ನೋಡುವವರಿಗೆ ಇವರಿಗೆ ಮನೆಯಲ್ಲಿ ಕಾಲು ನಿಲ್ಲುವುದಿಲ್ಲವೆಂಬ ಅನಿಸಿಕೆ ಬರುವಷ್ಟು, ಈ ವರ್ಷದಲ್ಲಿ ಪ್ರತಿ ತಿಂಗಳೂ ಒಂದಲ್ಲೊಂದು ಪ್ರಯಾಣ ಒದಗಿ ಬಂದಿದೆ. ಸ್ವಕಾರ್ಯವಾಗಬೇಕೆಂದರೆ, ಹತ್ತಿರದ ಸ್ವಾಮಿಯನ್ನು ಬಿಟ್ಟೇವೆಯೇ?
ಮಂಗಳೂರಿನಲ್ಲಿದ್ದ ಮಗಳನ್ನು ನೋಡಲು ಹೋದಾಗಲೆಲ್ಲಾ ದಕ್ಷಿಣ ಕನ್ನಡದ ದೇವರುಗಳನ್ನೆಲ್ಲಾ ತೃಪ್ತಿಯಾಗುವಷ್ಟು ಬಾರಿ ದರ್ಶನ ಮಾಡಿದ್ದೇವೆ. ಅದೇನೋ ಮಗಳ ನೆಪದಲ್ಲೋ (ಜೊತೆಯಲ್ಲೋ) ದೇವರಿಗೆ ಹೋದರೆ ಬಹು ಬೇಗ ದರ್ಶನವಾಗಿದೆ. ನನ್ನಿಷ್ಟ ದೇವರು ಧರ್ಮಸ್ಥಳದ ಮಂಜುನಾಥನನ್ನೂ ಕೂಡ ಅರ್ಧಗಂಟೆಯೊಳಗೆ ದರ್ಶನ ಮಾಡಿದ್ದಿದೆ. ಈ ಬಾರಿಯೂ ಕಾಮಾಕ್ಷಿಯ ಶೀಘ್ರ ದರ್ಶನ ಅದಕ್ಕೆ ಸಾಕ್ಷಿ.
ಮಗಳ ಕಾಲೇಜಿನ ಅಡ್ಮಿಷನ್ಗಾಗಿ ಚನೈಗೆ ಹೊರಟ ಸವಾರಿ, ಕೃಷ್ಣಗಿರಿದಾಟುತ್ತಿದ್ದಂತೆ..ಹೇಗೂ ನಾವು ತಲುಪುವ ವೇಳೆಗೆ ಕಾಲೇಜಿನ ಸಮಯ ಮೀರುವುದು…ನಾಳೆ ಕಾಲೇಜಿಗೆ ಹೋಗಲು ಇಂದೇಯೇಕೆ ತಲುಪಬೇಕು….ವಾಸ್ತವವಾಗಿ ಕಾಲೇಜಿಗೆ ಚನೈಗಿಂತ ಕಾಂಚಿಪುರವೇ ಹತ್ತಿರ, ಕಂಚಿಯಲ್ಲೇ ಉಳಿದು ಸಂಜೆ ಕಾಮಾಕ್ಷಮ್ಮನ ದರ್ಶನ ಮಾಡಿ ಬೆಳಗ್ಗೆ ಏಕಾಂಬರನಾಥನನ್ನು ನೋಡಿಯೇ ಹೋದರಾಯಿತೆಂಬ ಅಲೋಚನೆ ತಲೆಯಲ್ಲಿ ಮಿಸುಕಿತು. (ಬೆಳಗ್ಗೆ ತರಂಗದಲ್ಲಿ ಓದಿದ್ದ ನವರಾತ್ರಿ ವಿಷೇಶ ಲೇಖನದಲ್ಲಿ ಕಾಮಾಕ್ಷಿಯೇ ತುಂಬಿದ್ದಳು). ದೇವಸ್ಥಾನದ ಮಾತಿಗೆ ಬಂದರೆ ನನಗಿಂತ ನನ್ನ ಪತಿಯೇ ಮುಂದು. ಹಾಗಾಗಿ ಮರು ಮಾತಿಲ್ಲದೆ ಕಾರು ಕಾಂಚಿಪುರದ ಬೈಪಾಸ್ ತಪ್ಪಿಸಿ ಪುರ ಪ್ರವೇಶ ಮಾಡಿತು.
ಕಾಂಚಿಪುರದ ಪ್ರತಿ ಭೇಟಿಯಲ್ಲಿಯೂ ನಮಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕ್ಷಣಾರ್ಧದ ದರ್ಶನವೇ ಭಾಗ್ಯ. ಈಗಲೂ ಅದೇ ನಿರೀಕ್ಷೆಯಲ್ಲಿ ಮಗಳನ್ನು ಸಾಲಿನಲ್ಲಿ ಗೊಣಗದೆ ನಿಲ್ಲಲು ಮಾನಸಿಕವಾಗಿ ಸಿದ್ಧಮಾಡಿದ್ದೆ. ನಾನು ಕೂಡ ನೋಯುವ ನನ್ನ ಕಾಲ್ಗಳಿಗೆ ಸಹಕರಿಸುವಂತೆ ಮನವಿ ಮಾಡಿದ್ದೆ. ದೇವಾಲಯದ ಬಾಗಿಲಲ್ಲಿ ಕೆಲವೇ ಕೆಲವು ಚಪ್ಪಲಿ ಜೊತೆಗಳನ್ನು ನೋಡಿ ಮನಸ್ಸಿಗೇನೋ ಊಹೆ. ಊಹೆಯೇನೂ ಸುಳ್ಳಾಗಲಿಲ್ಲ. ಧರ್ಮದರ್ಶದ ಸಾಲಿನಲ್ಲಿ ಧಡಧಡ ಹೋದರೇ ಒಂದೇ ನಿಮಿಷದಲ್ಲಿ ಸೀದಾ ಅಮ್ಮನವರ ಮುಂದೆ!!
