ನದಿಗಳೆಂದರೆ ನನಗೆ ವಿಪರೀತ ಕುತೂಹಲ. ಬಾಲ್ಯದಿಂದಲೂ ಕಲಶಾರಾಧನೆಯ ಮಂತ್ರದಲ್ಲಿ ಸಪ್ತ ನದಿಗಳ ಆವಾಹನೆಯನ್ನು ಕೇಳಿದ್ದೇ ವಿನಾ ಅವುಗಳನ್ನು ನೋಡುವ ಅವಕಾಶ ಮದುವೆಯ ನಂತರವೇ. ನದಿಮೂಲ ಋಷಿಮೂಲ ಹುಡುಕಬಾರದೆಂಬ ಗಾದೆ ಇದ್ದರೂ, ಬಹುತೇಕ ನದಿಗಳು ಹಿಮಾಲಯದಲ್ಲೇ ಹುಟ್ಟಿ ಅಲ್ಲಿಂದಲೇ ಇಳಿಯುತ್ತವೆಯಂತೆ ಎಂದು ಕಥೆಗಳಲ್ಲಿ ಕೇಳಿದ್ದೆ. ಕಾವೇರಿ ನದಿ ಕೂಡ ಅದೆಲ್ಲೋ ಇದೆ ಎಂಬ ಭ್ರಮೆ ಅದನ್ನು ಕಣ್ಣಾರೆ ನೋಡುವವರೆಗೂ ಹೋಗಿರಲಿಲ್ಲ. ಚಿಕ್ಕಂದಿನಲ್ಲಿ ತಿರುಪತಿ ಬಿಟ್ಟರೆ ಬೇರೆ ಜಾಗ ನೋಡಿದ್ದೂ ಇಲ್ಲ. ಮಕ್ಕಳನ್ನೆಲ್ಲ ಅಷ್ಟಾಗಿ ಊರು ಸುತ್ತಿಸುತ್ತಿಲಿಲ್ಲ, ದೊಡ್ಡವರು ಕೂಡ ಅನಿವಾರ್ಯವಲ್ಲದೆ ಪ್ರಯಾಣವನ್ನೇ ಮಾಡುತ್ತಿರಲಿಲ್ಲ. ಊರಿನ ಸುತ್ತಮುತ್ತಲ ದೇವಸ್ಥಾನಕ್ಕೆ ಆಗಾಗ ಹೋಗಿಬರುವುದಿತ್ತು. ನಾಗಲಮಡಿಕೆಯ ಜಾತ್ರೆಗೆ ಹೋಗುತ್ತಿದ್ದದ್ದು ತುಂಬಾ ನೆನೆಪಿದೆ, ಅಲ್ಲಿ ಮಡೆ ಹೊರಳುವ ಪದ್ಧತಿ ಇದ್ದದ್ದರಿಂದ ನಾವು ಊಟಕ್ಕೆ ಕೈ ಹಾಕಿದ್ದೇ,ಎಲೆ ಗಳನ್ನು ಕಸಿದು ಕೊಂಡು ಹೋಗುತ್ತಿದ್ದರು. ಅಲ್ಲಿ ಅಮ್ಮ ಇದು ಉತ್ತರ ಪಿನಾಕಿನಿ ನದಿ ಎಂದು ದೇವಸ್ಥಾನದ ಹಿಂಭಾಗ ತೋರಿಸುತ್ತಿದ್ದಳು. ಮಳೆ ನಮ್ಮಕಡೆ ಕಡಿಮೆಯಾದ್ದರಿಂದ ನದಿಯ ಕಾಲುವೆ ನಾ ನೋಡಿದಾಗಲೆಲ್ಲಾ ಒಣಗಿರುತ್ತಿತ್ತು.
ಅದು ಬಿಟ್ಟರೆ ನಾ ಕಂಡ ಮೊದಲ ನದಿ ಶೃಂಗೇರಿಯ ತುಂಗೆ. ನಾನಗಲೇ ಪಿಯುಸಿ ಓದುತ್ತಿದ್ದೆ. ಮನೆ ಮಂದಿಯೆಲ್ಲ ಹತ್ತುದಿನಗಳ ಪ್ರವಾಸ ಮಾಡಿದ್ದೆವು. ಹೈಸ್ಕೂಲ್ನಲ್ಲಿದ್ದಾಗ ಶಾಲಾ ಪ್ರವಾಸದಲ್ಲಿ ಶೃಂಗೇರಿಗೆ ಹೋಗಿದ್ದರೂ, ಅಲ್ಲಿ ತುಂಗೆಯನ್ನು ನಮಗೆ ತೋರಿಸಿ ಹೇಳುವವರ್ಯಾರಿದ್ದರು? ಮುಂದಿನ ಊರಿಗೆ ಹೋಗುವ ಆತುರವಷ್ಟೇ. ಆಗ ಧರ್ಮಸ್ಥಳದ ನೇತ್ರಾವತಿಯನ್ನು ಬಸ್ಸಿನಿಂದಲೇ ತೋರಿಸಿದ್ದರು. ಆನಂತರ ನೋಡಿದ್ದು ಕಾವೇರಿಯನ್ನು. ಆಶ್ಚರ್ಯವೆಂದರೆ ಮೊದಲು ಭಾಗಮಂಡಲ ನೋಡಿದಮೇಲೆ ಶ್ರೀರಂಗಪಟ್ಟಣದಲ್ಲಿ ಕಾವೇರಿಯನ್ನು ನೋಡಿದ್ದು. ಪತ್ರಿಕೆಗಳಲ್ಲಿ ಕಾವೇರಿಯ ವಿವಾದವನ್ನು ಅತಿಯಾಗಿ ಓದುತ್ತಿದ್ದವಳಿಗೆ ಭಾಗಮಂಡಲಕ್ಕೆ ಹೋದಾಗ ನಮ್ಮ ಕಾವೇರಿಯೆಂಬ ಹೆಮ್ಮೆಯ ಅನುಭೂತಿ ಮರೆಯಲಾಗದ್ದು. ನನ್ನ ಮಗಳು ಹುಟ್ಟಿದ ಮೇಲೆ ಪ್ರವಾಸಗಳ ಸುವರ್ಣಯುಗ. ಮೈಸೂರು ಸುತ್ತಮುತ್ತ ಬೇಕಷ್ಟು ಬಾರಿ ಸುತ್ತಿದ್ದೇವೆ. ಸುತ್ತಮುತ್ತ ರಾಜ್ಯಗಳ ಸ್ಥಳಗಳಿಗೆ ಪ್ರವಾಸಗಳೂ ಒದಗಿಬಂದವು. ಗೋದಾವರಿಯ ದರ್ಶನವೂ ಭದ್ರಾಚಲದ ರಾಮನ ಅನುಗ್ರಹದಿಂದ.
೨೦೨೧ರ ವರೆಗೂ ನಾ ನೋಡಿದ್ದು , ಕಾವೇರಿ, ತುಂಗೆ, ನಂಜನಗೂಡಿನ ಕಪಿಲ, ಜೋಗಿನ ಶರಾವತಿ ಮತ್ತು ನೇತ್ರಾವತಿ. ಶ್ಲೋಕದಲ್ಲಿ ಬರುವ ಸಪ್ತ ನದಿಗಳ ಪಟ್ಟಿಯಲ್ಲಿ ಕಾವೇರಿ ಮತ್ತು ಗೋದಾವರಿಯಷ್ಟೇ. ೨೦೨೧ರಲ್ಲಿ ಶ್ರೀರಾಮ ಪಟ್ಟಾಭಿಷೇಕಕ್ಕಾಗಿ ಗಂಗೆಯನ್ನು ತರುವ ಮನಸ್ಸಾಯಿತು. ಮನೆಯಲ್ಲಿ ಗಂಗೆ ತಂಬಿಗೆಯಲ್ಲಿ ಇದ್ದರೂ(ಅಮ್ಮ ಕಾಶಿಗೆ ಹೋದಾಗ ತಂದಿದ್ದು) , ಹರಿದ್ವಾರದಿಂದ ನದಿ ನೀರು ಮತ್ತು ಮೃತ್ತಿಕೆ ತರಲು ಹೋದೆವು. ಅದೇನೋ ದೆಹಲಿ ಏರ್ಪೋರ್ಟ್ನಲ್ಲಿ ಅಯೋಧ್ಯೆಗೆ ಹೋಗಿ ಸೀತಾ ಕುಂಡದಿಂದ (ರಾಮನ ಪಟ್ಟಾಭಿಷೇಕಕ್ಕಾಗಿ ವಾನರರು ಸಂಗ್ರಹಿಸಿದ ಸಪ್ತ ಸಾಗರದ ಮತ್ತು ಸಪ್ತ ನದಿಗಳ ಜಲ) ನೀರು ತರುವ ಪ್ರೇರಣೆಯಾಗಿ, ಅಲ್ಲಿಂದಲೇ ಲಕ್ನೋಗೆ ಹೋಗಿದ್ದೆವು. ಅಯೋಧ್ಯೆಯನ್ನು ಸುತ್ತುವರಿಯುವ ಸರಯು ನದಿ ದರ್ಶನ ಮತ್ತು ಮೃತ್ತಿಕಾ ಸ್ನಾನವೊಂದು ವಿಶೇಷ ಅನುಭವ. ಆನಂತರ ಹರಿದ್ವಾರದಲ್ಲಿ ಗಂಗಾ ದರ್ಶನ. ಹರಿದ್ವಾರವನ್ನು ಏಳುಬಾರಿ ಸುತ್ತುವ ಗಂಗೆ, ಹರ್ ಕಿ ಪೌಡಿಯಲ್ಲಿ ಧಡ ಧಡ ಹರಿಯುವುದನ್ನು ನೋಡಿ ಚಕಿತಳಾಗಿದ್ದೆ. ಹಿಮಾಲಯ ಬಿಟ್ಟು ಮುನ್ನೂರು ಕಿಲೋಮೀಟರ್ ಬಂದರೂ ನದಿಯು ಮಂಜಿನಂಥ ತಣುವನ್ನು ಉಳಿಸಿಕೊಂಡಿರುವುದು ಬಲು ಆಶ್ಚರ್ಯ, ಅದೂ ಹರಿದ್ವಾರದ ಕೆಟ್ಟ ಬಿಸಿಲಿನಲ್ಲಿ.
೨೦೨೩ರಲ್ಲಿ ವಾರಣಾಸಿಯಲ್ಲಿ ಗಂಗೆಯನ್ನು ನೋಡಿ ಎಲ್ಲಾ ನದಿಗಳನ್ನೂ ನೋಡಿದಷ್ಟೂ ತೃಪ್ತಿ. ಪ್ರಯಾಗರಾಜ್ ನಲ್ಲಿ ಗಂಗೆ ಯಮುನೆ ಮತ್ತು ಸರಸ್ವತಿಯ ಸಂಗಮವನ್ನು ನೋಡಿಬಂದೆವು. ಮತ್ತೆ ೨೦೨೪ರಲ್ಲಿ ಆ ವಿಶ್ವನಾಥನ ಅನುಗ್ರಹವೇ, ಚಾರ್ಧಾಮ್ ಯಾತ್ರೆಯ ಸಂಕಲ್ಪ. ಹರಿದ್ವಾರದಿಂದ ಗಂಗಾ ಸ್ನಾನ ಮಾಡಿಯೇ ಯಾತ್ರೆ ಪ್ರಾರಂಭವಾಗಿದ್ದು. ಯಾತ್ರೆಯ ಭಾಗವಾಗಿ ಬದರಿ ನಾರಾಯಣನ ದರ್ಶವಷ್ಟೇ ಪ್ರಾಪ್ತವಾಗಿದ್ದು. ಆದರೆ, ಬದ್ರಿಗೆ ಹೋಗುವ ದಾರಿಯಲ್ಲಿ ಗಂಗೆಯ ಸೇರುವ ಮಂದಾಕಿನಿ, ಅಲಕಾನಂದ, ಭಾಗೀರಥಿ ನದಿಗಳನ್ನೂ ಮತ್ತವರ ಸಂಗಮಗಳನ್ನು ದರ್ಶಿಸುವ ಭಾಗ್ಯ ನಮ್ಮದಾಗಿತ್ತು.ಜೊತೆಗೆ ಪಂಚ ಕೇದಾರಗಳಲ್ಲಿ ಒಂದಾದ ತುಂಗನಾಥ, ಕಲ್ಪೇಶ್ವರ ,ಓಂಕರೇಶ್ವರ ಮತ್ತು ಗೋಪೇಶ್ವರದಂಥ ಅಪರೂಪದ ಈಶ್ವರನ ಸನ್ನಿಧಾನಗಳನ್ನು ನೋಡಿ ಧನ್ಯರಾಗಿದ್ದೊಂದು ಭಾಗ್ಯ.
