Sunday, May 9, 2021

ಈ ಅಮ್ಮಂದಿರ ದಿನ….

 ಡಿಸೆಂಬರ್ ೨೪ ೨೦೧೦ ನನ್ನ ಮಗ ಹುಟ್ಟಿದ್ದು. ವೈದ್ಯರ ಪ್ರಕಾರ ಇನ್ನೂ ಎರಡುವಾರ ಗರ್ಭಾವಾಸದಲ್ಲಿರ ಬೇಕಾಗಿದ್ದವನು. ಸಾರಿ  ಮೊದಲ ಬಸಿರಿನಂತಲ್ಲವೇ ಅಲ್ಲ. ಮೊದಲ ತಿಂಗಳಿನಿಂದಲೂ ಬಲು ಆತಂಕ. ಅಲ್ಲಿಯವರೆಗೂ ಒಂದೂ ಆರೋಗ್ಯದ ಸಮಸ್ಯೆಯೇ ಇಲ್ಲದ ನನಗೆ ಇದ್ದಕ್ಕಿದ್ದಂತೆ ಕೈಕಾಲುಗಳ ಕೀಲುಗಳಲ್ಲಿ ನೋವು ಕಾಣಿಸಿ ಕೊಂಡಿತು. ಹಾಸಿಗೆಯದೋ, ದಿಂಬಿನದೋ, ಹೊಸ ಚಪ್ಪಲಿಯದೋ, ಊಟದ್ದೋಯಾವುದರದೋ ಏರು ಪೇರಾಗಿದೆ. ಮಲಗಿ ಎದ್ದರೆ ಸರಿ ಹೋಗುವುದೆಂಬ ಭ್ರಮೆಯಲ್ಲೇ ಮೂರು ತಿಂಗಳು ಕಳೆದೆ. ದಿನ ದಿನಕ್ಕೆ ಹೊಸ ನೋವುಗಳು ಬಂತಷ್ಟೆ. ಒಮ್ಮೆ ಪಾದದ ಕೀಲಿನಲ್ಲಿ ಹೆಜ್ಜೆ ಇಡಲು ಕೂಡ ಸಾಧ್ಯವಾಗದೆ ಎಲ್ಲೋ ಉಳುಕಿಸಿಕೊಂಡಿರಬಹುದೆಂದು ನೆಲಮಂಗಲಕ್ಕೆ ಹೋಗಿ ಕಾಲಿಗೆ ಕಟ್ಟು ಕಟ್ಟಿಸಿ ಕೊಂಡು ಬಂದೆವು. ಹೀಗೆ ಮೂರು ವಾರ ಕಟ್ಟು ಕಟ್ಟಿಸಿದೆ. ಅವರು ಕೊಟ್ಟ ಎಣ್ಣೆ ಹಚ್ಚಿ ಪತ್ಯ ಪಾಲಿಸಿದೆ. ನೋವಿಗೇನು ಕರುಣೆ ಬರಲಿಲ್ಲ. ಡಾಕ್ಟರನ್ನೇ ಕೇಳೋಣವೆಂದು ನನ್ನನ್ನು ಪ್ರತಿ ತಿಂಗಳೂ ಪರೀಕ್ಷಿಸುತ್ತಿದ್ದ ತಜ್ಞೆ ಬಳಿ ನೋವುಗಳ ಕಂತೆ ಬಿಚ್ಚಿದೆ. ಆಕೆ ಯಾರಾದರೂ ಸಂಧಿವಾತ ತಜ್ಞರನ್ನು ಕಾಣಲು ಹೇಳಿದರು. ನನಗಾಗ ಅರ್ಥವಾಗಿರಲಿಲ್ಲ. ಅದರ ಪಾಡಿಗದು ಹೋಗುತ್ತೆ  ಸಿಕ್ಕಿದ ಮಾತ್ರೆಗಳೆಲ್ಲ ತಿಂದರೆ ಮಗುವಿಗೆ ತೊಂದರೆ ಯಾಗಬಹುದು ಎನ್ನುವ ತರ್ಕ ದಿಂದ ನೋವೆ ನನ್ನ ಆಯ್ಕೆಯಾಯಿತು. ಐದುತಿಂಗಳು ತುಂಬುವಷ್ಟರಲ್ಲಿ ಕೈಬೆರಳಿಗೂ ನೋವು ವ್ಯಾಪಿಸಿತು. ನನ್ನ ಕೆಲಸ ನನಗೆ ಮಾಡಿಕೊಳ್ಳಲೂ ಕಷ್ಟ. ನನ್ನ ತಂಗಿಯ ಬಾಣಂತನಕ್ಕೆಂದು ಊರಿಂದ ಬಂದಿದ್ದ ಅಮ್ಮನ ಕೈಲಿ ಮತ್ತೆ ಮಗುವಾದೆ

  ಹೆರಿಗೆಯಾದರೆ ಎಲ್ಲಾ ನೋವು ಹೋಗುತ್ತೆ ಎನ್ನುವ ಮತ್ತೊಂದು ಭ್ರಮೆ. ಹೀಗೆ ಏಳು ತಿಂಗಳು ತುಂಬಿತು. ಅಮ್ಮನ ರಜೆಯೂ ಮುಂದುವರಿಯಿತು. ಸೀಮಂತ ಶಾಸ್ತ್ರವಾಯಿತು. ನಂತರ ಶೃಂಗೇರಿಗೆ ಹೋಗಿ ಬಂದರೆ ಎಲ್ಲ ಸರಿಹೋಗುತ್ತೆ ಎನ್ನುವ ನಂಬಿಕೆಯಿಂದ ಶೃಂಗೇರಿಗೆ ಗುರುಗಳ ಆಶೀರ್ವಾದಕ್ಕಾಗಿ ಹೋದೆವು. ಗುರುಗಳ ದರ್ಶನ ಮಾಡಲು ದೇವಸ್ಥಾನದಿಂದ ತೋಟದೊಳಗೆ ಚಪ್ಪಲಿ ಇಲ್ಲದೆ  ನಡೆಯ ಬೇಕು..ಹೆಜ್ಜೆ ಹೆಜ್ಜೆಗೂ ಕಾಡಿದ ನೋವು ಭಯಂಕರ. ಆದರೆ ಅಂದು ಗುರುಗಳ ದರ್ಶನ ಅಲ್ಲಿರಲಿಲ್ಲ. ದೇವಾಲಯ ಆವರಣದಲ್ಲೇ ಇದ್ದ ಗುರು ಭವನದಲ್ಲಿತ್ತು. ಮತ್ತೆ ಕುಂಟುತ್ತಾ ವಾಪಾಸು ಬಂದು ಗುರು ಭವನದ ಮೊದಲ ಮಹಡಿಯ ಮೇಲೆ ದರ್ಶನಕ್ಕಾಗಿ ನಿಂತೆವು. ನಿಲ್ಲಲಾರದ ಕಾಲು ನೋವು. ಯಾರೋ ಭಜನ ಮಂಡಲಿಯ ಹೆಂಗಸರು ಹಾಡುತ್ತಾ ತಲ್ಲೀನರಾಗಿದ್ದಾರೆ. ಸಾಲು ಮುಂದುವರೆಯುತ್ತಲೇ ಇಲ್ಲ. ನನ್ನನ್ನ್ನುಮೆಟ್ಟಿಲ ಮೇಲೆ ಕೂರಿಸಿ ನನ್ನ ಪತಿ ಸಾಲಿನಲ್ಲಿ ಮುಂದುವರೆದರು . ಸುಮಾರು ಒಂದು ಗಂಟೆಯ ನಂತರ ನಮ್ಮ ಸರದಿ ಬಂತು. ನಮ್ಮ ಅದೃಷ್ಟವೆಂಬಂತೆ ಗುರುಗಳು ನಮ್ಮ ಕುಶಲೋಪರಿ ವಿಚಾರಿಸಿದರು. ಸೀಮಂತದ ನಂತರ ನಿಮ್ಮ ಆಶೀರ್ವಾದ ಕೋರಿ ಬಂದಿದ್ದೇವೆಂದು ನನ್ನ ಪತಿ ಅರಿಕೆ ಮಾಡಿದರು. “ಸುಖ ಪ್ರಸವವಾಗಲಿಎಂದು ಹೇಳಿ ಹಣ್ಣು ಅಕ್ಷತೆ ಕೊಟ್ಟರು . ಕ್ಷಣ ನೋವುಗಳೆಲ್ಲ ಬಗೆಹರಿದು  ಹೋಯಿತೆನ್ನುವ ಪರಮ ಸಂತೃಪ್ತಿಯಾಯಿತು. ಪ್ರವರ ಹೇಳುತ್ತಾ ನನ್ನ ಪತಿ ಮತ್ತು ತಮ್ಮ ನಮಸ್ಕಾರ ಮಾಡಿದರು ಜೊತೆಯಲ್ಲಿಯೇ ನಾನೂ ನನ್ನ ಮಗಳು ನಮಸ್ಕಾರ ಮಾಡಿದೆವು. ಬಗ್ಗಿ ನಮಸ್ಕರಿಸಿ ಏಳುವಾಗ ನನಗಾದ ದುಸ್ತರ ಅಷ್ಟಿಷ್ಟಲ್ಲದೇವರಿಗೆ ನಮಸ್ಕಾರ ಮಾಡಲೂ ಆಗದ ದುರ್ದೈವಿಯಾದೆನೆಂದು ಕಣ್ಣೀರು ಸುರಿಯಿತು

   ಎಂಟು ತಿಂಗಳು ತುಂಬಿ ಒಂಭತ್ತಕ್ಕೆ ಬಂದಾಗ ಹಿಂದಿನ ತಿಂಗಳುಗಳಿಗೆ  ಹೋಲಿಸಿದರೆ ನೋವುಗಳು ಕಡಿಮೆಯಾದಂತಿತ್ತು. ಅಥವಾ ಆವೇಳೆಗಾಗಲೇ ನೋವುಗಳು ರೂಢಿಯಾಗಿ ಹೋಗಿತ್ತೋ?. ಆಗಾಗ ಹೊರಗಡೆ ಹೋಗುತ್ತಿದ್ದೆ. ಮಗಳೊಂದಿಗೆ ಆಡುತ್ತಿದ್ದೆ. ಅಡಿಗೆ ಮನೆಯಲ್ಲೂ ಕೈ ಆಡಿಸಿದೆ. ನನ್ನ ತಂಗಿ ಮಗನ ನಾಮಕರಣದಲ್ಲಿ ಸುಮಾರು ಓಡಾಡಿದ್ದೆ. ಜನವರಿ ಹತ್ತಕ್ಕೆ ಹೆರಿಗೆಯಾಗುವುದೆಂದು ವೈದ್ಯರು ನಿರೀಕ್ಷಿಸಿದ್ದರು. ತನ್ನ ರಜೆಗೆ ಹೊಸ ಅರ್ಜಿ ನೀಡಲು ಅಮ್ಮ ಊರಿಗೆ ಹೋಗಿದ್ದಳು.

