯಾಸ್ಕೆಟ್ ಬೇಕಾಗಿತ್ತು ಎಲ್ಲಿ ಸಿಗುತ್ತೆ? ಹಂಗೆ ನಡಕೊಂಡು ಬಂದೆ ಇನ್ನೂ ಯಾರೂ ಅಂಗಡಿ ಬಾಗಿಲು ತೆಗೆದಿಲ್ಲ..ನೀವು ತಂದು ಕೊಡ್ತೀರಾ?” ಅಂತ ಹೇಳಿ ನೂರ ರೂಪಾಯಿ ಕೊಡಲು ಬಂದರು. ನಾನು “ ಇನ್ನೇನು ಎಂಟೂವರೆಯಾಯ್ತು ಅಂಗಡಿ ತೆಗೀತರೆ...ಎಷ್ಟು ಲೀಟರಿನ ಕುಕ್ಕರು? ಯಾವ ಕಂಪನಿದು?” ವಿಚಾರಿಸಿದೆ. ಆಕೆಗೆ ಅದೇನೂ ಗೊತ್ತಿಲ್ಲ. “ದೊಡ್ಡ ಕುಕ್ಕರು ನಮ್ಮನೇವ್ರು ಹುಬ್ಳಿ ಇಂದ ತಂದಿದ್ದು” ಅಂದರು.
ಸರಿ ಪಾಪ ಅಜ್ಜಿಗೆ ಗ್ಯಾಸ್ಕೆಟ್ ಕೊಡಿಸೇ ಹೋಗೋಣವೆಂದು ಅವರ ಜೊತೆ ಅಂಗಡಿ ಕಡೆ ಹೊರಟೆ. ದಾರಿಯಲ್ಲಿ ಅಜ್ಜಿ ನನಗೆ ಪ್ರತಿಕ್ರಯಿಸಲೂ ಅವಕಾಶ ಕೊಡದೆ ಅವರ ಕಥೆ ಹೇಳಲು ಶುರು ಮಾಡಿದರು.
“ ನಮ್ಮೆಜಮಾನ್ರು ಪಿಡಬ್ಯುಡಿಲೀ ಕೆಲಸದಲ್ಲಿದ್ರು. ಅವರು ಹೋಗಿ ಹತ್ತು ವರ್ಷ ಆಯ್ತು. ರಿಟೈರ್ಡ ಆದಮೇಲೆ ಸಂಗೀತ ಹೇಳ್ತಿದ್ದರು. ರಾಮ ಮಂದಿರದಲ್ಲಿ ದಿನಾ ಹಾಡೋರು. ಒಂದಿನ ಸುಮ್ಮನೆ ತಲೆನೋವು ಅಂತ ಮಲಗಿದೋರು. ಏಳಲೇ ಇಲ್ಲ. ಅದೃಷ್ಟವಂತರು. ಸುಖವಾದ ಸಾವು. ಪೈಪ್ಲೈನ್ನಲ್ಲಿ ಸ್ವಂತ ಮನೆ ಇತ್ತು. ನನ್ನ ಎರಡನೇ ಮಗ ಮಾರಿ ನನಗೆ ನಾಲಕ್ಕು ಕೋಟಿ ಕೊಟ್ಟು ಅಪಾರ್ಟಮೆಂಟ್ ಕೊಡಿಸಿದ್ದಾನೆ. ಇಬ್ಬರನ್ನ ನೋಡ್ಕಳಾಕೆ ಇಟ್ಟಿದಾನೆ. ತುಂಬಾ ಬುದ್ಧಿವಂತ..ಟಾಟಾ ಇನ್ಸಟಿಟ್ಯೂಟ್ನಲ್ಲಿದ್ದ...ಆಮೇಲೆ ದುಬೈ, ಜೆರ್ಮನಿಗೆಲ್ಲಾ ಹೋಗಿ ಈಗ ಏಳೆಂಟ್ ವರ್ಷದಿಂದ ಅಮೆರಿಕ. ತುಂಬ ಕೆಲಸ ಅವನಿಗೆ ಅವರಪ್ಪ ಹೋದಾಗಲೂ ಬರಾಕಾಗ್ಲಿಲ್ಲ..ಆಗ ಜರ್ಮನಿಲಿದ್ದ.”