ಸಂಪೂರ್ಣ ಹರಿಶಿನದ ಅಲಂಕಾರ. ಮುಖವಂತೂ ಶಂಕರಾಚಾರ್ಯರ ಲಲಿತಾ ಪಂಚಕದಲ್ಲಿನ ಮೊದಲ ಶ್ಲೋಕದ ತದ್ರೂಪ.
ಪ್ರಾತಃ ಸ್ಮರಾಮಿ ಲಲಿತಾವದನಾರವಿಂದಂ
ಬಿಂಬಾಧರಂ ಪೃಥುಲಮೌಕ್ತಿಕಶೋಭಿನಾಸಮ್ |
ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂ
ಮಂದಸ್ಮಿತಂ ಮೃಗಮದೋಜ್ಜ್ವಲಫಾಲದೇಶಮ್॥
ಈ ಎಲ್ಲವನ್ನೂ ಮತ್ತೆ ಮತ್ತೆ ಕಣ್ತುಂಬಿ ಕೊಂಡೆ.
ಮುಂದೆ ಹೋಗಿ ಎನ್ನವ ದೇವಸ್ಥಾನದ ಸಿಬ್ಬಂದಿಯ ಕೂಗು ಕಿವಿಗೆ ಹಾಕಿಕೊಳ್ಳದೆೇ!!
ಕಮಲದ ಮುಖ, ಕೆಂಪನೆಯ ತುಟಿ. ಮಾಣಿಕ್ಯದ ಮೂಗುತಿ, ಕಿವಿಯವರೆಗೂ ಹಿಗ್ಗಿರುವ ಕಣ್ಣುಗಳು, ಕಿವಿಯಲ್ಲಿನ ಮಣಿಕುಂಡಲಗಳು…ಹರಿಶಿಣದ ಹಣೆಯಮೇಲೆ ವಿಭೂತಿ(ಕಸ್ತೂರಿಯದ್ದೇ ಇರಬೇಕು..!!) ಎಲ್ಲಕ್ಕಿಂತ ಹೆಚ್ಚಾಗಿ ತುಟಿಯ ಮೇಲಿನ ಆ ಕಿರುನಗು(ಮಂದ ಸ್ಮಿತ). ಪದ್ಮಾಸನದಲ್ಲಿರುವ ದೇವಿಯ ಚರಣದವರೆಗೂ ಹೂವಿನ ಅಲಂಕಾರವಿತ್ತು.ಹೂ ಹಾರಗಳ ಹಿಂದೆ ಮುದ್ದಾಗಿ ಹಿಡಿದ ಕಿರು ನಿರಿಗೆಗಳ ಸೀರೆ ಅಲ್ಲಲ್ಲಿ ಇಣುಕುತ್ತಿತ್ತು. ನಾಲ್ಕು ಕೈಗಳಲ್ಲಿ ಹೂವಿಡಿದ ಮತ್ತು ಕಬ್ಬಿನ ಜಲ್ಲೆ ಹಿಡಿದ ಕೈ ಮಾತ್ರ ಕಾಣಿಸುತ್ತಿತ್ತು. ಮತ್ತೆರಡು ಕೈಗಳು ಹೂವಿನಲಂಕಾರದಲ್ಲಿ ಮರೆಯಾಗಿತ್ತು.
ಮನಸ್ಸಂತೂ ಧನ್ಯತೆಯ ಪರಾಕಾಷ್ಟೆ ಸೇರಿತ್ತು. ಮಗಳ ಪದವಿ ವಿದ್ಯಾಭ್ಯಾಸ ಆರಂಭದ ಮುನ್ನ ವಾಗ್ದೇವಿ ವಿದ್ಯೇಶ್ವರಿಯ ಇಂಥ ದರ್ಶನ ಭಾಗ್ಯ ಯಾರಿಗುಂಟು!! ನಾವೇ ಧನ್ಯರು!!
ಪ್ರದಕ್ಷಿಣೆಯ ನಂತರ ತುಂಬಾ ಹೊತ್ತು ದೇವಿಯೆದುರು ಕುಳಿತಿದ್ದೆವು. ಅವಳನ್ನು ಕೇಳುವುದೇನೆಂದು ತೋಚದೆ, ಅವಳ ಲಾವಣ್ಯವನ್ನಷ್ಟೆೇ ಮನಸ್ಸು ಸ್ಮರಿಸುತ್ತಿತ್ತು.
ಮರುದಿನ ಕಾಲೇಜಿಗೆ ಹೊರಡುವ ಮನ್ನ, ಏಕಾಂಬರ ನಾಥನ ಮತ್ತು ವೈದ್ಯರ ಆರಾಧ್ಯ ದೈವ ನಾರಾಯಣ ರೂಪಿ ಧನ್ವಂತರಿಯ ದರ್ಶನ ಮಾಡಿ ಹೊರಟೆವು. (ನನ್ನ ಕಾಲು ನೋವಿಗೇನಾದರೂ ಪರಿಹಾರವುಂಟೆೇ ಎಂದು ಕೇಳುವುದನ್ನು ಮರೆಯಲಿಲ್ಲ). ದಾರಿಯಲ್ಲಿ ನಾ ತರಂಗದಲ್ಲಿ ಓದಿದ್ದ ಕಥೆಯನ್ನೆಲ್ಲಾ ಅವರಿಬ್ಬರಿಗೂ ಒಪ್ಪಿಸದೆ ಬಿಡಲಿಲ್ಲ.
No comments:
Post a Comment