ಶುಕ್ರವಾರ ಬೆಳಿಗ್ಗೆಯೇ ಸೊಂಟದಲ್ಲಿ ನೋವು ಕಾಣಿಸಲಾರಂಭಿಸಿತು. ಜೀರಿಗೆ  ಕಶಾಯ ಮಾಡಿಸಿಕೊಂಡು ಕುಡಿದೆ. ಕಶಾಯ ಕುಡಿದ ಮೇಲೂ ನೋವು ಮತ್ತೆ ಮತ್ತೆ ಬರಲಾರಂಭಿಸಿತು. ಸರಿ ಡಾಕ್ಟರ್ ಬಳಿಗೇ ಹೋಗೋಣವೆಂದು ತಿಂಡಿ ತಿಂದು ಹೊರಟೆವು. ಕ್ರಿಸ್ಮಸ್ ರಜೆಗೆಂದು ನಮ್ಮನೆಯಲ್ಲಿ ಮಕ್ಕಳ ದಂಡೆೇ ಬಂದಿತ್ತು. ಎಲ್ಲರಿಗೂ ಇಂದೇ ಮಗು ಹುಟ್ಟುವುದೆಂಬ ಕುತೂಹಲ.ಆದರೆ ನನಗೆ ನಂಬಿಕೆ ಇರಲಿಲ್ಲ. ಚೆಕಪ್ ಮಾಡಿಸಿ ಕೊಂಡು ಮನೆಗೆ ಬರುವ ಭರವಸೆಯಲ್ಲೇ ಇದ್ದೆ. ಮಧ್ಯಾನ್ಹ ಸುಮಾರು ಹನ್ನೆರಡು ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದೆವು. ವೈದ್ಯರು ತಪಾಸಣೆ ಮಾಡಿ ಇಂದೇ ಪ್ರಸವವಾಗುತ್ತೆ ಅಡ್ಮಿಟ್ ಮಾಡಿ ಎಂದರು. ನಾನು ಒಪ್ಪದೆಮನೆ ಹತ್ತಿರವೇ ಇದೆ. ನೋವು ಜೋರಾದರೆ ಬರುವೆನೆಂದು ಹೇಳಿ ಮನೆಗೆ ಹಿಂತಿರುಗಿದೆ. ಮಧ್ಯಾನ್ಹ ಊಟ ಮಾಡಿ ಮಲಗಿದೆ. ಮತ್ತೆ ನೋವೇನು ಕಾಣಿಸಲಿಲ್ಲ. ರಾತ್ರಿ ಮನೆಯವರೆಲ್ಲಾ ಸೇರಿ ಅವರೇಕಾಳು ನೆನಸಿ ಬಲವಂತದಿಂದ ಹಿಸುಕಿ ಅದರ ತವ್ವೆ ಜೊತೆಗೆ  ಚಪಾತಿ ಮಾಡಿ ಊಟ ತಯಾರು ಮಾಡಿದರು. ನನಗೆ ಅಂದೇ ಹೆರಿಗೆಯಾದರೆ ಮತ್ತೆ ಆರು ತಿಂಗಳು ಅವರೆಕಾಳು ತಿನ್ನದಂತಾಗುವೆನೆಂಬ ಕಳಕಳಿ ಅವರಿಗೆ. (ವಿಪರ್ಯಾಸವೆಂದರೆ ಮುಂದುವರೆದ ಸಂಧಿವಾತದ ಕೃಪೆಯಿಂದ ಇಂದಿಗೂ ಅವರೆಕಾಳು ತಿನ್ನದಿರುವ ಪತ್ಯ.) ಅತ್ತ ಅಡಿಗೆ ಮನೆಯಲ್ಲಿ ಹಿಸುಕಿದವರೆ ತವ್ವೆಯು ಘಮಘಮಿಸುತ್ತಿದೆನನಗೆ ಮತ್ತೆ ಸೊಂಟದಲ್ಲಿ ನೋವು ೧೦ ನಿಮಿಷಕ್ಕೊಮ್ಮೆ ಬಂದು ಹೋಗಲು ಪ್ರಾರಂಭಿಯಿತು. ನನ್ನ ಪತಿ ರಜೆಗೆ ಬಂದ ಮಕ್ಕಳೊಂದಿಗೆ ನನ್ನ ಮಗಳನ್ನು ಸೇರಿಸಿ ಕೊಂಡು ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದರು. ಆಸ್ಪತ್ರೆಗೆ ಹೋಗಲು ತಯಾರಾಗಿ ನೂರು ಫೋನ್ ಮಾಡಿದರೂ ಕಡೆಯಿಂದ ಉತ್ತರವಿಲ್ಲ. ಅವರಿಲ್ಲದೆ ಆಸ್ಪತ್ರೆಗೆ ಹೋಗಲು ನನಗೆ ಧೈರ್ಯವಿಲ್ಲಆಗಾಗಲೇ ನೋವು ಐದು ನಿಮಿಷಕ್ಕೊಮ್ಮೆ ಬರತೊಡಗಿತ್ತು. ಕೊನೆಗೆ ಬೇಗ ಊಟ ಮಾಡು ಆಟೋದಲ್ಲೇ ಹೋಗೋಣವೆಂದರು. ಗಬಗಬ ಚಪಾತಿ-ತವ್ವೆ ತಿಂದೆ. ನನ್ನ ಚಿಕ್ಕಮ್ಮ ಬೇಗನೆ ಸೊಂಟಕ್ಕೆ ಬಿಸಿಬಿಸಿ ನೀರು ಹಾಕಿದರು. ಹಳೆ ನೈಟಿ ತೊಡಿಸಿದರು. ಮತ್ತೆ ಜೀರಿಗೆ ಕಶಾಯ ಮಾಡಿಕೂಟ್ಟರು. ಅಷ್ಚರಲ್ಲಿ ಹೊರಗಡೆ ಕಾರಿನ ಶಬ್ದ ಮತ್ತು ಮಕ್ಕಳ ಗಲಾಟೆ ಕೇಳಿಸಿತು. ತಕ್ಷಣವೇ ಆಸ್ಪತ್ರೆಗೆ ಹೋದರೆ.. ಸೀದಾ ಲೇಬರ್ ವಾರ್ಡಿಗೆ ಕರೆದೊಯ್ದರು. ಹೋಗಿ ಹತ್ತು ನಿಮಿಷಕ್ಕೆ ಅಭಿ ಹುಟ್ಟಿದ. ಗುರುಗಳ ಆಶೀರ್ವಚನದಂತೆ ಸುಖ ಪ್ರಸವವಾಯ್ತು. ಹೆರಿಗೆ ನೋವಿರುವಲ್ಲಿ ಮತ್ತಿತರ ನೋವಿಗೆಲ್ಲಿ ಉಸಿರು? ಹೆರಿಗೆಯಾದ ಎರಡು ಗಂಟೆಯ ನಂತರ ವಾರ್ಡಿಗೆ ಕಳಿಸಿದರು. ರಾತ್ರಿ ಹನ್ನೆರಡಾದರೂ ಅಪ್ಪನೊಂದಿಗೆ ನನಗಾಗಿ ಕಾದಿದ್ದ ಮಗಳನ್ನು ಮುದ್ದಿಸಿದೆ. ಮಗನನ್ನು ತಂದು ಕೊಟ್ಟರು. ಅವನು ಕಣ್ಣು ಮುಚ್ಚಿಕೊಂಡೇ ತುಟಿ ಹಿಗ್ಗಿಸಿ ಮಂದಹಾಸ ಚೆಲ್ಲಿದ. ಅವನ ಬಲಗೆನ್ನೆ ಮೇಲೆ ಮೂಡಿದ ಗುಳಿ ನನ್ನ ನೋವನ್ನೆಲ್ಲಾ ಸದ್ಯಕ್ಕೆ ನುಂಗಿತ್ತು

ಈಗ ಇವನು ಕೊಡುವ ಮದರ್ಸ ಡೇ ಚೀಟಿಗಳ ಓದಿ ಮುಗುಳ್ನಗುವ ಸರದಿ ನನ್ನದು. ತಾಯೊಲ್ಮೆಯ ಪ್ರಾರ್ಥನೆಗೆ ಸದಾ ಜಯವಾಗಲಿ. ಎಲ್ಲರಿಗೂ ಈ ಅಮ್ಮಂದಿರ ದಿನದ ಶುಭಾಷಯಗಳು.

No comments:

Post a Comment