ಗುರುತು ಪರಿಚಯ ಇಲ್ಲದ ಹೆಂಗಸು ಇಷ್ಚು ಕಥೆ ಹೇಳುತ್ತಿದ್ದರೆ ಕೇಳುವ ನನಗೆ ಬಲು ಮುಜುಗರವಾಯ್ತು. ಅಂಗಡಿ ಬಾಗಿಲು ತೆಗೆದರೆ ಗ್ಯಾಸ್ಕೆಟ್ಟು ಕೊಡಿಸಿ ಕಳಚಿ ಕೊಳ್ಳುವ ಹುನ್ನಾರದಲ್ಲಿದ್ದೆ. ಆಕೆಯೊಂದಿಗೆ ಮುಂದುವರೆದ ಸಂಭಾಷಣೆಯಲ್ಲಿ “ಅವರ ಜೊತೆಯಲ್ಲೇ ಇದ್ದ ದೊಡ್ಡಮಗನ ಅಕಾಲಿಕ ಮರಣ... ಸೊಸೆ ತವರು ಸೇರಿದ್ದು...ಇನ್ನು ಕಿರಿಮಗ ಅಮೆರಿಕಾದಲ್ಲಿಯೇ ಮದುವೆಯಾಗಿ ಅಲ್ಲೇ ನಲೆಸಿರುವುದು..ಈಕೆಯ ಕೇರ್ ಟೇಕರ್ಸ ೩೪ಗಂಟೆಯೂ ಫೋನಿನಲ್ಲಿ ಮುಳುಗಿ ...ವಾರದ ಹಿಂದೆ ಮಾಡಿದ ತಿಂಡಿಯನ್ನು ಬಿಸಿ ಮಾಡಿ ಮಾಡಿ ಬಡಿಸುತ್ತಾ...ಅವರು ಮಾತ್ರ ಪೀಜಾಗಳನ್ನು ತರಿಸಿ ತಿಂದು ತೇಗುತ್ತಿರವುದು...ಈಕೆಗೆ ರೋಸಿ ಹೋಗಿ ತಾನೆ ಅಡಿಗೆ ಮಾಡಿಕೂಳ್ಳಲು ಕುಕ್ಕರ್ ತೆಗೆದರೆ..ಅದರ ಗ್ಯಾಸ್ಕೆಟ್ಟು ಇಲ್ಲವಾಗಿರುವುದು...ಹೇಗೋ ಅವರಿಬ್ಬಕ ಕಣ್ ತಪ್ಪಿಸಿಕೊಂಡು ಬಂದ ಮುದುಕಿಗೆ ಈಗ ಮನೆ ದಾರಿ ಮರೆತು ಹೋಗಿರುವುದು” ತಿಳಿಯಿತು. ಸಂಸಾರದ ವಿಷಯವೆಲ್ಲಾ ಕೂಲಂಕುಶವಾಗಿ ಹೇಳಿದ ಅಜ್ಜಿ ಮನೆಯ ದಾರಿ ಮರೆತು ಹೋಗಿರುವುದು ನನಗೆ ನಿಜಕ್ಕೂ ಆಶ್ಚರ್ಯವಾಯಿತು.
ಅವರಷ್ಟು ಹೇಳಿದರೆ ನಾನು ಇಷ್ಟಾದರೂ ಹೇಳ್ಬೇಡವೇ ಅನಿಸಿ “ಅದಿಕ್ಕೆ ನೀವು ಮಗನ ಜೊತೇಲೇ ಹೋಗಬೇಕಿತ್ತು. ಎಷ್ಟಾದರೂ ಆಳು ಮಾಡೋದು ಹಾಳು..ದುಡ್ಡಿಗೋಸ್ಕರ ಕೆಲಸ ಮಾಡೋರು ಅಷ್ಟೆ. ನಮ್ಮರೇ ವಾಸಿ” ಅಂದೆ. ಅಜ್ಜಿಗೆ ನನ್ನ ಮಾತು ಸ್ವಲ್ಪ ರೇಗಿಸಿದಂತಿತ್ತು “ ಯಾರೆ ನಮ್ಮವರು? ನಮಗೆ ನಾವೇ..ಹೊಟ್ಟೆಗುಟ್ಟಿದ ಮಕ್ಕಳೇ ಮಾಡಲ್ಲ...ದುಡ್ಡು ಕೊಟ್ಟು ಮಾಡಿಸ್ತಾರೆ...ಇನ್ನು ನನಗ್ಯಾಕ್ ಬೇಕು ಅವರ ಹಂಗು. ನಮ್ಮನೇವ್ರಿಗೆ ಬಂದಂತ ಸಾವು ನನಗೂ ಬಂದ್ರೆ ಸಾಕು. ನಮ್ಮಿಂದ ನಮ್ಮಕ್ಕಳಿಗೆ ತೊಂದರೆ ಯಾಗದಿದ್ದರೆ ಸಾಕು ಇದುವರೆಗೂ ಯಾವ ಖಾಯಿಲೆ ಇಲ್ಲ...ಈ ಮರೆವು ಬಿಟ್ಟು. ಹಾಳಾದ್ದು ಮರೆವು. ನಮ್ಮೋರನ್ನೆಲ್ಲಾ ಮರೆಯೋಣ ಅಂದರೆ ಆಗ್ತಿಲ್ಲ. ಬರೋದು ಬಂತು ಬೇಡದ್ದಾದರೂ ಮರೆಸಬಾರದಾ ...ಆ ರೋಗಕ್ಕೂ ಒಂದು ರೋಗ” ಅಂತ ಕಣ್ಣೀರು ಒರೆಸಿದರು.
ನನ್ನ ಮನಸೀಗ ಗ್ಯಾಸ್ಕೆಟ್ಟನ್ನು ಬಿಟ್ಟು ಅಜ್ಜಿಯನ್ನು ಮನೆೆ ಸೇರಿಸುವ ಬಗೆಯನ್ನು ಅರಸತೊಡಗಿತು. ಸುಮಾರು ಒಂಭತ್ತುವರೆ ಗಂಟೆಯಾಗಿದೆ. ಹನ್ನೊಂದನೇ ಕ್ರಾಸಿನ ಮೂಲೆಯಲ್ಲೊಬ್ಬ ಟ್ರಾಫಿಕ್ ಪೊಲೀಸ್ ಕಾಣಿಸಿದ. ಸರಿ ತಕ್ಷಣವೇ ಹೋಗಿ ಅವರಿಗೆ ಅಜ್ಜಿಯ ಕಥೆ ವರದಿ ಮಾಡಿ, ಆಕೆಯನ್ನು ಮನೆ ಸೇರಿಸಲು ಕೋರಿದೆ. ಆಕೆಗೆ ತಿಂಡಿ ಕೊಡಿಸಿ ಕರಕೊಂಡುಬನ್ನಿ ನಾನು ಮನೆಗೆ ಬಿಡ್ತೀನಿ ಅಂದರು. ಮಯ್ಯಾಸ್ ನಲ್ಲಿ ಇಬ್ಬರೂ ತಿಂಡಿ ತಿಂದೆವು. ನಾನು ಹತ್ತು ಮತ್ತು ಹನ್ನೆರಡು ಲೀಟರಿನ ಕುಕ್ಕರ್ ನ ಗ್ಯಾಸ್ಕೆಟ್ಟು ತಂದು ಕೊಟ್ಟೆ. ಆಕೆ ಕೈಲಿದ್ದ ನೂರು ರೂಪಾಯಿ ಕೊಟ್ಟು ನನಗೆ ಹೂ ಕೂಡಿಸಿ, ನನ್ನ ಕೈ ಕುಲುಕಿ “ಹುಷಾರಾಗಿ ಮನೆಗೆ ಹೋಗಿ” ಎಂದು ಹೇಳಿದರು. ಪೊಲೀಸ್ ಆಟೋ ಕರೆದು ಆಕೆಯನ್ನು ವೈಯಾಲಿ ಕಾವಲಿನ ಅಪಾರ್ಟಮೆಂಟ್ ಕಡೆ ಕರೆದು ಕೊಂಡು ಹೋದರು. ನಾನೂ ಬಸ್ ಹಿಡಿಯಲು ಮಾರ್ಗೋಸ ರಸ್ತೆ ಕಡೆ ನಡೆದೆ. ನನ್ನ ಮನಸ್ಸಾಗಲೇ ನನ್ನ ಮುಪ್ಪಿನ ದಿನಕ್ಕೆ ಲಗ್ಗೆ ಹಾಕಿತ್ತು. ಚಿಕ್ಕಂದಿನಲ್ಲಿ ಅಮಿತವಾದ ಆನಂದ ಕೊಡುವ ಮಕ್ಕಳು ಹೀಗೆ ಮೂರ್ಖರಾಗುತ್ತಾರೆಂದರೆ ನಂಬದಾದೆ. ತಪ್ಪು-ಸರಿಗಳ ತರ್ಕ ನನ್ನನ್ನು ಗೊಂದಲಗೊಳಿಸಿತು. ತಕ್ಷಣಕ್ಕೆ ಯಾವುದೋ ಟಿವಿ ಶೋನಲ್ಲಿ ನಮ್ಮ ಭಟ್ಟರು ಹೇಳಿದ ಮಾತು ಜ್ಞಾಪಕ ಬಂತು “ಚಿಕ್ಕವರಿರುವಾಗ ಮಕ್ಕಳಾಗಿರ್ತಾರೆ ದೊಡ್ಡೋರಾಗ್ತಾ ಕಳ್ಳನ್ಮಕ್ಕಳಾಗ್ತಾರೆ” ಅಂತ. ನನ್ನ ತುಟಿಯ ಮೇಲೆ ನಗೆ ಮೂಡಿದರೂ ಮನಸು ಮಾತ್ರ ವಿಷಾದದಲ್ಲೇ ಮುಳುಗಿತ್ತು.
Today's reality
ReplyDelete