೨೦೨೫ರ ಯಾತ್ರೆ ಸಂಪೂರ್ಣ ಚಾರ್ಧಾಮ ಯಾತ್ರೆ. ಗಂಗೋತ್ರಿ ಯಮುನೋತ್ರಿ ಯ ಭೇಟಿ ನನ್ನ ನದಿಮೂಲದ ಕುತೂಹಲಕ್ಕೆ ಉತ್ತರ. ಗಂಗೋತ್ರಿಯಲ್ಲಿ ಭಗೀರಥ ತಪಸ್ಸು ಮಾಡಿದ ಜಾಗವಿದೆ. ಯಾರ ಹಂಗಿಲ್ಲದೆ ತನ್ನಿಷ್ಟಬಂದಂತೆ ಪರ್ವತಗಳ ಬಳಸಿ ಹರಿಯುವ ಭಾಗೀರಥಿಯನ್ನು ಕಣ್ಣುತುಂಬಿಕೊಂಡಿದ್ದು ಈ ಜನ್ಮಕ್ಕೆ ಇಷ್ಟು ಸಾಕು. ಆ ಬಿಳುಪೇನು? ಆ ಬಳುಕೇನು?
ಯಮುನೆಯೂ ಪರ್ವತದ ಇರುಕುಗಳಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ನುಗ್ಗಿ ಬರುತ್ತಾಳೆ. ವಯ್ಯಾರದಲ್ಲಿ, ರಭಸದಲ್ಲಿ ಭಾಗೀರಥಿಗಿಂತ ಕಡಿಮೆಯೇನಲ್ಲ. ಕೃಷ್ಣನ ಪಾದ ಸೋಕಲು ಮಥುರೆಗೆ ಓಡೋಡಿ ಬರುವ ಯಮುನೆಯ ಸೊಗಸು ವರ್ಣನೆಗೆ ಮೀರಿದ್ದು. ಇನ್ನು ಮಂದಾಕಿನಿಯು ಅದೆಲ್ಲಿ ಹುಟ್ಟುವಳೋ!!(ರೂಪ ಕುಂಡದ ಬಳಿ ಅಂತೆ) ಕೇದಾರನಾಥವೆಂಬ ಕೈಲಾಸದಲ್ಲಿ ಸದಾ ಈಶ್ವರನ ಸಾನಿಧ್ಯದಲ್ಲಿರುವವಳು. ಮಂದಾಕಿನಿಯ ನಡೆ ಲಯಬದ್ಧ, ಒಂದೇ ತೆರನಾದ ಹರಿವು. ಅದು ಓಂ ನಮಃ ಶಿವಾಯ ಪಂಚಾಕ್ಷರಿಯನ್ನು ಸಮಾನ ಗತಿಯಲ್ಲಿ ಧ್ಯಾನಿಸಿದಂತೆ. ನಾವು ಗೌರಿಕುಂಡದಿಂದ ಬದರಿ ದಾರಿ ಹಿಡಿದರೆ ನಮ್ಮನ್ನು ಬೀಳ್ಕೊಡಲು ರುದ್ರಪ್ರಯಾಗದವರೆಗೂ ಬರುತ್ತಾಳೆ.
ಅಲಕಾನಂದ ನದಿ ತಟದಲ್ಲಿಯೇ ಬದರಿ ನಾರಾಯಣನ ಸನ್ನಿಧಿ. ನರ ನಾರಾಯಣ ಪರ್ವತಗಳು ದೇವಾಲಯವನ್ನು ಆವರಿಸಿದಂತೆ ಕಾಣುತ್ತವೆ. ಬದರಿನಾಥ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತಲೆ ಎತ್ತಿ ನೋಡಿದಲ್ಲೆಲ್ಲಾ ಬೆಳ್ಳಿ ಬೆಟ್ಟಗಳು.
