Wednesday, February 19, 2025

ಪ್ರಯಾ(ಯೋ)ಗ

ಇದ್ದೂರಿನ  ಕಡೆಲೆಕಾಯಿ ಪರಿಷೆಗಾಗಲೀ. ಷಷ್ಠಿಗಳಲ್ಲಿ ನಡೆಯುವ ರಥೋತ್ಸವಗಳಿಗಾಗಲಿ ಹೋಗದ ನಾನು ಸೀದಾ ಕುಂಭಮೇಳಕ್ಕೆ ಹೋಗುವ ಪ್ರೇರಣೆಯಾಗಿದ್ದು ಈಶ್ವರನಿಚ್ಛೆಯೇ ಸರಿ! ನಾವು ಶ್ರೀರಾಮನ ಪಟ್ಟಾಭಿಷೇಕಕ್ಕೆ ನದೀ ಜಲ ಸಂಗ್ರಹಣೆಗಾಗಿ ಹಿಂದೊಮ್ಮೆ (ಕುಂಭಮೇಳ ನಡೆಯುತ್ತಿದ್ದರ ಬಗ್ಗೆ ಅರಿವಿಲ್ಲದೆ) ಹರಿದ್ವಾರದ ಕುಂಭಮೇಳಕ್ಕೆ ಹೋಗಿದ್ದುಂಟು. ಜನಜಂಗುಳಿಯ ಕಂಡು ದಿಗ್ಭ್ರಮೆಯಾಗಿದ್ದೂ ಉಂಟು. ಇನ್ನೆಂದಿಗೂ ಕುಂಭಮೇಳದ ಸಹವಾಸ ಬೇಡೆಂದು ಪ್ರತಿಜ್ಞೆ ಮಾಡಿದ್ದಕ್ಕೆ ಗಂಗೆಯೇ ಸಾಕ್ಷಿ!!

ಡಿಸೆಂಬರ್ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿರುವ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಹೋದಾಗಲೂ, ಗಂಟೆಗಳ ಗಟ್ಟಲೆ ಸಾಲಿನಲ್ಲಿನಿಂತು ರೋಸಿ ಇನ್ನೆನ್ನೆಂದಿಗೂ ರಜಾದಿನಗಳಲ್ಲಿ ಯಾತ್ರೆಯೇ ಮಾಡಬಾರದೆಂದು ತೀರ್ಮಾನಿಸಿ ಹಿಂದಿರುಗಿದ್ದೂ ನಿಜ. ಅಷ್ಟಲ್ಲದೇ ವೈಕುಂಠ ಏಕಾದಶಿಯ ದಿನ ದೇವಸ್ಥಾನಕ್ಕೆ ಹೋಗಲು ಜನ ಕಡಿಮೆಯಾಗುವ ಹೊತ್ತಿಗೇ ಕಾದುಕಾದುದೇವಸ್ಥಾನ ಮುಚ್ಚುವ ಸುಮಾರಿಗೆ ಹೋಗಿ ದರ್ಶನ ಮಾಡಿ  ಬರುವ ಸಂಪ್ರದಾಯದ ನಾನು ಕುಂಭಮೇಳಕ್ಕೆ ಹೋಗಿ ಬಂದದ್ದು ಆಶ್ಚರ್ಯವೇ!! 

 ಕುಂಭಮೇಳ ಯಾತ್ರೆಯ ನಮ್ಮ ಮೊದಲ ಹೆಜ್ಜೆ ವಾರಣಾಸಿಗೆ. ಅಸ್ಸಿ ಘಾಟ್ ಬಳಿ ಸಂಧ್ಯಾ ಸಮಯದಲ್ಲಿ ಗಂಗಾಸ್ನಾನ ಮಾಡಿ, ರಾಮೇಶ್ವರದ ಮರಳಲ್ಲಿ ಮಾಡಿದ ಲಿಂಗವನ್ನು ಪೂಜಿಸಿ ಗಂಗೆಯಲ್ಲಿ ಬಿಟ್ಟು, ಗಂಗಾರತಿ ವೀಕ್ಷಿಸಿ ವಿಶ್ವನಾಥನ ದರ್ಶನಕ್ಕೆ ಆಟೋ ಹಿಡಿದು ಹೋದರೆ….ಊರೆಲ್ಲಾ ತಿರುಗಿಸಿ ೪೦೦ ರೂಪಾಯಿ ತಗೊಂಡು ಒಂದು ಕಿಮೀ ದೂರದಲ್ಲಿ ನಿಲ್ಲಿಸಿದಅಸಾಧ್ಯ ಜನ ಸಮೂಹವನ್ನು ಭೇದಿಸಿ ಕೊಂಡು ದರ್ಶನದ ಸಾಲನ್ನು ಸೇರಲು ಸಾಗಿದರೆ.,ಕೊನೆಯಿಲ್ಲದ ಭಕ್ತ ಬಂಧುಗಳು. ಪೊಲಿಸ್ ಒಬ್ಬರು ಈಗ ದರ್ಶನ ಸಾಧ್ಯವೇ ಇಲ್ಲ..ಬೆಳಗ್ಗೆ ಗಂಟೆಗೆ ಬನ್ನಿರೆಂದರು. ಮತ್ತೆ ಆಟೋ ಹಿಡಿಯದೆ ಹೊಟೆಲ್ಗೆ ನಡೆದೆವು

 ಬೆಳಗ್ಗೆ ನಾಲ್ಕರವೇಳೆಗೆ ಮತ್ತೆ ಸಾಲು ಸೇರಿ ಸತತ ಐದು ಗಂಟೆಗಳು ಸಾಲಿನಲ್ಲಿ ಸಾಗಿ ವಿಶ್ವನಾಥನ ದರ್ಶನ ಮಾಡಿದೆವು. ಸೂರ್ಯೋದಯ ಕೆಂಪು ಗಂಗೆಯನ್ನಾವರಿಸಿ, ಅವಳು ಅಪರೂಪದ ಸುಂದರಿಯಾಗಿದ್ದಳು. ಅಲ್ಲಲ್ಲಿ ತೇಲಾಡುವ ದೋಣಿಗಳು, ಹಾರಾಡುವ ಪಕ್ಷಿ ಸಂಕುಲ..ದೇವರ ದರ್ಶನಕ್ಕೆ ಬೇಕಾದ ಮನೋಭಾವವನ್ನು ಭಕ್ತರಲ್ಲಿ ಇಮ್ಮಡಿಸುತ್ತಿತ್ತು.

ಗಂಗೆಯ ಸೌಂದರ್ಯವೇ ಸೌಂದರ್ಯ. ಶಿವನ ದರ್ಶನ ನಂತರ ಮತ್ತೆ ಗಂಗಾ ಘಾಟ್ಗಳ ಮುಖಾಂತರ ಹೊರಗೆ ಬರುವಾಗ, ಸೂರ್ಯನ ಕಿರಣಗಳು ಗಂಗೆಯ ತರಂಗಗಳಲ್ಲಿ ಪ್ರತಿಫಲಿಸಿ ಮಿಂದೇಳ್ವ ನಕ್ಷತ್ರಗಳಂತೆ ಮಿನುಗುತ್ತಿದ್ದವು (ಅಸಂಖ್ಯ ಭಕ್ತರನ್ನು ಬಿಸಿಲಲ್ಲಿ ಬಳಲಿಸುವ ಪಾಪವನ್ನು ತೊಳೆದು ಕೊಳ್ಳುವಂತೆ!). 

ಮತ್ತೆ ಸಂಜೆ ಗಂಗಾರತಿ ನೋಡಿ, ಸಂಕಟ ಮೋಚನ ಹನುಮಾನನನ್ನುನೋಡಿ ಬಂದು  ಮರುದಿನದ ಪ್ರಯಾಣಕ್ಕೆ ತಯಾರಿ ಮಾಡಿದೆವು.

ಕಾಶಿಯಲ್ಲಿನ ಭಕ್ತಜನ ಸ್ತೋಮ ಪ್ರಯಾಗದ ಪ್ರಯಾಣಕ್ಕೆ ಹುಮ್ಮಸ್ಸನ್ನು ಹೆಚ್ಚಿಸಿತೇ ವಿನಃ ಆತಂಕ ಮೂಡಿಸಲಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದೇ, ಬರಿಗಾಲಲ್ಲಿ, ಒಂದು ಕಂಕುಳಲ್ಲಿ ಮಗು ಮತ್ತೊಂದರಲ್ಲಿ ಬಟ್ಟೆಯ ಚೀಲ, ತಲೆಯ ಮೇಲೆ ಹೊದಿಕೆಗಳ ಗಂಟು ಹೊತ್ತು , ಹರಹರ ಮಾದೇವ ಎಂದು ನಿರಂತರ ಕೂಗುತ್ತಾ ಈಶ್ವರನ ದರ್ಶನ ಮಾಡಿ ಬಂದವರ ಮುಖದ ಮೇಲಿನ ಸಾರ್ಥಕತೆ ನಿಜಕ್ಕೂ ಹೃದಯಂಗಮ

ಮರುದಿನ ಬೆಳಗಿನಜಾವಕ್ಕೆ ಕಾಶಿಯಿಂದ ಹೊರಟು..ಅಲ್ಲಲ್ಲಿ ರಸ್ತೆ ತಡೆಗಳನ್ನು ದಾಟಿ ಎಂಟು ಗಂಟೆ ವೇಳೆಗೆ ಸೆಕ್ಟರ್ ೨೨ರ ಪಾರ್ಕಿಂಗ್ ತಲುಪಿದೆವು. ಸಂಗಮದಿಂದ ನಾಲ್ಕು ಕಿಮೀ ಅಂತರದವರೆಗೆ ಆಟೋ ಸಹಾಯ ಪಡೆಯಬೇಕಾಯಿತು. ನಂತರ ಸಂಗಮ ಸಿಗುವವರೆಗೂ ನಡುಗೆಯಲ್ಲಿ ಸಾಗಿ ಹನ್ನೊಂದರ ವೇಳೆಗೆ ಸಂಗಮ ಸ್ನಾನ ಮುಗಿಸಿ ಹಿಂದಿರುಗಿದೆವು

ಗಂಗಾ ಯಮುನಾ ಸರಸ್ವತಿ ಸಂಗಮ ಸಾಗರ ಸೇರಲು ದೌಡಾಯಿಸುತ್ತಿದ್ದರೆ ಇತ್ತ ಬಂದ ಭಕ್ತಸಾಗರ ಸಂಗಮದ ದಂಡೆಗೆ ಧಾವಿಸಿ ಬರುತ್ತಿದ್ದುದೂಂದು ಅಪರೂಪದ ದೃಶ್ಯ.

ಮಹಾಕುಂಭಕ್ಕೆ ಹೊರಡುವ ಮುನ್ನ  “ಅಲ್ಲಿ ವಿಪರೀತ ಜನ, ಕೊಳಕು, ನೂಕು ನುಗ್ಗಲು..ಊಟವಿಲ್ಲಕಳ್ಳರು..ಭಿಕ್ಷುಕರು..” ಹೀಗೆ ಸುಮಾರು ಅಭಿಪ್ರಾಯಗಳುಟೀಕೆ ಟಿಪ್ಪಣಿಗಳನ್ನು ಕೇಳಿದ್ದೆ. ಸುಳ್ಳೇನಲ್ಲ!  ಕೋಟ್ಯಾಂತರ ಜನ ಸೇರುವ ಜಾಗದಲ್ಲಿ ಈ ಸಮಸ್ಯೆಗಳು ಸಾಮಾನ್ಯವೇ.  ಭಕ್ತರ ಶ್ರದ್ಧೆ, ಭಕ್ತಿ, ನಂಬಿಕೆ ಲೆಕ್ಕಿಸದೆ ಬೇರೆಲ್ಲಾ ಕಣ್ಣಾಡಿಸಿದರೆ ಅತೃಪ್ತರಾದೇವು. ಮನಸ್ಸಿನಂತೆ ಮಹದೇವ!

 ಅಂತೂ ನಮ್ಮ ಪ್ರಯಾಗದ ಪ್ರಯೋಗ ಸುಸಂಪನ್ನ! ಇನ್ನು ಅಯೋಧ್ಯೆಯ ಭೇಟಿಯೊಂದು ರಾಮಾಯಣವೇ! ಅದು ಇನ್ನೊಂದು ಬರಹಕ್ಕೆ ಸರಕು. 

No comments:

Post a Comment