ಬದರಿಯಲ್ಲಿ ಎರಡು ನದಿಗಳನ್ನು ನೋಡಬಹುದು, ಅಲಕಾನಂದ ಮತ್ತು ಸರಸ್ವತಿ. ಸರಸ್ವತಿ ನದಿ ಇಲ್ಲಿ ಮಾತ್ರ ನೋಡಲು ಸಾಧ್ಯ. ಸರಸ್ವತಿಯು ಗುಪ್ತಗಾಮಿನಿಯಾಗಿ ಪ್ರಯಾಗ್ರಾಜ್ ನ ತ್ರಿವೇಣಿ ಸಂಗಮ ಸೇರುವಳು. ಅದಕ್ಕೂ ಮುನ್ನ ಬದರಿಯಲ್ಲೇ (ಮಾನ ಎಂಬ ಹಳ್ಳಿಯಲ್ಲಿ) ಕೇಶವ ಪ್ರಯಾಗದಲ್ಲಿ ಅಲಕನಂದೆಯೊಂದಿಗೆ ಲೀನವಾಗುತ್ತಾಳೆ.
ಅಲಕಾನಂದ ಹುಟ್ಟುವುದೂ ಹಿಮಾಲಯದ ಸತೋಪಂತ್ ಎಂಬ ಹಿಮವತ್ಪರ್ವತದಿಂದ. ಅವಳನ್ನು ಸೋಕಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ತಣ್ಣಗಿರುತ್ತಾಳೆ. ನರ ನಾರಾಯಣ ಪರ್ವತದ ತಪ್ಪಲಲ್ಲಿ ನದಿ ಸಮೇತ ದೇವಾಲಯವನ್ನು ನೋಡುವುದು ಕಣ್ಣಿಗೊಂದು ಕಾಣಿಕೆ. ಇವಳೂ ನಮ್ಮನ್ನು ಹರಿದ್ವಾರಕ್ಕೆ ಹಿಂದಿರುಗುವಾಗ ವಿಷ್ಣುಪ್ರಯಾಗದವರೆಗೂ ಹಿಂಬಾಲಿಸಿ ದೌಲಿ ಗಂಗೆಯನ್ನು ಸೇರಿಸಿಕೊಂಡು ಮತ್ತೆ ರುದ್ರಪ್ರಯಾಗದಲ್ಲಿ ಮಂದಾಕಿನಿಯೊಡನೆ ಸಂಗಮವಾಗುತ್ತಾಳೆ. ಅಂತೂ ಶಿವಕೇಶವ ರನ್ನು ನೋಡಿದೆ, ಗಂಗೆಯಾಗಿ ಹರಿಯುವ ಮಂದಾಕಿನಿ ,ಅಲಕಾನಂದ, ಪಿಂಡಾರಿ, ಭಗೀರಥಿ ನದಿಗಳಲ್ಲೂ ನೋಡಿದೆ. ಗಂಗೆ ಯಮುನೆಯರ ಉಗಮ ಸ್ಥಾನ ನೋಡಿದೆ, ಹಿಮಾವತ್ ಪರ್ವತಗಳನ್ನು ನೋಡಿದೆ. ಇವೆಲ್ಲವುಗಳ ಮೋಹಕ ನೋಟ ಪ್ರಯಾಣದ ಆಯಾಸವನ್ನು, ಉಪವಾಸಗಳ ಉಬ್ಬರವನ್ನು ಹೀರುತ ಯಾತ್ರೆಯನ್ನು ಅವಿಸ್ಮರಣೀಯವಾಗಿಸಿತು. ಎಲ್ಲಾ ನದಿಗಳ ನೀರಿನೊಂದಿಗೆ ಧನ್ಯಯತೆಯನ್ನು ಹೊತ್ತು ಮನೆಸೇರಿದೆವು.
No comments:
Post a Comment